ಚಿಕ್ಕಬಳ್ಳಾಪುರ: ‘ಸರ್ ನಮ್ಮ ಸರ್.ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣಕ್ಕೆ ಸಿಂಥೆಟಿಕ್ ಟ್ರ್ಯಾಕ್ ನಿರ್ಮಿಸಿ’–ಇದು ರಾಜ್ಯ ಮತ್ತು ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಷನ್ ಪದಾಧಿಕಾರಿಗಳು, ಜಿಲ್ಲೆಯ ಕ್ರೀಡಾಪಟುಗಳು ಪ್ರತಿ ಸರ್ಕಾರದಲ್ಲಿಯೂ ಕ್ರೀಡಾ ಸಚಿವರು ಮತ್ತು ಇಲಾಖೆಯ ಉನ್ನತ ಅಧಿಕಾರಿಗಳಿಗೆ ಸಲ್ಲಿಸುವ ಮನವಿ.
ಹೀಗೆ ದಶಕಗಳಿಂದ ಮನವಿ ಸಲ್ಲಿಸುತ್ತಲೇ ಬಂದಿದ್ದಾರೆ. ಆದರೂ ಜಿಲ್ಲಾ ಕ್ರೀಡಾಂಗಣಕ್ಕೆ ಸಿಂಥೆಟಿಕ್ ಟ್ರ್ಯಾಕ್ ಮರೀಚಿಕೆಯಾಗಿಯೇ ಇದೆ. ಸರ್ಕಾರಗಳು ಸಿಂಥೆಟಿಕ್ ಟ್ರ್ಯಾಕ್ ನಿರ್ಮಾಣದ ಭರವಸೆ ನೀಡುತ್ತಿವೆಯೇ ಹೊರತು ಕಾರ್ಯಗತಗೊಳಿಸುತ್ತಿಲ್ಲ.
ಜಿಲ್ಲಾ ಕ್ರೀಡಾಂಗಣದಲ್ಲಿ ಸಿಂಥೆಟಿಕ್ ಟ್ರ್ಯಾಕ್ ನಿರ್ಮಿಸಬೇಕು ಎನ್ನುವುದು ಜಿಲ್ಲೆಯ ಕ್ರೀಡಾಪಟುಗಳ ಅನೇಕ ವರ್ಷಗಳ ಬಹುಮುಖ್ಯ ಬೇಡಿಕೆ. ಆದರೆ ಈ ಬೇಡಿಕೆ ನನಸಾಗಿಲ್ಲ. ಸದ್ಯ ಇರುವ ಟ್ರ್ಯಾಕ್‌ನಲ್ಲಿ ಮರಳಿದೆ. ಹೀಗಾಗಿ ಅಥ್ಲೆಟಿಕ್ ತಾಲೀಮು ನಡೆಸಲು ತೊಂದರೆ ಎನ್ನುವ ಮಾತುಗಳು ಕ್ರೀಡಾಪಟುಗಳದ್ದು.
ಈ ಹಿಂದೆ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಜಿಲ್ಲಾ ಕ್ರೀಡಾಂಗಣದಲ್ಲಿ ಅಂತರರಾಷ್ಟ್ರೀಯ ಗುಣಮಟ್ಟದ ಸಿಂಥೆಟಿಕ್ ಟ್ರ್ಯಾಕ್, ವಸತಿ ನಿಲಯ ಸ್ಥಾಪಿಸಬೇಕು ಎಂದು ಯುವಜನ ಸೇವೆ ಮತ್ತು ಕ್ರೀಡಾ ಸಚಿವರಾಗಿದ್ದ ಗೂಳಿಹಟ್ಟಿ ಶೇಖರ್ ಅಧ್ಯಕ್ಷತೆಯ ಸಭೆ ತೀರ್ಮಾನ ತೆಗೆದುಕೊಂಡಿತ್ತು. ಅದನ್ನು ಬಜೆಟ್‌ನಲ್ಲಿ ಸೇರಿಸುವ ಪ್ರಯತ್ನ ಕೂಡ ನಡೆದಿತ್ತು. ಆದರೆ ರಾಜಕೀಯ ಪಲ್ಲಟಗಳಿಂದಾಗಿ ಅಧಿಕೃತವಾಗಿ ಘೋಷಣೆಯಾಗಲೇ ಇಲ್ಲ ಎಂದು ಹಿರಿಯ ಕ್ರೀಡಾಪಟುಗಳು ಹೇಳುವರು.
