ADVERTISEMENT

ಬಾಗೇಪಲ್ಲಿಯಲ್ಲಿ ಅದ್ದೂರಿ ದಸರಾ ಉತ್ಸವ

ಕಚೇರಿ ಜಂಜಾಟ ಮರೆತು ಸಾಮೂಹಿಕವಾಗಿ ಹಬ್ಬ ಆಚರಣೆ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2022, 7:14 IST
Last Updated 7 ಅಕ್ಟೋಬರ್ 2022, 7:14 IST
ದಸರಾ ಹಬ್ಬದ ಪ್ರಯುಕ್ತ ಬಾಗೇಪಲ್ಲಿ ಪಟ್ಟಣದ ಮುಖ್ಯರಸ್ತೆಯಲ್ಲಿ ತಹಶೀಲ್ದಾರ್ ವೈ.ರವಿ ಅವರನ್ನು ಅಂಗನವಾಡಿ ಕಾರ್ಯಕರ್ತೆಯರ ಪೂರ್ಣಕುಂಭ ಸ್ವಾಗತದ, ನಾದಸ್ವರ ಕಲಾವಿದರ ತಂಡಗಳೊಂದಿಗೆ ಮೆರವಣಿಗೆ ಮಾಡಲಾಯಿತು
ದಸರಾ ಹಬ್ಬದ ಪ್ರಯುಕ್ತ ಬಾಗೇಪಲ್ಲಿ ಪಟ್ಟಣದ ಮುಖ್ಯರಸ್ತೆಯಲ್ಲಿ ತಹಶೀಲ್ದಾರ್ ವೈ.ರವಿ ಅವರನ್ನು ಅಂಗನವಾಡಿ ಕಾರ್ಯಕರ್ತೆಯರ ಪೂರ್ಣಕುಂಭ ಸ್ವಾಗತದ, ನಾದಸ್ವರ ಕಲಾವಿದರ ತಂಡಗಳೊಂದಿಗೆ ಮೆರವಣಿಗೆ ಮಾಡಲಾಯಿತು   

ಬಾಗೇಪಲ್ಲಿ: ಸದಾ ಕಡತ-ಕಚೇರಿಗಳಲ್ಲಿ ಮುಳಗುವ ಅಧಿಕಾರಿಗಳ ಮುಖದಲ್ಲಿ ದೈನಂದಿನ ಆಲಸ್ಯ ಇರಲಿಲ್ಲ. ಅಪ್ಪಟ ದೇಸಿ ಶೈಲಿಯಲ್ಲಿ ಬಿಳಿಯ ಪಂಚೆ, ಶರ್ಟು ಹೆಗಲ ಮೇಲೊಂದು ಟವೆಲ್ಲು. ಪರಸ್ಪರ ಕೈ ಕುಲಕಾಟ, ನಗು ಮೊಖದೊಂದಿಗೆ ಓಡಾಟ. ತಮಟೆಯ ಸದ್ದಿಗೆ ಕುಣಿತ. ಪಟ್ಟಣದ ಮುಖ್ಯರಸ್ತೆಯಲ್ಲಿ ಬುಧವಾರ ಸಂಜೆ ದಸರಾ ಮೆರವಣಿಗೆಯ ಉತ್ಸಾಹದ ಹೊನಲು ಹರಿದಂತೆ ಕಂಡಿತು.

ಇವೆಲ್ಲವೂ ತಹಶೀಲ್ದಾರ್ ವೈ.ರವಿ ಅವರ ನೇತೃತ್ವದಲ್ಲಿ ಅರ್ಧ ಶತಮಾನದ ಬಳಿಕ ನಡೆದ ದಸರಾ ಉತ್ಸವ ಮೆರವಣಿಗೆಯ ಝಲಕ್.

