ಗೌರಿಬಿದನೂರು: ವಿದ್ಯಾರ್ಥಿಗಳನ್ನು ಕಾಲೇಜಿಗೆ ಕರೆದೊಯ್ಯುತ್ತಿದ್ದ ಆಟೊ ಗುರುವಾರ ಬೆಳಿಗ್ಗೆ ಟ್ರೈಲರ್ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ವಿದ್ಯಾರ್ಥಿನಿಯೊಬ್ಬಳು ಮೃತಪಟ್ಟಿದ್ದಾಳೆ. 11 ವಿದ್ಯಾರ್ಥಿನಿ
ಯರು ಸೇರಿದಂತೆ ಒಟ್ಟು 13 ಮಂದಿ ಗಾಯ ಗೊಂಡಿದ್ದು, ಆಸ್ಪತ್ರೆಗೆ ಸೇರಿಸಲಾಗಿದೆ.
ನಗರದ ನಾಗಪ್ಪ ಬ್ಲಾಕ್ ಸಮೀಪದ ವೇಮನ ವೃತ್ತದ ಬಳಿ ಸಂಭವಿಸಿದ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಎಸ್ಎಸ್ಇಎ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ, ಗೌಡಸಂದ್ರ ಗ್ರಾಮದ ವನಜಾ (18) ಬೆಂಗಳೂರಿನ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ
ಮೃತಪಟ್ಟಿದ್ದಾಳೆ.
ಇದೇ ಕಾಲೇಜಿನ ವಿದ್ಯಾರ್ಥಿನಿಯರಾದ ಸಹನಾ, ವೆನ್ನೆಲಾ, ತ್ರಿವೇಣಿ, ಪವಿತ್ರಾ, ದೀಪಿಕಾ, ರೋಹಿಣಿ, ತನುಜಾ, ಭಾಗ್ಯಮ್ಮ, ಮೇಘನಾ, ನಳಿನಿ, ತಸೀನಾ ಗಾಯಗೊಂಡಿದ್ದಾರೆ. ಆಟೊರಿಕ್ಷಾ ಚಾಲಕ ಶ್ರೀನಿವಾಸ ಮತ್ತು ಕಾರ್ಮಿಕ ಲೋಕೇಶ್ ಕೂಡ ಗಾಯಗೊಂಡಿದ್ದಾರೆ. ಇವರೆಲ್ಲಾ ತಾಲ್ಲೂಕಿನ ದೊಡ್ಡ ಕುರುಗೋಡು ಮತ್ತು ಗೌಡಸಂದ್ರ ಗ್ರಾಮದವರು.
ವಿದುರಾಶ್ವತ್ಥ ಸಮೀಪದ ದೊಡ್ಡ ಕುರುಗೋಡು ಮತ್ತು ಗೌಡಸಂದ್ರ ಸೇರಿದಂತೆ ಇತರ ಗ್ರಾಮಗಳ ವಿದ್ಯಾರ್ಥಿಗಳು ಆಟೊದಲ್ಲಿ ನಗರದ ಎಸ್ಎಸ್ಇಎ ಪದವಿಪೂರ್ವ ಕಾಲೇಜಿಗೆ ಹೊರಟಿದ್ದರು.
ನಾಗಪ್ಪ ಬ್ಲಾಕ್ ಸಮೀಪದ ವೇಮನ ವೃತ್ತದಲ್ಲಿ ಬೈಪಾಸ್ ರಸ್ತೆಯಿಂದ ವೇಗವಾಗಿ ಬಂದ ಲಾರಿಗೆ ಆಟೊ ಡಿಕ್ಕಿ ಹೊಡೆಯಿತು. ಲಾರಿಯ ಕೆಳಗೆ ಸಿಲುಕಿದ ಆಟೊ ಸಂಪೂರ್ಣ ಜಖಂಗೊಂಡಿದ್ದು, ಅದರಲ್ಲಿದ್ದ ವಿದ್ಯಾರ್ಥಿನಿಯರು ರಕ್ತದ ಮಡುವಿನಲ್ಲಿ ರಸ್ತೆಯಲ್ಲಿ ಬಿದ್ದಿದ್ದರು. ಸ್ಥಳೀಯರು ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.