ADVERTISEMENT

ಶಿಡ್ಲಘಟ್ಟ: ಕನ್ನಡ ಭಾಷೆಯ ಪ್ರಾಚೀನತೆ ಸಾರುವ ಐದನೇ ಶತಮಾನದ ತಾಮ್ರಶಾಸನ

ಡಿ.ಜಿ.ಮಲ್ಲಿಕಾರ್ಜುನ
Published 1 ನವೆಂಬರ್ 2024, 6:25 IST
Last Updated 1 ನವೆಂಬರ್ 2024, 6:25 IST
<div class="paragraphs"><p>ಸುಗಟೂರು/ಚುಕ್ಕಟೂರು ತಾಮ್ರಶಾಸನ</p></div>

ಸುಗಟೂರು/ಚುಕ್ಕಟೂರು ತಾಮ್ರಶಾಸನ

   

ಶಿಡ್ಲಘಟ್ಟ: ಕನ್ನಡ ಭಾಷೆಯ ಪ್ರಾಚೀನತೆಯನ್ನು ಸುಮಾರು ಐದನೆಯ ಶತಮಾನಕ್ಕೆ ಕೊಂಡೊಯ್ಯುವುದಲ್ಲದೆ, ಶಿಡ್ಲಘಟ್ಟ ತಾಲ್ಲೂಕಿನ ಕನ್ನಡ ಕುರುಹುಗಳನ್ನು ತಿಳಿಸಿಕೊಡುವ ಶಾಸನ ‘ಸುಗಟೂರು/ಚುಕ್ಕಟೂರು ತಾಮ್ರಶಾಸನ’. 

1924ರಲ್ಲಿ ಜಂಗಮಕೋಟೆ ಶಾನುಭೋಗರಾದ ಸುಬ್ಬರಾವ್ ಅವರ ಬಳಿಯಿದ್ದ ಈ ತಾಮ್ರಶಾಸನಗಳನ್ನು ಮೈಸೂರು ಪುರಾತತ್ವ ಶಾಸ್ತ್ರ ಇಲಾಖೆ ಅಧಿಕಾರಿಗಳು ಸಂಗ್ರಹಿಸಿದ್ದಾರೆ. ಇದೀಗ ನವದೆಹಲಿಯ ನ್ಯಾಷನಲ್ ಮ್ಯೂಸಿಯಂನಲ್ಲಿ ಈ ತಾಮ್ರಶಾಸನವನ್ನು ಸಂರಕ್ಷಿಸಿಡಲಾಗಿದೆ.

ADVERTISEMENT

ಐದನೇ ಶತಮಾನದಲ್ಲಿ ಬಳಕೆಯಲ್ಲಿದ್ದ ಕನ್ನಡ ಲಿಪಿಯ ಈ ಶಾಸನದಲ್ಲಿ, ‘ಗಂಗವಂಶದ ಮೂಲಪುರುಷ ಕೊಂಗುಣಿಧರ್ಮ ಮಹಾಧಿರಾಜನ ಮುಮ್ಮಗ, ಮಾಧವನ ಮೊಮ್ಮಗ, ಕೃಷ್ಣವರ್ಮನ ಮಗನಾದ ಸಿಂಹವರ್ಮನು ಶೌರ್ಯ ಪರಾಕ್ರಮಗಳಲ್ಲಿ ದೇವಕುಮಾರನಂತೆ ಇದ್ದನು. ಪರ್ವತಮಾಲೆಗಳಂತೆ ಶೋಭಿಸುತ್ತಿದ್ದ ಆತನ ಬಾಹುಗಳ ಮೇಲಿನ ಸ್ನಾಯುಗಳ ಮೇಲೆ ಆತನು ಅನೇಕ ಯುದ್ಧಗಳಲ್ಲಿ ಹೋರಾಡಿ ಮಾಡಿಕೊಂಡಿದ್ದ ಗಾಯದ ಗುರುತುಗಳು ಬೆಟ್ಟದ ಕೊರಕಲುಗಳ ಹಾಗೆ ಕಾಣುತ್ತಿದ್ದವು. ಆತನ ಧ್ವನಿ ಲಾಟಹ ಎಂಬ ತಂತಿ ವಾದ್ಯದ ಸ್ವರದಂತೆ ಮಧುರವೂ, ಗಂಭೀರವೂ ಆಗಿತ್ತು’ ಎಂದು ಬರೆಯಲಾಗಿದೆ.

