ADVERTISEMENT

ಚಿಕ್ಕಬಳ್ಳಾಪುರ: 1,200 ನಾಯಿಗಳ ಸಂತಾನಶಕ್ತಿ ಹರಣಕ್ಕೆ ಶಸ್ತ್ರಚಿಕಿತ್ಸೆ

ಆರು ವರ್ಷಗಳ ನಂತರ ಚಿಕ್ಕಬಳ್ಳಾಪುರ ನಗರಸಭೆಯಲ್ಲಿ ಕಾರ್ಯಕ್ರಮ

ಡಿ.ಎಂ.ಕುರ್ಕೆ ಪ್ರಶಾಂತ
Published 19 ಅಕ್ಟೋಬರ್ 2024, 8:06 IST
Last Updated 19 ಅಕ್ಟೋಬರ್ 2024, 8:06 IST
ಚಿಕ್ಕಬಳ್ಳಾಪುರದಲ್ಲಿ ನಾಯಿಗಳ ಹಿಂಡು
ಚಿಕ್ಕಬಳ್ಳಾಪುರದಲ್ಲಿ ನಾಯಿಗಳ ಹಿಂಡು   

ಚಿಕ್ಕಬಳ್ಳಾಪುರ: ಅಂತೂ ಇಂತೂ ಚಿಕ್ಕಬಳ್ಳಾಪುರ ನಗರಸಭೆ ವ್ಯಾಪ್ತಿಯ ನಾಯಿಗಳ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗೆ ಕಾಲ ಕೂಡಿದೆ. ಆರು ವರ್ಷಗಳ ನಂತರ ನಗರಸಭೆಯಲ್ಲಿ ಈ ಕಾರ್ಯ ನಡೆಯುತ್ತಿದೆ. 

2018ರಲ್ಲಿ ನಗರಸಭೆ ವ್ಯಾಪ್ತಿಯಲ್ಲಿ ನಾಯಿಗಳ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ನಡೆದಿತ್ತು. ₹ 10 ಲಕ್ಷಗಳ ವೆಚ್ಚದಲ್ಲಿ ನಡೆದ ಈ ಕಾರ್ಯದಲ್ಲಿ 450ರಿಂದ 600 ನಾಯಿಗಳಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು.

ಆ ನಂತರ 12 ಬಾರಿ ನಾಯಿಗಳ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗೆ ನಗರಸಭೆಯು ಟೆಂಡರ್ ಕರೆದಿತ್ತು. ಆದರೆ ಶಸ್ತ್ರಚಿಕಿತ್ಸೆಗೆ ಅಗತ್ಯವಾದ ಜಾಗ ದೊರೆಯದಿರುವುದು ಮತ್ತಿತರ ಕಾರಣದಿಂದ ಟೆಂಡರ್ ಪಡೆಯಲು ಯಾರೂ ಮುಂದೆ ಬಂದಿರಲಿಲ್ಲ.

ADVERTISEMENT

ಈಗ ಆಶ್ರ ಸಂಸ್ಥೆಯು ಶಸ್ತ್ರಚಿಕಿತ್ಸೆ ನಡೆಸಲು ಟೆಂಡರ್ ಪಡೆದಿದೆ. ₹ 20 ಲಕ್ಷಕ್ಕೆ ಟೆಂಡರ್ ಆಗಿದ್ದು 1,200 ನಾಯಿಗಳಿಗೆ ಶಸ್ತ್ರಚಿಕಿತ್ಸೆ ನಡೆಸಲು ತೀರ್ಮಾನಿಸಲಾಗಿದೆ. 2018ರಲ್ಲಿಯೂ ಇದೇ ಸಂಸ್ಥೆಯೇ ಶಸ್ತ್ರ‌ ಚಿಕಿತ್ಸೆ ನಡೆಸಿತ್ತು.

