ADVERTISEMENT

ಕನ್ನಡಿಗರನ್ನು ಮೆಚ್ಚಿ ನಂದಿಬೆಟ್ಟದಲ್ಲಿ ಕವಿತೆ ಬರೆದ ಆಂಧ್ರದ ಶಾಸಕ

​ಪ್ರಜಾವಾಣಿ ವಾರ್ತೆ
Published 28 ಮೇ 2023, 23:30 IST
Last Updated 28 ಮೇ 2023, 23:30 IST
ನಂದಿ ಗಿರಿಧಾಮದ ತೋಟಗಾರಿಕೆ ಇಲಾಖೆಯ ವಿಶೇಷ ಅಧಿಕಾರಿಗಳ ಕಚೇರಿಯಲ್ಲಿ ಇರುವ ಸಂದರ್ಶಕರ ಪುಸ್ತಕದಲ್ಲಿ ಆಂಧ್ರದ ರಾಜಕಾರಣಿಯ ಕವನ
ನಂದಿ ಗಿರಿಧಾಮದ ತೋಟಗಾರಿಕೆ ಇಲಾಖೆಯ ವಿಶೇಷ ಅಧಿಕಾರಿಗಳ ಕಚೇರಿಯಲ್ಲಿ ಇರುವ ಸಂದರ್ಶಕರ ಪುಸ್ತಕದಲ್ಲಿ ಆಂಧ್ರದ ರಾಜಕಾರಣಿಯ ಕವನ   

ಡಿ.ಜಿ.ಮಲ್ಲಿಕಾರ್ಜುನ

ಶಿಡ್ಲಘಟ್ಟ : ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿಬೆಟ್ಟ ಕವಿಗಳನ್ನು ಪ್ರಕೃತಿ ಪ್ರಿಯರನ್ನಾಗಿಯೂ, ರಾಜಕೀಯದಲ್ಲಿ ಮುಳುಗಿದ್ದವರನ್ನು ಕವಿಗಳನ್ನು ಮಾಡಿರುವುದಕ್ಕೆ ಹಲವು ದಾಖಲೆಗಳಿವೆ.

ನಂದಿ ಗಿರಿಧಾಮದ ತೋಟಗಾರಿಕೆ ಇಲಾಖೆಯ ವಿಶೇಷ ಅಧಿಕಾರಿಗಳ ಕಚೇರಿಯಲ್ಲಿ ಇರುವ ಸಂದರ್ಶಕರ ಪುಸ್ತಕದಲ್ಲಿ ಆಂಧ್ರದ ರಾಜಕಾರಣಿಯೊಬ್ಬರ ಕವನವಿದೆ. ಇದು ಕಾಲದ ಹಾದಿಯಲ್ಲಿ ನಂದಿಬೆಟ್ಟಕ್ಕೆ ಆಗಮಿಸಿದವರ ಸಾಮಾಜಿಕ, ಸಾಂಸ್ಕೃತಿಕ, ಭಾಷಾ ಸಂಸ್ಕಾರಗಳನ್ನು ಸಹ ದಾಖಲಿಸುತ್ತದೆ.

ADVERTISEMENT

1984 ರ ಆಗಸ್ಟ್ 31 ರಂದು ಆಂದ್ರಪದೇಶದ ಕರೀಂನಗರ ಜಿಲ್ಲೆಯ ಶಾಸಕ ಕೊತ್ತರಾಜೇಂದ್ರ ಬರೆದಿರುವ ಈ ಕವನದ ಸಾಲುಗಳು ಆಗಿನ ರಾಜಕೀಯ ಸ್ಥಿತ್ಯಂತ್ರವನ್ನು ವಿವರಿಸುತ್ತದೆ.

