ಚಿಕ್ಕಬಳ್ಳಾಪುರ: ಇತ್ತೀಚೆಗೆ ಶ್ರೀಲಂಕಾದಲ್ಲಿ ಬಾಂಬ್ ಸ್ಫೋಟ ಪ್ರಕರಣಗಳು ನಡೆದ ಬೆನ್ನಲ್ಲೇ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣ ತಾಲ್ಲೂಕಿನ ನಂದಿ ಗಿರಿಧಾಮಕ್ಕೆ ಬರುವ ಪ್ರವಾಸಿಗರ ಮೇಲೆ ಪೊಲೀಸರು ಮತ್ತು ತೋಟಗಾರಿಕೆ ಇಲಾಖೆ ಸಿಬ್ಬಂದಿ ನಿಗಾ ಇಟ್ಟಿದ್ದಾರೆ.
ನಂದಿಬೆಟ್ಟದ ಪರಿಸರದಲ್ಲಿ ಈ ಹಿಂದೆ ತೋಟಗಾರಿಕೆ ಇಲಾಖೆ 28 ಸಿ.ಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಿತ್ತು. ಇದೀಗ ಆ ಪೈಕಿ 15 ಕ್ಯಾಮೆರಾಗಳನ್ನು ತೆಗೆಸಿ, ರಾತ್ರಿ ವೇಳೆ ಕೂಡ ದೃಶ್ಯಗಳನ್ನು ಸ್ಪಷ್ಟವಾಗಿ ಸೆರೆ ಹಿಡಿಯುವಂತಹ 18 ಅತ್ಯಾಧುನಿಕ ವಿಶೇಷ ಕ್ಯಾಮೆರಾಗಳನ್ನು ಬೆಟ್ಟದ ಪ್ರವೇಶದ್ವಾರ, ವಾಹನ ನಿಲುಗಡೆ ಪ್ರದೇಶ, ವೃತ್ತ, ತಿರುವುಗಳಲ್ಲಿ ಅಳವಡಿಸಿದೆ.
ಮೊದಲಿನಿಂದಲೂ ಬೆಟ್ಟದಲ್ಲಿ ತಲಾ ಒಬ್ಬ ಹೆಡ್ ಕಾನ್‌ಸ್ಟೆಬಲ್ ಮತ್ತು ಕಾನ್‌ಸ್ಟೆಬಲ್ ಭದ್ರತೆಗಾಗಿ ನಿಯೋಜಿಸಲಾಗಿದೆ. ಇದೀಗ ಅವರು ಚುರುಕಾಗಿ ಕೆಲಸ ಮಾಡುತ್ತಿದ್ದು, ಅವರೂ ಸೇರಿದಂತೆ ವಾಹನ ನಿಲುಗಡೆ ತಾಣದ ಸಿಬ್ಬಂದಿಗೆ ಅನುಮಾನಾಸ್ಪದ ವ್ಯಕ್ತಿಗಳು, ವಸ್ತುಗಳ ಮೇಲೆ ನಿಗಾ ಇಡುವಂತೆ ಪೊಲೀಸ್ ಇಲಾಖೆ ಸೂಚಿಸಿದೆ.
ಶ್ರೀಲಂಕಾ ಸ್ಫೋಟದ ಬೆನ್ನಲ್ಲೇ ನಂದಿ ಬೆಟ್ಟದ ಕೆಳಗೆ ಇರುವ ಚೆಕ್‌ಪೋಸ್ಟ್‌ನಲ್ಲಿ ವಾರಾಂತ್ಯದ ದಿನಗಳಲ್ಲಿ ಪೊಲೀಸರು ಪ್ರವಾಸಿಗರ ವಾಹನಗಳನ್ನು ತಡೆದು ದಾಖಲೆಗಳನ್ನು ಪರಿಶೀಲಿಸಿ, ಪ್ರವಾಸಿಗರ ಗುರುತು ಖಚಿತಪಡಿಸಿಕೊಂಡು ಮೇಲೆ ಬಿಡುತ್ತಿದ್ದಾರೆ.
ನಂದಿಬೆಟ್ಟದ ತಪ್ಪಲಿನ ನಂದಿ ಗ್ರಾಮದ ಐತಿಹಾಸಿಕ ಭೋಗನಂದೀಶ್ವರ ದೇವಾಲಯಕ್ಕೆ ಭಕ್ತರನ್ನು ಒಳಗೊಂಡಂತೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಾರೆ. ಹೀಗಾಗಿ, ದೇವಾಲಯದ ಆವರಣದಲ್ಲಿ ಸಹ ಪ್ರವಾಸಿಗರ ಮೇಲೆ ನಿಗಾ ಇಡಲಾಗಿದೆ.
‘ಜಿಲ್ಲೆಯ ಯಾವುದೇ ಪ್ರವಾಸಿ ತಾಣಕ್ಕೆ ಬೆದರಿಕೆ ಇಲ್ಲ. ಅಲ್ಲದೇ, ನಮ್ಮ ಇಲಾಖೆ ವತಿಯಿಂದ ಭದ್ರತೆಯನ್ನು ಹೆಚ್ಚಿಸಿಲ್ಲ. ಎಂದಿನಂತೆ ನಮ್ಮ ಸಿಬ್ಬಂದಿ ಬೆಟ್ಟದಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಭದ್ರತೆ ವಿಚಾರಕ್ಕೆ ಸಂಬಂಧಿಸಿದಂತೆ ವಿವಿಧ ಧಾರ್ಮಿಕ ಸಂಸ್ಥೆಗಳ ಮುಖಂಡರು, ಕಲ್ಯಾಣ ಮಂಟಪಗಳ ಮಾಲೀಕರ ಸಭೆ ಕರೆದು ಸಿ.ಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಿಕೊಂಡು ಮುಂಜಾಗ್ರತೆ ವಹಿಸುವಂತೆ ಸೂಚಿಸಿದ್ದೇವೆ’ ಎಂದು ಎಸ್ಪಿ ಕೆ.ಸಂತೋಷ್ ಬಾಬು ತಿಳಿಸಿದರು.
‘ಬಸ್ ಹಾಗೂ ರೈಲ್ವೆ ನಿಲ್ದಾಣ, ಚರ್ಚ್, ದೇವಸ್ಥಾನ, ಆಸ್ಪತ್ರೆ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಸಂಶಯಾಸ್ಪದವಾಗಿ ಬ್ಯಾಗ್, ಚೀಲಗಳು ಕಂಡುಬಂದಲ್ಲಿ ಸಾರ್ವಜನಿಕರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಬೇಕು’ ಎಂದು ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.