ಚಿಕ್ಕಬಳ್ಳಾಪುರ: ಎತ್ತರದ ತೆಂಗಿನ ಮರದಿಂದ ಎಳನೀರನ್ನು ಇಳಿಸುವುದು ಒಂದು ಕೌಶಲ. ಒಣ ಕಾಯಿಯಾದರೆ ಮರದಿಂದ ಬಿದ್ದರೂ ತೊಂದರೆಯಿಲ್ಲ. ಆದರೆ ಎಳನೀರನ್ನು ಗೊನೆ ಸಮೇತ ಹುಷಾರಾಗಿಯೇ ಕೆಳಗಿಳಿಸಬೇಕು. ಅದಕ್ಕೆ ಅನುಭವ ಮುಖ್ಯ.
ಸಾದಲಿ ಹೋಬಳಿ ಎಸ್.ದೇವಗಾ ನಹಳ್ಳಿಯ ವೆಂಕಟೇಶ್ ತೆಂಗಿನ ಮರ ಏರುವುದರಲ್ಲಿ, ಸರಾಗವಾಗಿ ಎಳನೀರಿನ ಗೊನೆಗಳನ್ನು ಇಳಿಸುವುದರಲ್ಲಿ ಸಿದ್ಧಹಸ್ತರು. ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಎಳನೀರು ಇಳಿಸಿ, ಆಟೊದಲ್ಲಿ ತುಂಬಿಕೊಂಡು ನೆರೆಯ ವಿಜಯಪುರದಲ್ಲಿ ಮಾರುವುದೇ ಅವರ ಹೊಟ್ಟೆ ಪಾಡಿನ ಬದುಕು. ಎಳನೀರು ವೆಂಕಟೇಶ್ ಎಂದೇ ಈ ಭಾಗದ ರೈತರಿಗೆ ಚಿರಪರಿಚಿತರು.
‘ಹನ್ನೊಂದು ವರ್ಷಗಳಿಂದ ಎಳೆನೀರು ವ್ಯಾಪಾರ ಮಾಡುತ್ತಿದ್ದೇನೆ. ಸಾದಲಿ ಹೋಬಳಿ ಎಸ್.ದೇವಗಾನ ಹಳ್ಳಿ ನನ್ನ ಮೂಲವಾದರೂ ಮದುವೆ ಯಾಗಿರುವುದು ವಿಜಯಪುರ ದಲ್ಲಿ. ಹಾಗಾಗಿ ಅಲ್ಲಿಯೇ ನೆಲೆಸಿದ್ದೇನೆ. ಮಳೆಗಾಲದಲ್ಲಿ ವ್ಯಾಪಾರ ಕಡಿಮೆ ಅಂದರೆ ಸುಮಾರು 70 ಎಳೆನೀರು ಕೊಚ್ಚುತ್ತೇನೆ. ಅದೇ ಬೇಸಿಗೆಯಲ್ಲಿ 150 ಎಳೆನೀರು ಕೊಚ್ಚುತ್ತೇನೆ. ಈಗ ಒಂದು ಎಳೆನೀರಿಗೆ ₹ 25 ಬೆಲೆಯಿದೆ. ನಾವು ರೈತರಿಂದ ₹10ಕ್ಕೆ ಖರೀದಿಸುತ್ತೇನೆ. ನನ್ನ ಕೂಲಿ, ಆಟೋ ಬಾಡಿಗೆ ಹಾಗೂ ಇತರ ನಷ್ಟವನ್ನು ಎಣಿಕೆ ಹಾಕಿದರೆ ಬರುವ ಲಾಭದಲ್ಲಿ ಜೀವನ ನಡೆಯುತ್ತಿದೆ’ ಎನ್ನುತ್ತಾರೆ ವೆಂಕಟೇಶ್.
‘ಚಿಕ್ಕಂದಿನಲ್ಲಿ ಮರ ಹತ್ತುತ್ತಿದ್ದುದು ಜೀವನಕ್ಕೆ ಸಹಾಯಕವಾಯಿತು. ಹನ್ನೊಂದು ವರ್ಷಗಳಿಂದ ತೆಂಗಿನ ಮರ ಹತ್ತಿಳಿಯುತ್ತಿದ್ದೇನೆ. ಮರದಲ್ಲಿ ಎಳೆನೀರು ಹತ್ತು ಇದ್ದರೂ ಹತ್ತಬೇಕು, ಇಪ್ಪತ್ತಿದ್ದರೂ ಹತ್ತಬೇಕು. ಹಗ್ಗವನ್ನು ಕಟ್ಟಿಕೊಂಡು ಹತ್ತಿ ನಿಧಾನವಾಗಿ ಕೆಳಗಿಳಿಸುತ್ತೇನೆ’ ಎಂದು ಹೇಳುವರು.
