ADVERTISEMENT

ಯೋಜನೆ ವಿಲೀನಕ್ಕೆ ವಿರೋಧ ಮಾಡುವೆ: ಸಚಿವ ಎಂ.ಸಿ.ಮನಗೂಳಿ

ಅಂತರಗಂಗೆ ಸೂಕ್ಷ್ಮ ನೀರಾವರಿ ನಿಗಮದಿಂದ ಹನಿ ನೀರಾವರಿ ಯೋಜನೆ ಅನುಷ್ಠಾನಕ್ಕೆ ವಿರೋಧ

​ಪ್ರಜಾವಾಣಿ ವಾರ್ತೆ
Published 15 ಜೂನ್ 2019, 11:00 IST
Last Updated 15 ಜೂನ್ 2019, 11:00 IST
ಚಿಕ್ಕಬಳ್ಳಾಪುರ ತಾಲ್ಲೂಕಿನ ನಂದಿಬೆಟ್ಟದಲ್ಲಿ ತೋಟಗಾರಿಕೆ ಸಚಿವ ಎಂ.ಸಿ.ಮನಗೂಳಿ ಅವರು ಇಲಾಖೆಯ ಅಧಿಕಾರಿಗಳೊಂದಿಗೆ ಹನಿ ನೀರಾವರಿ ಯೋಜನೆ ಅಂತರಗಂಗೆ ನಿಗಮಕ್ಕೆ ವರ್ಗಾಯಿಸುವುದರ ಸಾಧಕ ಬಾಧಕಗಳ ಕುರಿತು ಚರ್ಚಿಸಿದರು.
ಚಿಕ್ಕಬಳ್ಳಾಪುರ ತಾಲ್ಲೂಕಿನ ನಂದಿಬೆಟ್ಟದಲ್ಲಿ ತೋಟಗಾರಿಕೆ ಸಚಿವ ಎಂ.ಸಿ.ಮನಗೂಳಿ ಅವರು ಇಲಾಖೆಯ ಅಧಿಕಾರಿಗಳೊಂದಿಗೆ ಹನಿ ನೀರಾವರಿ ಯೋಜನೆ ಅಂತರಗಂಗೆ ನಿಗಮಕ್ಕೆ ವರ್ಗಾಯಿಸುವುದರ ಸಾಧಕ ಬಾಧಕಗಳ ಕುರಿತು ಚರ್ಚಿಸಿದರು.   

ಚಿಕ್ಕಬಳ್ಳಾಪುರ: ‘ಅಂತರಗಂಗೆ ಸೂಕ್ಷ್ಮ ನೀರಾವರಿ ನಿಗಮದ ಅಡಿ ತೋಟಗಾರಿಕೆ ಇಲಾಖೆ ಯೋಜನೆಗಳನ್ನು ವಿಲೀನಗೊಳಿಸಲು ವಿರೋಧ ಮಾಡಿಯೇ ತಿರುವೆ. ತೋಟಗಾರಿಕೆ ಇಲಾಖೆ ಸ್ವತಂತ್ರವಾಗಿಯೇ ಇರಬೇಕು. ನಮ್ಮ ಇಲಾಖೆಯ ಯೋಜನೆಗಳು ನಮ್ಮ ಮೂಲಕವೇ ರೈತರಿಗೆ ದೊರೆಯಬೇಕು’ ಎಂದು ತೋಟಗಾರಿಕೆ ಸಚಿವ ಎಂ.ಸಿ.ಮನಗೂಳಿ ತಿಳಿಸಿದರು.

ತಾಲ್ಲೂಕಿನ ನಂದಿಬೆಟ್ಟದಲ್ಲಿ ಶನಿವಾರ ನವೀಕೃತ ನೆಹರೂ ಭವನ ಉದ್ಘಾಟಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ತೋಟಗಾರಿಕೆ ಇಲಾಖೆ ಅನುಷ್ಠಾನಗೊಳಿಸುವ ಹನಿ ನೀರಾವರಿ ಯೋಜನೆಯನ್ನು ಅಂತರಗಂಗೆ ನಿಗಮಕ್ಕೆ ವರ್ಗಾಯಿಸುವ ಬಗ್ಗೆ ಇತ್ತೀಚೆಗೆ ನಡೆದ ಸಭೆಯಲ್ಲಿ ನಾನು ಈ ಪ್ರಸ್ತಾವ ವಿರೋಧಿಸಿದ್ದೇನೆ. ಅದಕ್ಕೆ ನಾವು ಒಪ್ಪಿಲ್ಲ’ ಎಂದು ಹೇಳಿದರು.

‘ಮುಖ್ಯವಾಗಿ ನಮಗೆ ರೈತರು ಅಭಿವೃದ್ಧಿಯಾಗಬೇಕು. ರೈತರಿಗೆ ಸಿಗುವ ಸಸಿಗಳು, ಬೀಜಗಳು ತೋಟಗಾರಿಕೆ ಇಲಾಖೆಯಿಂದಲೇ ಕೊಡಬೇಕು. ಹನಿ ನೀರಾವರಿ ಯೋಜನೆ ಬೇರೆ ಇಲಾಖೆಗೆ ವರ್ಗಾಯಿಸುವುದು ಸರಿಯಲ್ಲ. ರೈತರನ್ನು ಬಿಟ್ಟರೆ ನಮ್ಮ ಇಲಾಖೆಯಲ್ಲಿ ಬೇರೆ ಕೆಲಸವಿಲ್ಲ. ಆದ್ದರಿಂದ ಈ ವಿಚಾರವಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ಪ್ರಧಾನ ಕಾರ್ಯದರ್ಶಿ ಅವರನ್ನು ಭೇಟಿ ಮಾಡಿ, ಹಿಂದಿನಂತೆ ಮುಂದುವರೆಸಿ ಎಂದು ಹೇಳುವೆ’ ಎಂದರು.

ADVERTISEMENT

ತೋಟಗಾರಿಕೆ ಇಲಾಖೆ ಆಯುಕ್ತ ಡಾ.ಎಂ.ವೆಂಕಟೇಶ್‌ ಮಾತನಾಡಿ, ‘ನಂದಿಗಿರಿಧಾಮ ಅಭಿವೃದ್ಧಿ ಪ್ರಾಧಿಕಾರ ರಚನೆ ಕುರಿತಂತೆ ಜಿಲ್ಲಾ ಉಸ್ತುವಾರಿ ಸಚಿವ ಅಧ್ಯಕ್ಷತೆಯಲ್ಲಿ ಸಭೆಯಾಗಿದೆ. ಮುಖ್ಯಮಂತ್ರಿ ಅವರಿಗೆ ಪ್ರಸ್ತಾವನೆ ಸಲ್ಲಿಸಲು ವಿಸ್ತೃತ ಯೋಜನಾ ವರದಿ (ಡಿಪಿಆರ್‌) ಸಿದ್ಧವಾಗುತ್ತಿದೆ. ಮುಖ್ಯಮಂತ್ರಿ ಅವರನ್ನು ಒಂದು ಬಾರಿ ನಂದಿಬೆಟ್ಟಕ್ಕೆ ಕರೆದುಕೊಂಡು ಬಂದು ಈ ಬಗ್ಗೆ ಸಂಪೂರ್ಣ ಮಾಹಿತಿ ಒದಗಿಸಲು ಉದ್ದೇಶಿಸಿದ್ದೇವೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.