ADVERTISEMENT

ಶಿಡ್ಲಘಟ್ಟ | ಕೃಷಿ ಕಾಯಕದಲ್ಲೂ ಯಶ ಕಂಡ ಶಿಕ್ಷಕ

ಹಳ್ಳಿಯ ಶಿಕ್ಷಕನಿಗೆ ಮನೆ, ಮನವೆಲ್ಲಾ ಫಸಲು

ಡಿ.ಜಿ.ಮಲ್ಲಿಕಾರ್ಜುನ
Published 22 ಸೆಪ್ಟೆಂಬರ್ 2024, 6:38 IST
Last Updated 22 ಸೆಪ್ಟೆಂಬರ್ 2024, 6:38 IST
ಶಿಡ್ಲಘಟ್ಟ ತಾಲ್ಲೂಕಿನ ಗುಡ್ಲನರಸಿಂಹನಹಳ್ಳಿಯ ತಮ್ಮ ತೋಟದಲ್ಲಿ ಸೋರೆಕಾಯಿ ಬೆಳೆದಿರುವ ಜಿ.ಎನ್.ಮನ್ನಾರಸ್ವಾಮಿ
ಶಿಡ್ಲಘಟ್ಟ ತಾಲ್ಲೂಕಿನ ಗುಡ್ಲನರಸಿಂಹನಹಳ್ಳಿಯ ತಮ್ಮ ತೋಟದಲ್ಲಿ ಸೋರೆಕಾಯಿ ಬೆಳೆದಿರುವ ಜಿ.ಎನ್.ಮನ್ನಾರಸ್ವಾಮಿ   

ಶಿಡ್ಲಘಟ್ಟ: ಸಾಮಾನ್ಯವಾಗಿ ಸರ್ಕಾರಿ ನೌಕರರು ತಮ್ಮ ಉದ್ಯೋಗ, ಮಕ್ಕಳ ಶಿಕ್ಷಣದ ನೆಪದಲ್ಲಿ ಹಳ್ಳಿಗಳಿಂದ ನಗರಗಳಿಗೆ ವಲಸೆ ಹೋಗುವರು. ಇದಕ್ಕೆ ಅಪವಾದವೆಂಬಂತೆ ಶಿಕ್ಷಕ ಜಿ.ಎನ್.ಮನ್ನಾರಸ್ವಾಮಿ ಸರ್ಕಾರಿ ನೌಕರಿ, ಮಕ್ಕಳ ಶಿಕ್ಷಣವನ್ನು ಮಣ್ಣಿನ ಮಗನಾಗಿಯೇ ನಿಭಾಯಿಸಿ ಎರಡರಲ್ಲೂ ಯಶಸ್ವಿಯಾಗಿದ್ದಾರೆ.

ತಾಲ್ಲೂಕಿನ ಗುಡ್ಲನರಸಿಂಹನಹಳ್ಳಿಯಲ್ಲಿ ಅವಿಭಕ್ತ ಕುಟುಂಬದೊಂದಿಗೆ ನೆಲೆಸಿರುವ ಜಿ.ಎನ್.ಮನ್ನಾರಸ್ವಾಮಿ ತಮ್ಮ ಹತ್ತು ಎಕರೆ ಜಮೀನಿನಲ್ಲಿ ಪಪ್ಪಾಯ (3 ಎಕರೆ), ಬಾಳೆ (3 ಎಕರೆ), ಸೋರೆ (1ಎಕರೆ), ಚಪ್ಪರಬದನೆ (2 ಎಕರೆ), ಡಬಲ್ ಬೀನ್ಸ್ (1 ಎಕರೆ), ಹೀರೆಕಾಯಿ (1 ಎಕರೆ) ಮುಂತಾದ ತರಕಾರಿ ಬೆಳೆಯುತ್ತಿದ್ದಾರೆ. ಚಪ್ಪರದ ಅವಶ್ಯಕತೆಯಿರುವ ತರಕಾರಿ ಬೆಳೆಗಳಿಗೆ ದ್ರಾಕ್ಷಿಗೆ ಹಾಕುವಂತಹ ಚಪ್ಪರ ಹಾಕಿಸಿದ್ದಾರೆ. ಮೂರು ಕೊಳವೆ ಬಾವಿ ಹೊಂದಿರುವ ಇವರು ಅತ್ಯುತ್ತಮ ತರಕಾರಿ ಬೆಳೆಗಳನ್ನು ಬೆಳೆಯುತ್ತಿದ್ದಾರೆ.