1984ರ ಆಗಸ್ಟ್ 15ರಂದು ಎನ್‌ಟಿಆರ್ ಹೃದಯದ ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಿದ್ದಾಗ, ದಿಲ್ಲಿಯಲ್ಲಿ ರಾಜಕೀಯದ ಆಟ ಶುರುವಾಯಿತು. ಆಂಧ್ರಪ್ರದೇಶದ ರಾಜ್ಯಪಾಲ ಠಾಕೂರ್ ರಾಮ್ ಲಾಲ್ ಅವರು ಏಕಪಕ್ಷೀಯವಾಗಿ ಎನ್‌ಟಿಆರ್. ಸರ್ಕಾರವನ್ನು ವಜಾಗೊಳಿಸಿ ಅವರ ಜಾಗದಲ್ಲಿ ಕಾಂಗ್ರೆಸ್ ಪಕ್ಷ ಹೇಳಿದಂತೆ ಕೇಳುವ ಪಕ್ಷಾಂತರಿ ನಾಂದೇಂಡ್ಲ ಭಾಸ್ಕರ ರಾವ್ ಅವರನ್ನು ಆಗಸ್ಟ್ 16ರಂದು ತಂದು ಕೂರಿಸಿದರು. ಎನ್‌ಟಿಆರ್ ಮತ್ತು ಅವರ ಬೆಂಬಲಿತ ಶಾಸಕರನ್ನು ಪೊಲೀಸರು ದಸ್ತಗಿರಿ ಮಾಡಿದರು.

ಎನ್‌ಟಿಆರ್ ಅವರನ್ನು ಕಿತ್ತುಹಾಕಿದ್ದರ ವಿರುದ್ಧ ರಾಜ್ಯಾದ್ಯಂತ ಆಕ್ರೋಶ ಭುಗಿಲೆದ್ದಿತು. ದಿನದಿನಕ್ಕೂ ಹೆಚ್ಚುತ್ತಾ ಹೋದ ಎನ್‌ಟಿಆರ್ ಅವರ ಅಭಿಮಾನಿ ಬಳಗ ಪಕ್ಷಾಂತರಿಗಳಿಗೆ ಹೋದಲ್ಲಿ ಬಂದಲ್ಲಿ ಫೇರಾವ್‌ ಹಾಕತೊಡಗಿತು. ರಾಜ್ಯಪಾಲರು ನಾಂದೇಂಡ್ಲ ಭಾಸ್ಕರ ರಾವ್ ಅವರಿಗೆ ಬಹುಮತ ಸಾಬೀತುಪಡಿಸಲು 30 ದಿನಗಳ ಗಡುವು ನೀಡಿದರು.

ಎನ್‌ಟಿಆರ್ ತಮ್ಮನ್ನು ಬೆಂಬಲಿಸುವ 161 ಶಾಸಕರೊಂದಿಗೆ ದೆಹಲಿಗೆ ಹೋಗಿ ರಾಷ್ಟ್ರಪತಿ ಜೇಲ್ ಸಿಂಗ್ ಅವರನ್ನು ಆಗಸ್ಟ್ 21 ರಂದು ಭೇಟಿ ಮಾಡಿದರು. ತಮ್ಮ ಬಣದ ಶಾಸಕರನ್ನು ಕಾಂಗ್ರೆಸ್ ಆಮಿಷ ಒಡ್ಡಿ ಸೆಳೆಯುವ ಹುನ್ನಾರ ತಿಳಿದ ಎನ್‌ಟಿಆರ್, ಕರ್ನಾಟಕದ ಮುಖ್ಯ ಮಂತ್ರಿಯಾಗಿದ್ದ ಅವರ ಸ್ನೇಹಿತ ರಾಮಕೃಷ್ಣ ಹೆಗಡೆಯವರನ್ನು ಮಾತನಾಡಿದರು.

ದೆಹಲಿಯಿಂದ ಆಗಸ್ಟ್ 23 ರಂದು ವಿಮಾನದಲ್ಲಿ 126 ಶಾಸಕರು ಬೆಂಗಳೂರಿಗೆ ಬಂದರು. ನಂತರ ಯಾರಿಗೂ ತಿಳಿಯದ ಹಾಗೆ ಅವರಿಗೆ ನಂದಿಬೆಟ್ಟದಲ್ಲಿ ವಸತಿ ಏರ್ಪಾಡು ಮಾಡಲಾಯಿತು.

