ಹರಿದಾಸ ಪರಂಪರೆ 13 ಮತ್ತು14ನೇ ಶತಮಾನದಲ್ಲಿ ರೂಪುಗೊಂಡಿತು. ಶ್ರೀಪಾದರಾಯರು, ವ್ಯಾಸತೀರ್ಥರು, ವಾದಿರಾಜರು, ಪುರಂದರದಾಸರು ಮತ್ತು ಕನಕದಾಸರು ಈ ಪರಂಪರೆಯನ್ನು ಬೆಳೆಸಿದವರು. ಸಾಹಿತ್ಯ ಲೋಕಕ್ಕೆ ಇವರು ನೀಡಿದ ಅತ್ಯಮೂಲ್ಯ ಕಾಣಿಕೆಯೇ `ದಾಸ ಸಾಹಿತ್ಯ'. ಈ ಪರಂಪರೆಯ ಕೊಂಡಿಯಂತೆ ಇದ್ದವರು ಶಿಡ್ಲಘಟ್ಟ ತಾಲ್ಲೂಕಿನ ಗಂಜಿಗುಂಟೆ ಗ್ರಾಮದ ನರಸಿಂಹ ಅಂಕಿತರಾದ ಜಿ.ಎಸ್.ನರಸಿಂಹಮೂರ್ತಿ. ಕನ್ನಡ ಸಾಹಿತ್ಯದ ಪ್ರಮುಖ ವಾಹಿನಿಗಳಲ್ಲೊಂದಾದ `ಹರಿದಾಸ ಸಾಹಿತ್ಯ' ಇಂದಿಗೂ ಜೀವಂತವಾಗಿದೆ ಎಂಬುದಕ್ಕೆ ಅವರ ಕೀರ್ತನೆಗಳೇ ಸಾಕ್ಷಿ. ಅವರೀಗ ನಮ್ಮಡನಿರದಿದ್ದರೂ ಅವರ ಸಾಹಿತ್ಯ ರಚನೆ ಮತ್ತು ಕೀರ್ತನೆ ಈಗಲೂ ಜೀವಂತವಿದೆ.
ಜೀವನದ ಬಹುಕಾಲ ಗಂಜಿಗುಂಟೆಯಲ್ಲಿ ಕಳೆದ ಅವರು ಕುಲದೈವ ಗಂಜಿಗುಂಟೆ ನರಸಿಂಹನನ್ನು ತಮ್ಮ ಹಲವು ರಚನೆಯಲ್ಲಿ ಕೊಂಡಾಡಿದ್ದಾರೆ. ಅವರ ರಚನೆಗಳಲ್ಲಿ ವಿಶೇಷಾರ್ಥ ಪದಗಳಿವೆ. ಮಂಡಿಗೆಗಳೆಂಬ ಗೂಢಾರ್ಥದ ಪದಗಳಿವೆ. ಅದ್ಭುತ ಪ್ರಾಸಗಳಿವೆ, ಸಂಖ್ಯಾ ಒಗಟುಗಳಿವೆ, ಸ್ತುತಿ ಪದಗಳಿವೆ, ನಿಂದಾ ಸ್ತುತಿಗಳೂ ಇವೆ. ಸಂಗೀತಕ್ಕೆ ಹೊಂದುವಂತಹ ಗುಣ ಅವರ ರಚನೆಗಳ ವೈಶಿಷ್ಟ್ಯ. ಭಕ್ತಿಯ ಆರಾಧನೆ, ವಿಲಂಬಿತ ತ್ವರಿತ ಬಂಧಗಳ ಬಿಗಿ ಮತ್ತು ಅವರಿಗೆ ಸಂಗೀತ ಜ್ಞಾನವೂ ಇದ್ದಿದ್ದರಿಂದ ತಮ್ಮ ರಚನೆಗಳಿಗೆ ರಾಗವನ್ನೂ ಸಂಯೋಜಿಸಿದ್ದಾರೆ. ಸಾಹಿತ್ಯ ಲೋಕಕ್ಕೆ ಅನರ್ಘ್ಯ ಕೊಡುಗೆಗಳಾದ ಅವರ ರಚನೆಗಳನ್ನು ಅರ್ಥೈಸಿಕೊಳ್ಳುವುದೆಂದರೆ ಪುರಾಣಗಳನ್ನು ಓದಿ ಮನನ ಮಾಡಿದಂತೆ.