ತಮ್ಮದೇ ಟೆಂಪೊದಲ್ಲಿ ಪ್ರತಿದಿನ ತರಕಾರಿಗಳನ್ನು ಬೆಂಗಳೂರಿನ ಕೆ.ಆರ್.ಮಾರುಕಟ್ಟೆಗೆ ಕಳುಹಿಸುತ್ತಾರೆ. ಹೀರೆಕಾಯಿ ಒಂದು ಕೆ.ಜಿ ಗೆ ₹70ಕ್ಕೆ ಮಾರಾಟವಾಗಿದೆ. ಸೋರೆ ಪ್ರತಿ ದಿನ ಒಂದು ಟನ್ ಮಾರುಕಟ್ಟೆಗೆ ಕೊಂಡೊಯ್ಯುತ್ತಿದ್ದು, ₹25 ಸಾವಿರದಿಂದ ₹35 ಸಾವಿರದವರೆಗೆ ಮಾರಾಟವಾಗುತ್ತಿದೆ.

ADVERTISEMENT

‘ಗುಣಮಟ್ಟದ ತರಕಾರಿ ಬೆಳೆಯಲು ಪ್ರತಿ ದಿನ ಸೂಕ್ಷ್ಮವಾಗಿ ಅವಲೋಕಿಸುತ್ತಿರಬೇಕು. ತಿನ್ನುವ ಪದಾರ್ಥವಾದ್ದರಿಂದ ಸೂಕ್ತ ಸಾವಯವ ಗೊಬ್ಬರ, ಔಷಧ, ಸರಿಯಾದ ವೇಳೆಯಲ್ಲಿ ಕೊಡುವುದು ಅತ್ಯಗತ್ಯ. ತರಕಾರಿ ಬೆಂಗಳೂರಿನಿಂದ ಮದ್ರಾಸ್, ಬಾಂಬೆ, ಕೇರಳಕ್ಕೆ ಹೋಗುತ್ತವೆ. ಬೆಳೆ ಚೆನ್ನಾಗಿದ್ದರೆ ಒಳ್ಳೆಯ ಬೆಲೆ ಸಿಗುತ್ತದೆ’ ಎನ್ನುತ್ತಾರೆ ಜಿ.ಎನ್.ಮನ್ನಾರಸ್ವಾಮಿ.

ಪ್ರಸ್ತುತ ತಾಲ್ಲೂಕಿನ ಇದ್ಲೂಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿರುವ ಜಿ.ಎನ್.ಮನ್ನಾರಸ್ವಾಮಿ, ತಮ್ಮ ಮಣ್ಣಿನ ಸೆಳೆತವನ್ನು ಬಣ್ಣಿಸಿದ್ದು ಹೀಗೆ ‘ನನಗೆ ಚಿಕ್ಕಂದಿನಿಂದಲೂ ಕೃಷಿಯೆಡೆಗೆ ಸೆಳೆತ. ನನಗೆ ಸರ್ಕಾರಿ ಉದ್ಯೋಗ ಸಿಕ್ಕರೂ ಹಳ್ಳಿ ಬಿಡಲಿಲ್ಲ. ನಿಜವಾದ ಕೃಷಿಕರು ಗಿಡ ಮಾತ್ರ ನೆಡುವುದಿಲ್ಲ, ಜೊತೆಗೆ ಸಂಬಂಧಗಳನ್ನು ಜೋಡಿಸುತ್ತಾರೆ. ಅವು ಬಾಡದಂತೆ, ಕಳೆದು ಹೋಗದಂತೆ ಬೆವರಲ್ಲಿ ಬೇರಿಳಿಸುತ್ತಾರೆ’ ಎನ್ನುತ್ತಾರೆ.

ಪಪ್ಪಾಯ ಬೆಳೆಯೊಂದಿಗೆ ಜಿ.ಎನ್.ಮನ್ನಾರಸ್ವಾಮಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.