ಅತ್ತ ಹೈದರಾಬಾದ್ ಗೆ ತೆರಳಿದ ಎನ್‌ಟಿಆರ್, ವೈದ್ಯರು ವಿಶ್ರಾಂತಿ ತೆಗೆದುಕೊಳ್ಳುವಂತೆ ಹೇಳಿದರೂ, ತಮ್ಮ ಪ್ರಸಿದ್ಧ ಚೈತನ್ಯ ರಥಯಾತ್ರೆ ಆರಂಭಿಸಿ ಪ್ರತಿಭಟನೆಗೆ ಇಳಿದರು. ಠಾಕೂರ್ ರಾಮ್ ಲಾಲ್ ಅವರನ್ನು ವಜಾಗೊಳಿಸುವುದು ಇಂದಿರಾ ಗಾಂಧಿಗೆ ಅನಿವಾರ್ಯವಾಯಿತು. ಎನ್‌ಟಿಆರ್ ಮತ್ತೆ ಮುಖ್ಯ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಇಂದಿರಾ ಅವರು ಎನ್‌ ಟಿಆರ್ ಎದುರು ಸೋಲಬೇಕಾಯಿತು.

ನಂದಿಬೆಟ್ಟದಲ್ಲಿ ತಂಗಿದ್ದ ಶಾಸಕರ ಪೈಕಿ ಕರೀಂನಗರ ಜಿಲ್ಲೆಯ ಶಾಸಕ ಕೊತ್ತರಾಜೇಂದ್ರ ತನ್ನನ್ನು ಪ್ರಜಾಕವಿ ಎಂದು ಕರೆದುಕೊಂಡು ಆಗಿನ ರಾಜಕೀಯ ಚಿತ್ರಣವನ್ನು ಹಾಡಿನ ರೀತಿಯಲ್ಲಿ ಕವನದಲ್ಲಿ ಬರೆದಿದ್ದಾರೆ. ನಂದಿಬೆಟ್ಟದಲ್ಲಿ ಆಂಧ್ರದ ಶಾಸಕರು ಇಂದಿರಮ್ಮನ ಪಿತೂರಿಯಿಂದಾಗಿ ಬಂದಿದ್ದೇವೆ. ರಾಮನ ದಂಡು(ಸೈನ್ಯ) ನಮ್ಮದು. ರಾವಣ ನಾದೇಂಡ್ಲ ನನ್ನು ರಾಮ (ಎನ್‌ಟಿಆರ್) ಮುಗಿಸುವನು. ಕನ್ನಡದ ಸಹೋದರರು ನಮಗಿಲ್ಲಿ ಆಶ್ರಯ ನೀಡಿದ್ದಾರೆ. ರಾಮಾಯಣದಲ್ಲಿ ರಾಮನಿಗೆ ಆಶ್ರಯ ಕೊಟ್ಟವರು ಕೂಡ ಕರ್ನಾಟಕದವರೇ ಎಂದು ಕನ್ನಡಿಗರ ಸೋದರ ವಾತ್ಸಲ್ಯವನ್ನು ಹೊಗಳಿದ್ದಾರೆ.

ಪಿ.ವೆಂಗಲರಾವ್ ಎಂಬ ಶಾಸಕ ನಂದಿ ಬೆಟ್ಟದಲ್ಲಿನ ಸುಂದರ ವಾತಾವರಣ, ಪ್ರಕೃತಿ ಸೌಂದರ್ಯದ ಕುರಿತು ಹೊಗಳಿ, ಬಹಳ ಅನುಕೂಲಗಳಿವೆ. ಇಲ್ಲಿನ ಟೆಲಿಫೋನ್ ಎಕ್ಸ್ ಚೇಂಚ್ ನವರು ಕೂಡ ನಮಗೆ ನೆರವಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಆಂಧ್ರದ ಶಾಸಕ ಬರೆದ ಮೆಚ್ಚುಗೆಯ ಮಾತುಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.