ಜಿಲ್ಲಾ ಕ್ರೀಡಾ ಶಾಲೆ ವಿದ್ಯಾರ್ಥಿಗಳು ತಾಲೀಮಿಗಾಗಿ ಇದೇ ಕ್ರೀಡಾಂಗಣ ಬಳಸುತ್ತಾರೆ. ಆದರೆ ಟ್ರ್ಯಾಕ್ ನಿರ್ವಹಣೆ ಇಲ್ಲ. ಮಳೆ ಬಂದ ವೇಳೆ ಇದು ಮತ್ತಷ್ಟು ಅಧ್ವಾನ ಎನ್ನುವಂತೆ ಆಗುತ್ತದೆ.
2021ರ ಮಾರ್ಚ್‌ನಲ್ಲಿ ಜಿಲ್ಲೆಗೆ ಭೇಟಿ ನೀಡಿದ್ದ ಕ್ರೀಡಾ ಸಚಿವ ಕೆ.ಸಿ.ನಾರಾಯಣ ಗೌಡ ಕ್ರೀಡಾಂಗಣದಲ್ಲಿ ಸಿಂಥೆಟಿಕ್ ಟ್ರ್ಯಾಕ್ ಅಳವಡಿಸುವ ಸಂಬಂಧ ಈಗಾಗಲೇ ₹ 8.5 ಕೋಟಿಯ ಪ್ರಸ್ತಾವ ಸಲ್ಲಿಕೆ ಆಗಿದೆ. ಸರ್ಕಾರ ಹಂತ ಹಂತವಾಗಿ ಹಣ ಬಿಡುಗಡೆ ಮಾಡಲಿದೆ ಎಂದಿದ್ದರು. ಆದರೆ ಸಚಿವರ ಭರವಸೆ ನಾಲ್ಕು ವರ್ಷವಾದರೂ ಕಾರ್ಯಗತವಾಗಿಲ್ಲ.
ಸಿದ್ದರಾಮಯ್ಯ ನೇತೃತ್ವದ ಸರ್ಕಾರ ರಚನೆಯಾದ ನಂತರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಜಿಲ್ಲಾ ಕ್ರೀಡಾಂಗಣಕ್ಕೆ ಕಾಯಕಲ್ಪ ನೀಡುವ ಮಾತುಗಳನ್ನಾಡಿದ್ದರು. ₹ 70 ಕೋಟಿ ವೆಚ್ಚದಲ್ಲಿ ಕ್ರೀಡಾಂಗಣ ಅಭಿವೃದ್ಧಿಗೆ ಕ್ರಮವಹಿಸುವುದಾಗಿ ಭರವಸೆ ನೀಡಿದ್ದರು. ಈ ಸಂಬಂಧ ಅಭಿವೃದ್ಧಿಯ ನೀಲನಕ್ಷೆಯನ್ನು ಸಹ ರೂಪಿಸಲಾಗಿತ್ತು. ಯಾವ ಅಂಕಣ ನಿರ್ಮಾಣವಾಗಬೇಕು, ಸಿಂಥೆಟಿಕ್ ಟ್ರ್ಯಾಕ್, ಒಳಾಂಗಣ ಕ್ರೀಡಾಂಗಣ ಅಭಿವೃದ್ಧಿ ಹೀಗೆ ವಿವಿಧ ಯೋಜನೆಗಳು ಈ ನೀಲನಕ್ಷೆಯಲ್ಲಿ ಇದ್ದವು. ಆದರೆ ಸಚಿವರ ಮಹತ್ವಕಾಂಕ್ಷೆಯ ಯೋಜನೆಗೆ ಅನುದಾನದ ಕೊರತೆ ಎದುರಾಗಿದೆ.