ಪಟ್ಟಣದ ಡಾ.ಎಚ್.ಎನ್ ವೃತ್ತಕ್ಕೆ ತಹಶೀಲ್ದಾರ್ ವೈ.ರವಿ ಆಗಮಿಸುತ್ತಿದ್ದಂತೆ ಅವರಿಗೆ ತಾಲ್ಲೂಕಿನ ಸವಿತಾ ಸಮಾಜದ ಅಧ್ಯಕ್ಷ ಶ್ರೀನಿವಾಸ್, ರಾಮಾಂಜಿ, ಮಾರುತಿ, ಗಜೇಂದ್ರ ಸೇರಿದಂತೆ ಡೋಲು ಕಲಾವಿದರು ಮಂಗಳ ವಾದ್ಯಗಳೊಂದಿಗೆ ಬರಮಾಡಿಕೊಂಡರು. ತಹಶೀಲ್ದಾರ್ ಭುವನೇಶ್ವರಿಗೆ ಪುಷ್ಪಾರ್ಚನೆ ಮಾಡಿ ಮೆರವಣಿಗೆಗೆ ಚಾಲನೆ ನೀಡಿದರು.

ADVERTISEMENT

ರೈತ ಸಂಘದ ಮುಖಂಡ ಲಕ್ಷ್ಮಣರೆಡ್ಡಿ ನೇತೃತ್ವದಲ್ಲಿ ಹತ್ತಾರು ಎತ್ತಿನ ಗಾಡಿಗಳಿಗೆ ಸಿಂಗಾರಮಾಡಿ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

ಜನಪದ ಕಲಾವಿದ ಎಂ.ಸಿ.ಅಶ್ವತ್ಥಪ್ಪ ನೇತೃತ್ವದಲ್ಲಿ ಮಲ್ಲಸಂದ್ರದ ಯುವ ಕಲಾವಿದರ ಮಜ್ನು ನೃತ್ಯ ಗಮನ ಸೆಳೆಯಿತು.

ಕನ್ನಿಕಾಪರಮೇಶ್ವರಿ ದೇವಾಲಯಕ್ಕೆ ತಹಶೀಲ್ದಾರ್ ಆಗಮಿಸಿ ವಿಶೇಷ ಪೂಜೆಯಲ್ಲಿ ಭಾಗಿಯಾದರು. ವಾಸವಿ ಸಂಘದ ಮಂಜುನಾಥ, ವೆಂಕಟೇಶಬಾಬು, ರಾಜೇಶ, ಇಂದ್ರಾಣಿ, ಶ್ವೇತಾ, ಪದಾಧಿಕಾರಿಗಳು, ಮಹಿಳೆಯರು ಪೂಜಾ ಕೈಂಕರ್ಯಗಳನ್ನು ನಡೆಸಿಕೊಟ್ಟರು.

ಸಂಜೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಾಯೋಜಕತ್ವದಲ್ಲಿ ಚಿಕ್ಕಬಳ್ಳಾಪುರದ ವಿವೇಕಾನಂದ ಕಲಾ ಬಳಗದ ಸೋ.ಸು.ನಾಗೇಂದ್ರನಾಥ್ ತಂಡ ಸುಗಮ ಸಂಗೀತ ನಡೆಸಿಕೊಟ್ಟತು.

ಕಾರ್ಯಕ್ರಮದಲ್ಲಿ ಗ್ರೇಡ್-2 ತಹಶೀಲ್ದಾರ್ ವಿ.ಸುಬ್ರಮಣ್ಯಂ, ತಾಲ್ಲೂಕು ಶಿರಸ್ತೇದಾರ್ ನಾಗರಾಜ್, ರೇಷ್ಮೆ ಸಹಾಯಕ ಅಧಿಕಾರಿ ಡಾ.ಚಿನ್ನಕೈವಾರಮಯ್ಯ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಕೆ.ಎಂ.ನಯಾಜ್ ಅಹಮದ್, ಹಿರಿಯ ವಕೀಲ ಎ.ಜಿ.ಸುಧಾಕರ್, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ.ಎನ್.ಕೃಷ್ಣಾರೆಡ್ಡಿ, ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಬಿ.ವಿ.ವೆಂಕಟರವಣ, ರೈತ ಸಂಘದ ಹಸಿರು ಸೇನೆ ಮಹಿಳಾ ಸಂಚಾಲಕಿ ಸಿ.ಉಮಾ, ಸಂಚಾಲಕ ಲಕ್ಷ್ಮಣರೆಡ್ಡಿ, ಕನ್ನಡ ಪರ ಸಂಘಟನೆಗಳ ಮುಖಂಡರಾದ ಹರೀಶ್, ಬಾಬಾಜಾನ್, ಬಿಟಿಸಿಸೀನಾ, ಜಬೀವುಲ್ಲಾ, ರವೀಂದ್ರ ಮತ್ತಿತರರು ಹಾಜರಿದ್ದರು.