2018ರಿಂದ ಇಲ್ಲಿಯವರೆಗೆ ನಾಯಿಗಳ ಸಂತಾನ ಗಣನೀಯವಾಗಿ ಬೆಳೆದಿದೆ.  ನಗರದಲ್ಲಿ ನಾಯಿಗಳ ಸಂಖ್ಯೆ ಹೆಚ್ಚುತ್ತಲೇ ಸಾಗಿತ್ತು. ನಗರಸಭೆ ವ್ಯಾಪ್ತಿಯ 31 ವಾರ್ಡ್‌ಗಳಲ್ಲಿಯೂ ನಾಯಿಗಳು ‌ದೊಡ್ಡ ಪ್ರಮಾಣದಲ್ಲಿ ಇವೆ. ಎಲ್ಲ ಬಡಾವಣೆಗಳಲ್ಲಿಯೂ ನಾಗರಿಕರು ನಾಯಿಗಳ ಕಾಟಕ್ಕೆ ಬೆದರುತ್ತಿದ್ದಾರೆ. ಮಕ್ಕಳನ್ನು ಆಟಕ್ಕೆ ಹೊರಗೆ ಕಳುಹಿಸಲು ಸಹ ಹೆದರುತ್ತಿದ್ದರು. ನಗರದಲ್ಲಿ ನಾಯಿ ಕಡಿತಕ್ಕೆ ಮತ್ತು ದಾಳಿಗೆ ತುತ್ತಾಗುವವರ ಸಂಖ್ಯೆಯೂ ಹೆಚ್ಚಿತ್ತು. 

ಪ್ರಶಾಂತ ನಗರ, ಎಚ್‌.ಎಸ್.ಗಾರ್ಡನ್‌, ಸಿಎಂಸಿ ಲೇಔಟ್, ಮುನ್ಸಿಫಲ್ ಬಡಾವಣೆ ಸೇರಿದಂತೆ ನಗರದ ಪ್ರತಿಷ್ಠಿತ ಬಡಾವಣೆಗಳಲ್ಲಿ ನಾಯಿಗಳ ಕಾಟಕ್ಕೆ ನಾಗರಿಕರು ಹೈರಾಣಾಗಿದ್ದರು. ರಾತ್ರಿ ಇವುಗಳ ಬೊಗಳುವಿಕೆಯಿಂದ ಜನರು ನಿದ್ದೆ ಕಳೆದುಕೊಂಡಿದ್ದರು.

ಜನನಿಬಿಡ ಮತ್ತು ವಾಹನಗಳ ದಟ್ಟಣೆ ಹೆಚ್ಚಿರುವ ರಸ್ತೆಗಳಲ್ಲಿಯೇ ನಾಯಿಗಳ ದೊಡ್ಡ ಹಿಂಡು ಕಂಡು ಬರುತ್ತಿತ್ತ. ನಾಯಿಗಳ ಕಾಟ ಹೆಚ್ಚಿದೆ. ಜನರು ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ನಗರಸಭೆ ಸಭೆಗಳಲ್ಲಿ ಸದಸ್ಯರೇ ಅಸಮಾಧಾನ ವ್ಯಕ್ತಪಡಿಸುತ್ತಿದ್ದರು.

ನಾಯಿಗಳ ಕಾಟ ಚಿಕ್ಕಬಳ್ಳಾಪುರದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿತ್ತು. ಈಗ ಆರು ವರ್ಷಗಳ ನಂತರ ಅವುಗಳ ಸಂತಾನ ಅಭಿವೃದ್ಧಿಯನ್ನು ಹರಣಗೊಳಿಸಲು ನಗರಸಭೆ ಮುಂದಾಗಿದೆ. 

ಜಾಗದ ಹುಡುಕಾಟ: ಶಸ್ತ್ರಚಿಕಿತ್ಸೆಯನ್ನು ಎಲ್ಲಿ ನಡೆಸಬೇಕು ಎನ್ನುವ ಬಗ್ಗೆ ಚರ್ಚೆಗಳು ನಡೆದಿವೆ. ಇದಕ್ಕೆ ಸೂಕ್ತ ಸ್ಥಳವೂ ಅಗತ್ಯ. ಈಗ ಜಾಗದ ಹುಡುಕಾಟ ನಡೆದಿದೆ. ಆಶ್ರ ಸಂಸ್ಥೆ ಮತ್ತು ನಗರಸಭೆ ಅಂದುಕೊಂಡತೆ ಆದರೆ ಎರಡು ವಾರಗಳಲ್ಲಿ ನಗರದ ನಾಯಿಗಳನ್ನು ಹಿಡಿಯಲು ಆಪರೇಷನ್ ಆರಂಭವಾಗುತ್ತದೆ.