‘ಎಲ್ಲರೂ ಎಳೆನೀರು ಮಾರುವುದಿಲ್ಲ. ತೆಂಗಿನಕಾಯಿ ಬೆಲೆ ಹೆಚ್ಚಿರುವುದರಿಂದ ಬಲಿಯಲು ಬಿಡುತ್ತಾರೆ. ಎಳೆನೀರು ಮಾರುವ ಈ ಭಾಗದ ರೈತರ ಸಂಪರ್ಕವಿದೆ. ಅವರ ಮರಗಳಲ್ಲಿ ಕಾಲಕಾಲಕ್ಕೆ ಹೋಗಿ ಎಳೆನೀರು ಕೊಳ್ಳುವೆ’ ಎಂದು ಅವರು ವಿವರಿಸಿದರು.
‘ಎತ್ತರದ ತೆಂಗಿನ ಮರವನ್ನು ಒಮ್ಮೆ ತಲೆ ಎತ್ತಿ ನೋಡಿದರೇ ತಲೆ ಸುತ್ತು ಬರುತ್ತದೆ. ಅಂಥಹುದರಲ್ಲಿ ಆ ಮರವನ್ನು ಮಕ್ಕಳ ಆಟದಂತೆ ವೆಂಕಟೇಶ್ ಸರಾಗವಾಗಿ ಹತ್ತುತ್ತಾರೆ. ತೆಂಗಿನ ಮರ ಹತ್ತಲೆಂದೇ ಈಗ ಯಂತ್ರ ಬಂದಿದೆ. ಆ ಯಂತ್ರ ಅಳವಡಿಸುವಷ್ಟರಲ್ಲಿ ಇವರು ಮರವನ್ನು ಹತ್ತಿಬಿಡುತ್ತಾರೆ. ಇದೂ ಒಂದು ಕೌಶಲ. ತೆಂಗಿನಮರವನ್ನು ಯಂತ್ರ ಬಳಸಿ ಹತ್ತುವವರೇ ಕೆಲವರಿದ್ದಾರೆ. ಅವರು ತೆಂಗಿನಮರದಲ್ಲಿ ತೆಂಗಿನ ಕಾಯಿಯನ್ನು ಇಳಿಸಲು ಒಂದು ಮರಕ್ಕೆ ಎಪ್ಪತ್ತು ರೂಗಳನ್ನು ಪಡೆಯುತ್ತಾರೆ’ ಎಂದು ಅಪ್ಪೇಗೌಡನಹಳ್ಳಿ ಎ.ಎಂ.ತ್ಯಾಗರಾಜ್ ತಿಳಿಸಿದರು.
ಆರೋಗ್ಯಕ್ಕೆ ನೈಸರ್ಗಿಕ ಪಾನೀಯ
ಎಳನೀರು ಆರೋಗ್ಯಕ್ಕೆ ಉತ್ತಮ ನೈಸರ್ಗಿಕ ಪಾನೀಯ. ಇದನ್ನು ಕುಡಿಯುವುದು ದೇಹಕ್ಕೆ ಹಲವು ರೀತಿಯ ಅನುಕುಲ. ದೇಹ ನಿರ್ಜಲೀಕರಣಕ್ಕೊಳಗಾದರೆ ಶಕ್ತಿ ತುಂಬಲು ಎಳನೀರು ಪುಷ್ಠಿದಾಯಕ. ಇದರಲ್ಲಿ ಪೊಟಾಶಿಯಂ ಮತ್ತು ಆ್ಯಂಟಿ ಆಕ್ಸಿಡೆಂಟ್ ಇವೆ. ಹಲವು ಕಾಯಿಲೆಗಳಿಗೆ ದಿವ್ಯೌಷಧಿ. ಮಾರುಕಟ್ಟೆಯಲ್ಲಿ ಲಭ್ಯವಿರುವ ಎನರ್ಜಿ ಡ್ರಿಂಕ್ಸ್ ಮತ್ತು ಹಣ್ಣಿನ ರಸಕ್ಕೆ ಹೋಲಿಸಿದರೆ ಇದರಲ್ಲಿ ಸಕ್ಕರೆ ಅಂಶ ಕಡಿಮೆ ಇದೆ. ದೇಹದಲ್ಲಿ ಎಲೆಕ್ಟ್ರೋಲೈಟ್ ಸರಬರಾಜನ್ನು ಅತ್ಯಂತ ನೈಸರ್ಗಿಕವಾಗಿ ಮಾಡುತ್ತದೆ. ಪಿತ್ತಾಮ್ಲ ತಡೆದು, ಮಲ ಮೂತ್ರ ವಿಸರ್ಜನೆಗೆ ನೆರವಾಗುವುದು. ಮೂತ್ರಕೋಶದಲ್ಲಿನ ಕಲ್ಲು ಕರಗಿಸಲು ಇದು ಸಹಕಾರಿ.
ಡಿ.ಜಿ. ಮಲ್ಲಿಕಾರ್ಜುನ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.