ಸಿಂಥೆಟಿಕ್ ಟ್ರ್ಯಾಕ್ ಮೊದಲು ನಿರ್ಮಿಸಿ ಎಂದು ಜಿಲ್ಲೆಯ ಕ್ರೀಡಾಪಟುಗಳು ಆಗ್ರಹಿಸುತ್ತಿದ್ದಾರೆ.
ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿ
‘ಜಿಲ್ಲಾ ಕ್ರೀಡಾಂಗಣ ಅಭಿವೃದ್ಧಿಯ ಆಲೋಚನೆಯನ್ನು ಕೈಬಿಟ್ಟಿಲ್ಲ. ಕಳೆದ ವರ್ಷ ಕ್ರೀಡಾ ಇಲಾಖೆಗೆ ಒಟ್ಟು ₹ 100 ಕೋಟಿ ಅನುದಾನ ನೀಡಲಾಗಿದೆ. ಈಗ ನಾವು ಈ ಒಂದೇ ಕ್ರೀಡಾಂಗಣ ಅಭಿವೃದ್ಧಿಗೆ ₹ 70 ಕೋಟಿ ಕೇಳಿದರೆ ಕೊಡುವರೇ? ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಕ್ರೀಡಾಂಗಣ ಅಭಿವೃದ್ಧಿಗೊಳಿಸಬಹುದಾ ಎಂದು ಆಲೋಚಿಸುತ್ತಿದ್ದೇವೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಇತ್ತೀಚೆಗೆ ನಡೆದ ರಾಜ್ಯೋತ್ಸವದ ಸಮಯದಲ್ಲಿ ತಿಳಿಸಿದರು.
‘ಮನವಿ ಸಲ್ಲಿಸಿದರೂ ಉಪಯೋಗವಿಲ್ಲ’
ಸಿಂಥೆಟಿಕ್ ಟ್ರ್ಯಾಕ್ ನಿರ್ಮಿಸಬೇಕು ಎಂದು ಹಲವು ವರ್ಷಗಳಿಂದ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಹಲವು ಮುಖ್ಯಮಂತ್ರಿಗಳಿಗೆ ಸಚಿವರಿಗೆ ಕ್ರೀಡಾ ಇಲಾಖೆ ಆಯುಕ್ತರಿಗೆ ಈ ಬಗ್ಗೆ ಲಿಖಿತವಾಗಿ ಮನವಿ ಸಲ್ಲಿಸಿದ್ದೇವೆ. ಆದರೂ ಟ್ರ್ಯಾಕ್ ನಿರ್ಮಾಣಕ್ಕೆ ಯಾರೂ ಮನಸ್ಸು ಮಾಡುತ್ತಿಲ್ಲ ಎಂದು ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಮಂಚನಬಲೆ ಶ್ರೀನಿವಾಸ್ ತಿಳಿಸಿದರು. ಕೋಲಾರದಲ್ಲಿ ಸಿಂಥೆಟಿಕ್ ಟ್ರ್ಯಾಕ್ ನಿರ್ಮಾಣವಾಗಿ ರಾಜ್ಯಮಟ್ಟದ ಕ್ರೀಡಾಕೂಟಗಳು ನಡೆಯುತ್ತಿವೆ. ಆದರೆ 16 ವರ್ಷಗಳಿಂದಲೂ ಸಚಿವರಿಗೆ ಮನವಿ ನೀಡುತ್ತಿದ್ದರೂ ಪ್ರಯೋಜನವಾಗಿಲ್ಲ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.