ADVERTISEMENT

ಶಿಡ್ಲಘಟ್ಟ | ಅಪರೂಪದ ಗಿಡುಗ ಪತಂಗ ಪತ್ತೆ

ಡಿ.ಜಿ.ಮಲ್ಲಿಕಾರ್ಜುನ
Published 13 ಜುಲೈ 2024, 7:02 IST
Last Updated 13 ಜುಲೈ 2024, 7:02 IST
ಸಿಲ್ವರ್ ಲೈನ್ಡ್ ಹಾಕ್ ಮಾತ್
ಸಿಲ್ವರ್ ಲೈನ್ಡ್ ಹಾಕ್ ಮಾತ್   

ಶಿಡ್ಲಘಟ್ಟ: ಬಳ್ಳಿ ಗಿಡುಗ-ಪತಂಗ ಅಥವಾ ಬೆಳ್ಳಿ-ಪಟ್ಟೆಯ ಗಿಡುಗ-ಪತಂಗ ಎಂದೇ ಹೆಸರಾದ ಅಪರೂಪದ ಪತಂಗ ಮೇಲೂರಿನ ಬಿ.ಎನ್.ಸಚಿನ್ ಅವರ ತೋಟದಲ್ಲಿ ಕಂಡುಬಂದಿದೆ.

ವಿಶೇಷವೆಂದರೆ ರಾಷ್ಟ್ರೀಯ ಪತಂಗ ವಾರವೆಂದು ಜುಲೈ ತಿಂಗಳ ಕಡೆಯ ವಾರವನ್ನು ದೇಶದೆಲ್ಲೆಡೆ ಆಚರಿಸಲಾಗುತ್ತದೆ. ಇದೇ ತಿಂಗಳಿನಲ್ಲಿಯೇ ಈ ವಿಶೇಷ ಪತಂಗ ತಾಲ್ಲೂಕಿನ ರೈತರೊಬ್ಬರ ಕಣ್ಣಿಗೆ ಬಿದ್ದಿರುವುದು ಕಾಕತಾಳೀಯವಾಗಿದೆ.

ಶಿಡ್ಲಘಟ್ಟ ತಾಲ್ಲೂಕು ರೇಷ್ಮೆಯಿಂದಲೇ ತನ್ನ ಹಿರಿಮೆ ಪಡೆದಿದೆ. ರೇಷ್ಮೆಯ ಮೂಲ ರೇಷ್ಮೆ ಪತಂಗ. ಹಾಗಾಗಿ ಶಿಡ್ಲಘಟ್ಟಕ್ಕೂ ಪತಂಗಕ್ಕೂ ಅವಿನಾಭಾವ ಸಂಬಂಧವೂ ಇದೆ.

ADVERTISEMENT

ಮೇಲೂರಿನ ಬಿ.ಎನ್.ಸಚಿನ್ ಅವರ ತೋಟದಲ್ಲಿ ಕಾಣಿಸಿರುವ ಪತಂಗವನ್ನು ಇಂಗ್ಲಿಷಿನಲ್ಲಿ ‘ಸಿಲ್ವರ್ ಲೈನ್ಡ್ ಹಾಕ್ ಮಾತ್’ ಎನ್ನುವರು. ಇದು ಸ್ಪಿಂಗಿಡೇ ಕುಟುಂಬದ ಪತಂಗವಾಗಿದೆ. ಸಾಮಾನ್ಯವಾಗಿ ದ್ರಾಕ್ಷಿ, ಪನ್ನೀರು ಹಣ್ಣು ಮುಂತಾದ ಸಸ್ಯಗಳ ಎಲೆಗಳು ಈ ಪತಂಗದ ಕಂಬಳಿಹುಳುಗಳ ಆಹಾರ.

ಪತಂಗವು ಚಿಟ್ಟೆಯ ಹತ್ತಿರದ ಸಂಬಂಧಿ. ಎರಡೂ ಲೆಪಿಡಾಪ್ಟೆರಾ ವರ್ಗಕ್ಕೆ ಸೇರಿದವು. ಆದರೆ ಪತಂಗಗಳು ನಿಶಾಚರಜೀವಿಗಳು. ಅವುಗಳಲ್ಲಿ ಕೆಲವು ಮುಸ್ಸಂಜೆ ಬೆಳಕಲ್ಲಿ ತಮ್ಮ ಚಟುವಟಿಕೆ ನಡೆಸಿದರೆ, ಇನ್ನು ಕೆಲವು ಹಗಲುವಾಸಿಗಳು. ಕೆಲ ಪತಂಗಗಳ ಕಂಬಳಿ ಹುಳುಗಳು ಕೃಷಿಗೆ ಹಾನಿ ಮಾಡಿದರೆ, ಕೆಲವು ಲಾಭದಾಯಕ. ರೇಷ್ಮೆ ಪತಂಗದ ಹುಳು ಬೆಳೆಸಿ ಅದರ ಗೂಡಿನಿಂದ ರೇಷ್ಮೆ ನೂಲು ತೆಗೆಯುವುದು ಲಾಭದಾಯಕ ಉದ್ಯಮ.