ಇಕ್ಷ್ವಾಕು ಕುಲದವರಾದ ಗಂಗರ ಮೂಲಪುರುಷ ಕೊಂಗುಣಿವರ್ಮ ಧರ್ಮ ಮಹಾರಾಜ ದಿಡಿಗ ಮತ್ತು ಆತನ ತಮ್ಮ ಮಾಧವರು ಗಂಗಪೆರೂರಿನ ಸಿಂಹನಂದಿ ಆಚಾರ್ಯರ ಆಶೀರ್ವಾದ ಪಡೆದು ಕೋಲಾರದಲ್ಲಿ ಕ್ರಿ.ಶ.350ರಲ್ಲಿ ಗಂಗರಾಜ್ಯ ಸ್ಥಾಪಿಸುತ್ತಾರೆ. ಪಲ್ಲವರ ಸಹಕಾರದೊಂದಿಗೆ ಕದಂಬರ ಸಾಮಂತರಾಗಿದ್ದ ಬಾಣರನ್ನು ಗೆದ್ದು ನಂದಿಗಿರಿ ಪ್ರಾಂತ್ಯಕ್ಕೂ ರಾಜ್ಯ ವಿಸ್ತರಣೆ ಮಾಡುತ್ತಾರೆ. ಅವರ ವಂಶೀಕರ ಐದನೇ ಶತಮಾನದ ತಾಮ್ರಶಾಸನಗಳಲ್ಲಿ ಕನ್ನಡ ಭಾಷೆಯ ಲಿಖಿತ (ಲಿಪಿ) ರೂಪದಲ್ಲಿ ಇರುವುದರಿಂದ ಕನ್ನಡ ಭಾಷೆಗೆ ಗಂಗರ ಕೊಡುಗೆಯನ್ನು ಇದರಿಂದ ಗುರುತಿಸಬಹುದಾಗಿದೆ. 

ಗಂಗರ ಮೂರನೇ ತಲೆಮಾರಿನ ಸಹೋದರರಾದ ಆರ್ಯವರ್ಮ, ಕೃಷ್ಣವರ್ಮ, ಹರಿವರ್ಮ ಇವರಲ್ಲಿ ಕೃಷ್ಣವರ್ಮನ ಸಂತತಿ ಆಳ್ವಿಕೆಯಲ್ಲಿ ಈ ಗ್ರಾಮ ಇದ್ದಿದ್ದು ‘ಚುಕ್ಕಟೂರು ತಾಮ್ರಶಾಸನ’ ದಿಂದ ತಿಳಿದುಬರುತ್ತದೆ. ಚರಿತ್ರೆ ಅಷ್ಟಾಗಿ ಗುರುತಿಸದ ಗಂಗವಂಶದ ಕೊಂಗುಣಿವರ್ಮನ ಮುಮ್ಮಗ ಸಿಂಹವರ್ಮ ತನ್ನ ತಮ್ಮ ವೀರವರ್ಮನ ಹೆಸರಿನಲ್ಲಿ ಸುಗಟೂರು ಮತ್ತು ಅದರ ಅಗ್ರಹಾರವಾದ ವೀರಮಂಗಲದ 74 ಬ್ರಾಹ್ಮಣರಿಗೆ ದಾನಗಳನ್ನು ಕೊಟ್ಟ ಉಲ್ಲೇಖ ಇದರಲ್ಲಿ ಸಿಗುತ್ತದೆ.

ಗಂಗ ವಂಶದ ಅಧ್ಯಯನಕ್ಕೆ ಪೂರಕ
ಇತಿಹಾಸಕಾರರು ಗಂಗ ವಂಶದ ಅಧ್ಯಯನಕ್ಕೆ ತಮಗೆ ಲಭ್ಯವಿರುವ ತಾಮ್ರಶಾಸನಗಳನ್ನೇ ಹೆಚ್ಚಾಗಿ ಬಳಸಿಕೊಂಡಿದ್ದಾರೆ. ಹಲವಾರು ತಾಮ್ರಪಟಗಳ ಸಾರಾಂಶವೇ ಈಗ ನಾವು ಓದುವ ಗಂಗರ ವಂಶವೃಕ್ಷ. ಇತಿಹಾಸಕಾರ ಕೆ.ವಿ.ರಮೇಶ್ ಅವರು ತಮ್ಮ ಅಧ್ಯಯನದಲ್ಲಿ ಮತ್ತೆ ಒಂದೆರಡು ಶಾಖೆಗಳನ್ನು ಗುರುತಿಸಿದ್ದಾರೆ. ಚುಕ್ಕಟೂರು, ಹೊಸಪೇಟೆ, ಗುಮ್ಮರೆಡ್ಡಿಪುರ, ಬೆಂಡಗಾನಹಳ್ಳಿ ತಾಮ್ರಶಾಸನಗಳ ಆಧಾರದಲ್ಲಿ ಅವರು ಕೈವಾರ ಮತ್ತು ಪರಿವಿ ಗಂಗರ ಶಾಖೆ ಒಂದನ್ನು ವಿಂಗಡಣೆ ಮಾಡಿದ್ದಾರೆ. ಕೃಷ್ಣವರ್ಮನ ನಂತರ ವಿಷ್ಣುಗೋಪನಿಂದ ಮುಖ್ಯ ಶಾಖೆ ಮುಂದುವರೆದರೆ ಸಿಂಹವರ್ಮನಿಂದ ಕೈವಾರ ಗಂಗರ ಶಾಖೆ ಬೆಳೆಯುತ್ತದೆ - ‌ಶಾಸನತಜ್ಞ ಡಿ.ಎನ್.ಸುದರ್ಶನರೆಡ್ಡಿ 
ಸುಗಟೂರು/ಚುಕ್ಕಟೂರು ತಾಮ್ರಶಾಸನ
ಸುಗಟೂರು/ಚುಕ್ಕಟೂರು ತಾಮ್ರಶಾಸನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.