ADVERTISEMENT

ಶಿಡ್ಲಘಟ್ಟ | ರಾಮ ಮಂದಿರ ಆವರಣದಲ್ಲಿ ವಾಲ್ಮೀಕಿ ದೇಗುಲ ನಿರ್ಮಾಣಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 16 ಜನವರಿ 2024, 14:26 IST
Last Updated 16 ಜನವರಿ 2024, 14:26 IST
ಶಿಡ್ಲಘಟ್ಟಕ್ಕೆ ಭೇಟಿ ನೀಡಿದ ರಾಜನಹಳ್ಳಿ ಮಹರ್ಷಿ ವಾಲ್ಮೀಕಿ ಗುರುಪೀಠದ  ಪ್ರಸನ್ನಾನಂದಸ್ವಾಮಿ ನಗರದ ವಾಲ್ಮೀಕಿ ಭವನದಲ್ಲಿ ಸಮುದಾಯದ ಮುಖಂಡರ ಸಭೆ ನಡೆಸಿದರು
ಶಿಡ್ಲಘಟ್ಟಕ್ಕೆ ಭೇಟಿ ನೀಡಿದ ರಾಜನಹಳ್ಳಿ ಮಹರ್ಷಿ ವಾಲ್ಮೀಕಿ ಗುರುಪೀಠದ  ಪ್ರಸನ್ನಾನಂದಸ್ವಾಮಿ ನಗರದ ವಾಲ್ಮೀಕಿ ಭವನದಲ್ಲಿ ಸಮುದಾಯದ ಮುಖಂಡರ ಸಭೆ ನಡೆಸಿದರು   

ಶಿಡ್ಲಘಟ್ಟ: ವಾಲ್ಮೀಕಿ ಸಮುದಾಯದ ಪ್ರಮುಖ ಬೇಡಿಕೆಗಳಾದ ನಕಲಿ ಜಾತಿ ಪ್ರಮಾಣ ಪತ್ರ ವಿತರಣೆ ತಡೆಗಟ್ಟುವುದು, ಬುಡಕಟ್ಟು ವಿಶ್ವವಿದ್ಯಾನಿಲಯ ಸ್ಥಾಪನೆ ಸೇರಿದಂತೆ ಅಯೋಧ್ಯೆ ರಾಮಮಂದಿರ ಆವರಣದಲ್ಲಿ ರಾಮಾಯಣ ಕರ್ತೃ ಮಹರ್ಷಿ ವಾಲ್ಮೀಕಿ ದೇವಾಲಯ ನಿರ್ಮಾಣ ಮಾಡುವಂತೆ ವಾಲ್ಮೀಕಿ ಜನಜಾಗೃತಿ ಜಾತ್ರೆಯಲ್ಲಿ ಒತ್ತಾಯ ಮಾಡಲಾಗುವುದು ಎಂದು ರಾಜನಹಳ್ಳಿ ಮಹರ್ಷಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಸ್ವಾಮಿ ಹೇಳಿದರು.

ಮುಂಬರುವ ಫೆ.8 ಮತ್ತು 9ರಂದು ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿರುವ ರಾಜನಹಳ್ಳಿ ಮಹರ್ಷಿ ವಾಲ್ಮೀಕಿ ಗುರುಪೀಠದಲ್ಲಿ ನಡೆಯಲಿರುವ ವಾಲ್ಮೀಕಿ ಜನಜಾಗೃತಿ ಜಾತ್ರಾ ಮಹೋತ್ಸವ ಅಂಗವಾಗಿ ಮಂಗಳವಾರ ನಗರಕ್ಕೆ ಭೇಟಿ ನೀಡಿದ ಶ್ರೀಗಳು ನಗರದ ವಾಲ್ಮೀಕಿ ಭವನದಲ್ಲಿ ಸಮುದಾಯದ ಮುಖಂಡರ ಸಭೆ ನಡೆಸಿ ಮಾತನಾಡಿದರು.