ತಮಟೆ ಸದ್ದಿಗೆ ಅಧಿಕಾರಿಗಳ ಕುಣಿತ
ತಮಟೆ ಕಲಾವಿದರ ಆಕರ್ಷಕ ತಮಟೆ ಸದ್ದಿಗೆಹಮ್ಮು-ಬಿಮ್ಮುಗಳನ್ನು ತೊರೆದ ಕಂದಾಯ ಇಲಾಖೆಯ ಅಧಿಕಾರಿಗಳು, ತಾಲ್ಲೂಕು ಮಟ್ಟದ ಅಧಿಕಾರಿಗಳು, ಸಂಘಸಂಸ್ಥೆಗಳ ಮುಖಂಡರು ಕುಣಿದು ಕುಪ್ಪಳಿಸಿದರು. ಜನರು ಶಿಳ್ಳೆ, ಕೇಕೆ ಹಾಕಿ ಜಯಘೋಷಗಳನ್ನು ಕೂಗಿದರು.

ಮೆರವಣಿಗೆ ನಂತರ ತಾಲ್ಲೂಕು ಕಚೇರಿಯಲ್ಲಿ ಖಾಸಗಿ ದರ್ಬಾರ್ ನಡೆಸಿ ಜಮಾಬಂದಿ ಮಾಡಲಾಯಿತು. ನಂತರ ತಾಲ್ಲೂಕು ಕಚೇರಿ ಮುಂದೆ ಸಾರ್ವಜನಿಕ ದರ್ಬಾರ್ ಮಾಡಿದಾಗ, ನೆರೆದ ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಿದರು. ಸಮಸ್ಯೆಗಳಿಗೆ ಶೀಘ್ರವೇ ಸ್ಪಂದಿಸುತ್ತೇನೆ ಎಂದು ತಹಶೀಲ್ದಾರ್ ವೈ.ರವಿ ಭರವಸೆ ನೀಡಿದರು.

ಗಮನ ಸೆಳೆದ ಲಂಬಾಣಿ ಹಾಡು
ಲಂಬಾಣಿ ಮಹಿಳೆಯರು ತಮ್ಮದೇ ಶೈಲಿಯಲ್ಲಿ ಹಾಡುತ್ತಾ, ಕುಣಿದರು. ವಿವಿಧ ಗ್ರಾಮಗಳ ತಮಟೆ ಕಲಾವಿದರು ತಮಟೆಗಳನ್ನು ಬಾರಿಸುತ್ತಾ ಹಿಂಬಾಲಿಸಿದರು. ರೈತ ಸಂಘದ ಮಹಿಳಾ ರಾಜ್ಯ ಸಂಚಾಲಕಿ ಉಮಾ ನೇತೃತ್ವದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಪೂರ್ಣಕುಂಭ ಸ್ವಾಗತ ಮಾಡಿದರು. ಇದಕ್ಕೆ ಮೆರಗು ನೀಡುವಂತೆ ವಾಸವಿ ಮಹಿಳಾ ಸಂಘದ ಸದಸ್ಯರುತಿಳಿ ಗುಲಾಬಿ ಸೀರೆಗಳನ್ನು ಉಟ್ಟು ಕೈಯ್ಯಲ್ಲಿ ಆರತಿ, ಕಳಶ ಹಿಡಿದು ನಡೆದಿದ್ದು ವಿಶೇಷವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.