‘2018ರಲ್ಲಿ ನಾಯಿಗಳಿಗೆ ಸಂತಾನ ಶಕ್ತಿ ಹರಣಶಸ್ತ್ರ ಚಿಕಿತ್ಸೆ ನಡೆದಿತ್ತು. ಅಲ್ಲಿಂದ ಇಲ್ಲಿಯವರೆಗೆ ಅಂದರೆ ಈ ಆರು ವರ್ಷಗಳಲ್ಲಿ ನಾಯಿಗಳ ವೃದ್ಧಿ ಹೆಚ್ಚಿದೆ. ನಮ್ಮ ಬಡಾವಣೆಗಳಲ್ಲಿಯೇ ಎಂಟತ್ತು ಇದ್ದ ನಾಯಿಗಳ ಸಂಖ್ಯೆ ಈಗ ಇಪ್ಪತ್ತು ಮೂವತ್ತಕ್ಕೆ ಹೆಚ್ಚಿದೆ. ಆದ್ದರಿಂದ ಪ್ರತಿ ವರ್ಷವೂ ಈ ಕಾರ್ಯಕ್ರಮ ನಡೆಯಬೇಕು’ ಎನ್ನುತ್ತಾರೆ ಎಚ್‌.ಎಸ್‌.ಗಾರ್ಡನ್ ಮಂಜುನಾಥ್. 

‘ಇನ್ನು ಮುಂದೆ ಪ್ರತಿ ವರ್ಷ ಶಸ್ತ್ರಚಿಕಿತ್ಸೆ’

15 ದಿನಗಳಲ್ಲಿ ನಗರದಲ್ಲಿ ನಾಯಿಗಳ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಯು ನಡೆಯಲಿದೆ. ಈ ಹಿಂದೆ ₹ 10 ಲಕ್ಷಕ್ಕೆ ಟೆಂಡರ್ ಮಾಡಲಾಗುತ್ತಿತ್ತು. ಆಗ ಕಡಿಮೆ ಸಂಖ್ಯೆಯಲ್ಲಿ ನಾಯಿಗಳು ಶಸ್ತ್ರಚಿಕಿತ್ಸೆ ಮಾಡಬೇಕಾಗಿತ್ತು. ಈಗ ₹ 20 ಲಕ್ಷಕ್ಕೆ ಟೆಂಡರ್ ಆಗಿದೆ. ದೊಡ್ಡ ಸಂಖ್ಯೆಯಲ್ಲಿ ನಾಯಿಗಳಿಗೆ ಚಿಕಿತ್ಸೆ ಆಗಲಿದೆ ಎಂದು ನಗರಸಭೆ ಪರಿಸರ ಎಂಜಿನಿಯರ್ ಪಿ.ಉಮಾಶಂಕರ್ ‘ಪ್ರಜಾವಾಣಿ’ಗೆ ತಿಳಿಸಿದರು. ಇನ್ನು ಮುಂದೆ ಪ್ರತಿ ವರ್ಷವೂ ಈ ಕಾರ್ಯಕ್ರಮವನ್ನು ನಗರಸಭೆಯಿಂದ ಮಾಡಲಾಗುವುದು ಎಂದರು.

ದಿನಕ್ಕೆ 20 ನಾಯಿಗಳ ಶಸ್ತ್ರಚಿಕಿತ್ಸೆ

ಒಂದು ದಿನಕ್ಕೆ 20 ನಾಯಿಗಳ ಶಸ್ತ್ರಚಿಕಿತ್ಸೆ ನಡೆಸಲಾಗುತ್ತದೆ. ಸರ್ಕಾರವು ಒಂದು ನಾಯಿಗೆ ಚಿಕಿತ್ಸೆ ನಡೆಸಲು ₹ 1650 ಭರಿಸುತ್ತದೆ ಎಂದು ಆಶ್ರ ಸಂಸ್ಥೆಯ ರಾಧಾ ‘ಪ್ರಜಾವಾಣಿ’ಗೆ ತಿಳಿಸಿದರು. ನಾಯಿಗಳಿಗೆ ಚಿಕಿತ್ಸೆ ನಡೆಸಿದ ನಂತರ ಮೂರು ದಿನ ಆರೈಕೆ ಮಾಡಬೇಕು. ನಂತರ ಮತ್ತೆ ಅದೇ ಸ್ಥಳಕ್ಕೆ ಬಿಡಲಾಗುತ್ತದೆ. ವೈದ್ಯರು ನಾಯಿ ಹಿಡಿಯುವವರು ವಾಹನ ಚಾಲಕರು ಸ್ವಚ್ಛತಾಗಾರರು ಸೇರಿದಂತೆ ಐದು ಜನರು ಕೆಲಸಕ್ಕೆ ಅಗತ್ಯ ಎಂದು ಹೇಳಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.