ಬಾಗೇಪಲ್ಲಿ: ಸಿಪಿಎಂನ ಚಿಕ್ಕಬಳ್ಳಾಪುರ ಜಿಲ್ಲಾ ಮಟ್ಟದ 18ನೇ ಸಮ್ಮೇಳನವು ಗುರುವಾರ ಬಾಗೇಪಲ್ಲಿ ಪಟ್ಟಣದಲ್ಲಿ ಅದ್ದೂರಿಯಾಗಿ ಜರುಗಿತು.
ಸಮ್ಮೇಳನದ ಅಂಗವಾಗಿ ಪಟ್ಟಣದ ಮುಖ್ಯ ರಸ್ತೆಯಲ್ಲಿ ಸಿಪಿಎಂ ಮುಖಂಡರು ಮತ್ತು ಕಾರ್ಯಕರ್ತರು ಕೆಂಪು ಬಾವುಟ ಹಿಡಿದು ಬೃಹತ್ ಮೆರವಣಿಗೆ ನಡೆಸಿದರು. ರ‍್ಯಾಲಿಯಲ್ಲಿ ಕೃಷಿ ಕೂಲಿ ಕಾರ್ಮಿಕರು, ಜನಸಾಮಾನ್ಯರು ಭಾಗವಹಿಸಿದ್ದರು.
ತಾಲ್ಲೂಕಿನ ಕೊಂಡಂವಾರಿಪಲ್ಲಿಯಲ್ಲಿ ಹಮ್ಮಿಕೊಂಡ ಸಿಪಿಎಂ ಜಿಲ್ಲಾ 18ನೇ ಸಮ್ಮೇಳನದ ಅಂಗವಾಗಿ ಪಟ್ಟಣದ ಸಿಪಿಎಂ ಪಕ್ಷದ ಸುಂದರಯ್ಯ ಭವನದ ಮುಂದೆ ನೂರಾರು ಮಂದಿ ಜಮಾಯಿಸಿದರು. ಬಾಗೇಪಲ್ಲಿ, ಗುಡಿಬಂಡೆ ತಾಲ್ಲೂಕುಗಳು ಸೇರಿದಂತೆ ಜಿಲ್ಲೆಯ ವಿವಿಧ ಕಡೆಗಳಿಂದ ಕಮ್ಯೂನಿಸ್ಟ್ ಮುಖಂಡರು, ಕಾರ್ಯಕರ್ತರು ಆಗಮಿಸಿದ್ದರು. ಮೆರವಣಿಗೆಯಲ್ಲಿ ಪ್ರಜಾ ನಾಟ್ಯ ಕಲಾ ಮಂಡಲಿ ಕಲಾವಿದರು ಹೆಗಲ ಮೇಲೆ ಕಪ್ಪು ಶಾಲು ಹಾಕಿಕೊಂಡು, ತಲೆಗೆ ಹಾಗೂ ಕೈಯಲ್ಲಿ ಕೆಂಪು ಬಾವುಟಗಳನ್ನು ಹಿಡಿದು, ಮೆರವಣಿಗೆಯುದ್ದಕ್ಕೂ ನೃತ್ಯ ಮಾಡುತ್ತಾ ಸಾಗಿದರು.
ಕೆಂಪು ವಸ್ತ್ರಧಾರಿಗಳು, ಕಾರ್ಯಕರ್ತರು ಕೈಯಲ್ಲಿ ಕೆಂಪು ಬಾವುಟ ಹಿಡಿದಿದ್ದರು. ಲಾಲ್ ಸಲಾಂ ಎಂದು ಘೋಷಣೆ ಕೂಗಿದರು. ಪಟ್ಟಣದ ಸುಂದರಯ್ಯ ಭವನದಿಂದ, ಡಾ.ಎನ್.ವೃತ್ತದವರೆಗೆ ಡಿವಿಜಿ ಮುಖ್ಯರಸ್ತೆಯಲ್ಲಿ ಬೃಹತ್ ರ‍್ಯಾಲಿ ಮಾಡಲಾಯಿತು. ಮೆರವಣಿಗೆಯಲ್ಲಿ ಸಿಪಿಎಂ ಪೊಲಿಟ್ ಬ್ಯೂರೊ ಸದಸ್ಯ ಬಿ.ವಿ.ರಾಘುವುಲು, ಕೇಂದ್ರ ಸಮಿತಿ ಸದಸ್ಯ ಕೆ.ಎನ್.ಉಮೇಶ್, ರಾಜ್ಯ ಕಾರ್ಯದರ್ಶಿ ಯು.ಬಸವರಾಜು ಸೇರಿದಂತೆ ಜಿಲ್ಲಾ, ತಾಲ್ಲೂಕು ಸಮಿತಿಗಳ ಮುಖಂಡರು ಹಾಜರಿದ್ದರು.
ಮೊಳಗಿದ ಕ್ರಾಂತಿ ಗೀತೆಗಳ ನೃತ್ಯ
ಬಹಿರಂಗ ಸಭೆಯ ವೇದಿಕೆಯಲ್ಲಿ ಪ್ರಜಾ ನಾಟ್ಯ ಕಲಾ ಮಂಡಲಿಯ ಓಬಳರಾಜು ಚನ್ನರಾಯಪ್ಪ ಗೊಲ್ಲಪಲ್ಲಿ ಮಂಜು ರಾಮಾಂಜಿಯವರ ತಂಡ ಕ್ರಾಂತಿಗೀತೆಗಳನ್ನು ಹಾಡಿತು. ಕಾಲಿಗೆ ಗೆಜ್ಜೆ ಕೈ ಮತ್ತು ತಲೆಗೆ ಕೆಂಪು ಬಾವುಟಗಳನ್ನು ಕಟ್ಟಿಕೊಂಡಿದ್ದ ಕಲಾವಿದರು ತಮಟೆಗಳ ಶಬ್ದಕ್ಕೆ ಕುಣಿದು ಕುಪ್ಪಳಿಸಿದರು. ಸ್ವತಃ ಪ್ರಹಾಕವಿ ಗದ್ದರ್ ನೃತ್ಯದ ದಾಟಿಯ ನೃತ್ಯಗಳು ವೇದಿಕೆಯಲ್ಲಿ ಕಂಡುಬಂದವು. ದಿವಂಗತ ಮಾಜಿ ಶಾಸಕ ಕಮ್ಯೂನಿಸ್ಟ್ ಹೋರಾಟಗಾರ ಜಿ.ವಿ.ಶ್ರೀರಾಮರೆಡ್ಡಿ ಅವರು ಕ್ಷೇತ್ರದಲ್ಲಿ ಜನಪರ ಶಾಶ್ವತ ಕೆಲಸಗಳ ಬಗ್ಗೆ ಕಲಾವಿದರು ಹಾಡಿದ ಕ್ರಾಂತಿಗೀತೆಗಳ ನೃತ್ಯಗಳು ಜನಮನ ಸೆಳೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.