‘ನಾನು ಬೆಳಗ್ಗೆ ತೋಟದ ಕಡೆ ಹೊರಟಾಗ ಈ ಪತಂಗವು ಕಂಡಿತು. ದೂರದಿಂದ ನೋಡಿ ಯಾವುದೋ ಹಕ್ಕಿ ಎಂದುಕೊಂಡೆ. ಹತ್ತಿರ ಹೋಗಿ ನೋಡಿದಾಗ ವಿಚಿತ್ರವಾದ ಚಿಟ್ಟೆ ಎಂದನಿಸಿತು. ನೆಲದ ಮೇಲೆ ಕುಳಿತಾಗ ಕುತೂಹಲದಿಂದ ಫೋಟೋ ತೆಗೆದೆ. ನಂತರ ಚಂಗನೆ ಹಾರಿ ದೂರ ಹೋಯಿತು. ಈ ರೀತಿಯ ಪತಂಗವನ್ನು ನಾನು ಇದುವರೆಗೂ ನೋಡಿರಲಿಲ್ಲ’ ಎಂದು ಸಚಿನ್ ತಿಳಿಸಿದರು.

ಚಿಟ್ಟೆಗಳು ಮತ್ತು ಪತಂಗಗಳು ಒಂದೇ ಜಾತಿಯವು ಆದರೆ ಕೆಲವು ವ್ಯತ್ಯಾಸಗಳಿರುತ್ತವೆ. ಚಿಟ್ಟೆಗಳು ಹಗಲು ಜೀವಿಗಳಾದರೆ, ಪತಂಗಗಳು ನಿಶಾಚರಿಗಳು. ಚಿಟ್ಟೆಗಳು ರೆಕ್ಕೆಗಳನ್ನು ಮೇಲಕ್ಕೆ ಮಡಚುತ್ತವೆ, ಆದರೆ ಪತಂಗಗಳು ವಿಮಾನದ ರೆಕ್ಕೆಗಳಂತೆ ಅಡ್ಡಡ್ಡ ಅಗಲಿಸಿರುತ್ತವೆ. ಚಿಟ್ಟೆಗಳ ಮೈ ಬಡಕಲು, ಮೀಸೆ ಅನ್ನೋದು ಬೆಂಕಿಕಡ್ಡಿ ಥರಾ, ಪತಂಗಗಳದ್ದು ಟೊಣಪ ಮೈ, ಹಂಚಿಕಡ್ಡಿ ಮೀಸೆ. ನಿಶಾಚರ ಜೀವಿಗಳಾದ ಈ ಪತಂಗಗಳನ್ನು ನೋಡುವುದೇ ವಿರಳ.

‘ಭಾರತದಲ್ಲಿ 10 ಸಾವಿರಕ್ಕೂ ಅಧಿಕ ರೀತಿಯ ಪತಂಗಗಳಿವೆ. ನಮ್ಮ ತಾಲ್ಲೂಕಿನಲ್ಲೂ ವೈವಿಧ್ಯಮಯ ಪತಂಗಗಳನ್ನು ಕಾಣಬಹುದು. ಪತಂಗಗಳು ಸಾಕಷ್ಟು ಇವೆ ಎಂದರೆ, ಅದರ ಅರ್ಥ ಪರಿಸರ ವ್ಯವಸ್ಥೆ ಆರೋಗ್ಯವಾಗಿದೆ ಎಂದು. ಈ ಭಾಗದಲ್ಲಿರುವ ಪತಂಗಗಳ ಪ್ರಭೇದ ಗುರುತಿಸುವುದು, ಈ ರಾಷ್ಟ್ರೀಯ ಪತಂಗ ವಾರದ ಮುಖ್ಯ ಉದ್ದೇಶವಾಗಿದೆ. ಈ ಸಂದರ್ಭದಲ್ಲಿ ಪತಂಗಗಳ ಬಗ್ಗೆ ಅರಿವು ಮೂಡಿಸುವ ಕಾರ್ಯ ವಿಶ್ವದ 40 ರಾಜ್ಯಗಳಲ್ಲಿ ನಡೆಯುತ್ತಿದೆ’ ಎಂದು ಪ್ರಾಧ್ಯಾಪಕ ಅಜಿತ್‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.