ನಾಡಿನ ಸುಮಾರು 60 ಲಕ್ಷಕ್ಕೂ ಹೆಚ್ಚಿನ ವಾಲ್ಮೀಕಿ ಸಮುದಾಯದವರಿಗೆ ತಮ್ಮದೇ ಆದ ಚಾರಿತ್ರಿಕ ಹಿನ್ನೆಲೆ ಹಾಗೂ ಇತಿಹಾಸವಿದೆ. ಸಮುದಾಯದ ಜನರಲ್ಲಿ ವೈಚಾರಿಕತೆ, ಜಾಗೃತಿ ಮೂಡಿಸುವುದು ವಾಲ್ಮೀಕಿ ಜನಜಾಗೃತಿ ಜಾತ್ರೆ ಪ್ರಮುಖ ಉದ್ದೇಶವಾಗಿದೆ ಎಂದರು.

ADVERTISEMENT

ಜಾತ್ರಾ ಮಹೋತ್ಸವದಲ್ಲಿ ರಾಜ್ಯದ ವಿವಿಧೆಡೆಯಿಂದ ಲಕ್ಷಾಂತರ ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಇದು ಕೇವಲ ಜಾತ್ರೆಯಾಗಿರದೆ ಸಮುದಾಯ ಜಾಗೃತಿ ಮೂಡಿಸುವ ವೇದಿಕೆಯಾಗಬೇಕು. ಅಭಿವೃದ್ಧಿಯಲ್ಲಿ ಹಿಂದುಳಿದಿರುವ ವಾಲ್ಮೀಕಿ (ನಾಯಕ) ಸಮುದಾಯದ ನೋವು ಆಡಳಿತಾರೂಢ ಸರ್ಕಾರಕ್ಕೆ ತಿಳಿಯುವಂತೆ ಮಾಡಬೇಕಾಗಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.

ಅಖಿಲ ಕರ್ನಾಟಕ ವಾಲ್ಮೀಕಿ ಮಹಾಸಭಾದ ಜಿಲ್ಲಾಧ್ಯಕ್ಷ ಬಂಕ್ ಮುನಿಯಪ್ಪ ಮಾತನಾಡಿ, ಸಮುದಾಯದ ಪ್ರತಿಯೊಬ್ಬರೂ ವರ್ಷಕ್ಕೊಮ್ಮೆಯಾದರೂ ಗುರುಪೀಠಕ್ಕೆ ಭೇಟಿ ನೀಡುವುದನ್ನು ರೂಢಿಸಿಕೊಳ್ಳಬೇಕು. ಇದರಿಂದ ರಾಜ್ಯದಾದ್ಯಂತ ಇರುವ ಸಮುದಾಯದವರು ಒಗ್ಗಟ್ಟಾಗಿರಲು ಸಾಧ್ಯವಾಗುತ್ತದೆ ಎಂದರು.

ಜಾತ್ರಾ ಮಹೋತ್ಸವ ಆಚರಣಾ ಸಮಿತಿಗೆ ತಾಲ್ಲೂಕಿನಿಂದ ಐದು ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಸಮುದಾಯದ ಮುಖಂಡರಾದ ಗೊರಮಿಲ್ಲಹಳ್ಳಿ ವೆಂಕಟೇಶ್, ದ್ಯಾವಪ್ಪ, ಜೆ.ಎಂ.ವೆಂಕಟೇಶ್, ಮುಗಿಲಡಿಪಿ ನಂಜಪ್ಪ, ಮುನಿನರಸಿಂಹಪ್ಪ, ನಾರಾಯಣಸ್ವಾಮಿ, ಮುತ್ತೂರು ವೆಂಕಟೇಶ್, ಆನಂದ್, ಶ್ರೀನಾಥ್, ಚಿಂತಡಿಪಿ ಮಾರುತಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.