ಶಿಡ್ಲಘಟ್ಟ ತಾಲ್ಲೂಕಿನ ಗಂಜಿಗುಂಟೆ ಗ್ರಾಮದ ಅಚ್ಚಮ್ಮ ಮತ್ತು ಶಾಮರಾಯ ದಂಪತಿಗೆ 1926ರ ಅಕ್ಟೋಬರ್ 25ರಂದು ಜನಿಸಿದ ಜಿ.ಎಸ್.ನರಸಿಂಹಮೂರ್ತಿ ಚಿಕ್ಕ ವಯಸ್ಸಿನಲ್ಲೇ ತಂದೆ- ತಾಯಿ ಕಳೆದುಕೊಂಡರು. ನರಸಿಂಹ ಮೂರ್ತಿ ಮತ್ತು ಅವರ ತಮ್ಮ ರಾಮಚಂದ್ರರಾಯರನ್ನು ಸಾಕಿ ಬೆಳೆಸಿ, ವಿದ್ಯಾಭ್ಯಾಸ ಮಾಡಿಸಿದವರು ಅವರ ಸೋದರತ್ತೆ ಭೀಮಕ್ಕ ಮತ್ತು ಮಾವ ಗೋವಿಂದರಾಯರು. ನರಸಿಂಹಮೂರ್ತಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದರೂ ಆರ್ಥಿಕ ತೊಂದರೆಯಿಂದ ಹೆಚ್ಚಿನ ವ್ಯಾಸಂಗ ಮಾಡಲಾಗಲಿಲ್ಲ. ನಂತರ ಶ್ಯಾನುಭೋಗರಾಗಿ, ಗೋವಿಂದರಾಯರ ನಂತರ ಶಾಖಾ ಪೋಸ್ಟ್ ಮಾಸ್ತರರಾಗಿ, ವ್ಯವಸಾಯವನ್ನೂ ಮುಂದುವರಿಸಿದರು.
ಅವರನ್ನು ಚಿಕ್ಕ ವಯಸ್ಸಿಗೇ ಭಾರತ ರಾಮಾಯಣ ವಾಚನದ ಕಡೆಗೆ ಸೆಳೆದವರು ಚೆಂಡೂರು ಶ್ರೀನಿವಾಸರಾಯರು. ಅವರಿಂದ ಪ್ರೇರಿತರಾಗಿ ಕುಮಾರವ್ಯಾಸ ಭಾರತ ಓದುವುದು ಹಾಗೂ ಅರ್ಥೈಸುವುದನ್ನೂ ಕಲಿತರು. ವಂಶಪಾರಂಪರ್ಯವಾಗಿ ಬಂದಿದ್ದ ಸಂಗೀತವೂ ಅವರಲ್ಲಿ ಮನೆ ಮಾಡಿದ್ದರಿಂದ ಗಾಯನ, ಪಿಟೀಲುವಾದನ, ಹರಿಕಥೆಗಳಲ್ಲೂ ನಿಪುಣರಾದರು. ಹಲವಾರು ಬಡ ವಿದ್ಯಾರ್ಥಿಗಳಿಗೆ ಎಸ್‌ಎಸ್‌ಎಲ್‌ಸಿಗೆ ಉಚಿತವಾಗಿ ಮನೆಪಾಠ ಮಾಡಿದರು. ಅವರು ಪಶುಪಾಲನೆಯಲ್ಲೂ ಎತ್ತಿದ ಕೈ. 1949ರಲ್ಲಿ ಮೈಸೂರು ಪಶು ಸಂಗೋಪನಾ ಇಲಾಖೆಯವರು ನಡೆಸಿದ್ದ ಲೋಕಲ್ ಕ್ಯಾಟಲ್ ಶೋನಲ್ಲಿ ಬೆಳ್ಳಿ ಪದಕ ಪಡೆದಿದ್ದರು.
ನರಸಿಂಹಮೂರ್ತಿ ದಾಸ ಸಾಹಿತ್ಯವನ್ನು ಮನನ ಮಾಡಿದ್ದರಿಂದ ಹಲವಾರು ಕೃತಿಗಳನ್ನು ರಚಿಸಲು ಉತ್ತೇಜಿತರಾದರು. ವ್ಯಾಸರಾಜ ಮಠದ ವಿದ್ಯಾಪಯೋನಿಧಿ ತೀರ್ಥರಿಂದ ನರಸಿಂಹ ಅಂಕಿತ ಪಡೆದು ದೇವರ ಸಂಕೀರ್ತನೆಗಳನ್ನು ರಚಿಸುತ್ತಾ ಭಕ್ತಿ ಮಾರ್ಗ ಪ್ರಚಾರಕರಾದರು. ಅವರು ತಮ್ಮ ಇಳಿವಯಸ್ಸಿನಲ್ಲಿ ಬೆಂಗಳೂರಿನ ಕೆ.ಆರ್.ಪುರದಲ್ಲಿ ನೆಲೆಸಿದರು. ಗಂಜಿಗುಂಟೆಯಲ್ಲಿ ಇದ್ದಾಗಿನಿಂದಲೂ ರಾಮನವಮಿ, ರಾಘವೇಂದ್ರರ ಆರಾಧನೆ, ಪುರಂದರದಾಸರ ಆರಾಧನೆ, ನರಸಿಂಹ ಜಯಂತಿ ಇತ್ಯಾದಿ ಕೈಂಕರ್ಯಗಳನ್ನು ಚಾಚೂ ತಪ್ಪದೆ ನೆರವೇರಿಸಿಕೊಂಡು ಬರುತ್ತಿದ್ದರು. ವಿಶೇಷವಾಗಿ ರಾಮನವಮಿಯಲ್ಲಿ ಹತ್ತು ದಿನಗಳ ಕಾಲ ರಾಮಾಯಣ ಪಾರಾಯಣ, ಸಂಜೆ ಸಂಗೀತ ಕಛೇರಿ, ಹರಿಕಥೆ, ತೊರವೆ ರಾಮಾಯಣ ವಾಚನ ಮತ್ತು ವ್ಯಾಖ್ಯಾನಗಳನ್ನು ನಡೆಸಿಕೊಂಡು ಬಂದರು.
ಅವರು ರಚಿಸಿದ 82 ಕೀರ್ತನೆಗಳನ್ನು ಕೀರ್ತನ ತರಂಗಿಣಿ (ಕನ್ನಡ ದೇವರನಾಮಗಳು) ಎಂಬ ಪುಸ್ತಕವನ್ನಾಗಿಸಿ 2003ರ ಡಿಸೆಂಬರ್ 7ರಂದು ಬಿಡುಗಡೆ ಮಾಡಲಾಯಿತು. ಇದಕ್ಕೆ ಮುನ್ನುಡಿಯನ್ನು ಮೈಸೂರಿನ ಡಾ.ಟಿ.ಎನ್.ನಾಗರತ್ನ ಬರೆದರೆ, ಡಾ.ಅನಂತಪದ್ಮರಾವ್ ಕರ್ತೃವಿನ ಪರಿಚಯ ಮತ್ತು ಕಠಿಣ ಪದಗಳ ಅರ್ಥ ಬರೆದು ಓದುಗರಿಗೆ ನೆರವಾಗಿದ್ದಾರೆ. ಸಾಹಿತಿ ಡಾ.ಸಾ.ಶಿ.ಮರುಳಯ್ಯ ಕೃತಿ ಬಿಡುಗಡೆ ಮಾಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.