ADVERTISEMENT

ಶಿಡ್ಲಘಟ್ಟ: ಮಳೆರಾಯನ ಪೂಜೆ ‘ಅತ್ತೆಮಳೆ ಹೊಂಗಲು’

ಕೆ.ಮುತ್ತುಕದಹಳ್ಳಿ ಗ್ರಾಮದಲ್ಲಿ ಆಚರಣೆ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2024, 14:26 IST
Last Updated 8 ಅಕ್ಟೋಬರ್ 2024, 14:26 IST
ಶಿಡ್ಲಘಟ್ಟ ತಾಲ್ಲೂಕಿನ ಕೆ.ಮುತ್ತುಕದಹಳ್ಳಿ ಗ್ರಾಮದಲ್ಲಿ ಮಳೆರಾಯನ ಪೂಜೆಯ ಒಂದು ವಿಧವಾದ ಅತ್ತೆಮಳೆ ಹೊಂಗಲು ಪೂಜೆಯನ್ನು ಗ್ರಾಮಸ್ಥರೆಲ್ಲಾ ಸೇರಿ ವಿಶೇಷವಾಗಿ ಆಚರಿಸಿದರು
ಶಿಡ್ಲಘಟ್ಟ ತಾಲ್ಲೂಕಿನ ಕೆ.ಮುತ್ತುಕದಹಳ್ಳಿ ಗ್ರಾಮದಲ್ಲಿ ಮಳೆರಾಯನ ಪೂಜೆಯ ಒಂದು ವಿಧವಾದ ಅತ್ತೆಮಳೆ ಹೊಂಗಲು ಪೂಜೆಯನ್ನು ಗ್ರಾಮಸ್ಥರೆಲ್ಲಾ ಸೇರಿ ವಿಶೇಷವಾಗಿ ಆಚರಿಸಿದರು   

ಶಿಡ್ಲಘಟ್ಟ: ನದಿ, ನಾಲೆಯ ನೀರನ್ನು ಕಾಣದ ಬಯಲುಸೀಮೆಯ ಜನರು ಮಳೆಯನ್ನು ನಂಬಿದವರು. ಹಾಗಾಗಿ ಮಳೆರಾಯನನ್ನು ವಿವಿಧ ರೀತಿಯಲ್ಲಿ ಪೂಜಿಸುವುದು ವಾಡಿಕೆ.

ತಾಲ್ಲೂಕಿನ ಕೆ.ಮುತ್ತುಕದಹಳ್ಳಿ ಗ್ರಾಮದಲ್ಲಿ ಮಳೆರಾಯನ ಪೂಜೆಯ ಒಂದು ವಿಧವಾದ ‘ಅತ್ತೆಮಳೆ ಹೊಂಗಲು’ ಪೂಜೆಯನ್ನು ಗ್ರಾಮಸ್ಥರೆಲ್ಲಾ ಸೇರಿ ವಿಶೇಷವಾಗಿ ಆಚರಿಸಿದರು. ಸಾಮಾನ್ಯವಾಗಿ ಮೊರಸು ಒಕ್ಕಲಿಗ ಸಮುದಾಯದ ಮುಂದಾಳತ್ವದಲ್ಲಿ ಆಚರಿಸಲ್ಪಡುವ ಒಂದು ಕೃಷಿಸಂಬಂಧಿ ಹಬ್ಬವಾಗಿದೆ.

ಮಳೆ ಬೆಳೆ ಚೆನ್ನಾಗಿ ಆಗಿ ಜನ, ಜಾನುವಾರುಗಳಿಗೆ ಯಾವುದೇ ರೀತಿಯ ರೋಗ ರುಜಿನ ಬಾರದಿರಲೆಂದು ಹಲವಾರು ಸಂಪ್ರದಾಯಗಳನ್ನು ಹಳ್ಳಿಗಳಲ್ಲಿ ಹಿಂದಿನಿಂದಲೂ ಆಚರಿಸಿಕೊಂಡು ಬಂದಿದ್ದಾರೆ. ಅಂತಹ ಹಲವು ಸಂಪ್ರದಾಯಗಳಲ್ಲಿ ಅತ್ತೆಮಳೆ ಹೊಂಗಲು ಪೂಜೆಯೂ ಒಂದು. ಹದಿನೈದು ದಿನಕ್ಕೊಮ್ಮೆಯಂತೆ ಮಳೆ ಹೆಸರು ಬದಲಾಗುತ್ತದೆ. ರೇವತಿಯಿಂದ ಪ್ರಾರಂಭವಾಗಿ ಜೇಷ್ಠ ಮಳೆಗೆ ಕೊನೆಯಾಗುತ್ತದೆ. ಪಿತೃ ಪಕ್ಷದಲ್ಲಿ ಬರುವ ಮಳೆಯೇ ಅತ್ತೆ ಮಳೆ. ಈ ಮಳೆ ಪ್ರಾರಂಭವಾದ ದಿನದಿಂದ ಕೊನೆಯಾಗುವ ವೇಳೆಗೆ ಯಾವುದಾದರೂ ಒಂದು ಶುಕ್ರವಾರ ಅಥವಾ ಮಂಗಳವಾರ ದಿನ ಅತ್ತೆಮ್ಮನ ಅಂಗಳ ಪೂಜೆ ಮಾಡುವುದು ಇಲ್ಲಿನ ವಾಡಿಕೆ.

ADVERTISEMENT

‘ಕರೇಬಂಟನ ಕತೆ ಇದಕ್ಕೆ ಮೂಲ. ಕರೇಬಂಟನ ಹೆಂಡತಿ ಒಬ್ಬ ರಾಕ್ಷಸಿ ಎಂಬುದು ಆತನಿಗೆ ತಡವಾಗಿ ತಿಳಿಯುತ್ತದೆ. ಅವಳಿಂದ ತಪ್ಪಿಸಿಕೊಂಡು ಅವನು ಊರೂರು ಅಲೆದರೂ ಬಿಡದೆ ಹಿಂದೆ ಬೀಳುತ್ತಾಳೆ. ಇವರ ವಿಷಯ ತಿಳಿಯದ ಪಂಚಾಯಿತಿದಾರರು, ‘ಗಂಡಹೆಂಡತಿ ಜಗಳ ಸಾಮಾನ್ಯ, ಈ ದಿನ ರಾತ್ರಿ ಚಾವಡಿಯಲ್ಲಿರಿ. ಬೆಳಗ್ಗೆ ತೀರ್ಮಾನ ಹೇಳೋಣ’ ಎಂದರು. ರಾತ್ರಿ ಅವಳು ಕರೇಬಂಟನನ್ನು ತಿಂದುಹಾಕಿ ಗವಾಕ್ಷಿ ಮೂಲಕ ಬೆಂಕಿಕೊಳ್ಳಿಯ ರೂಪದಲ್ಲಿ ಆಕಾಶಕ್ಕೆ ಹೋಗುತ್ತಾಳೆ. ಬೆಳಗ್ಗೆ ಊರಿನ ಹಿರಿಯರಿಗೆ ಇದು ತಿಳಿಯುತ್ತದೆ. ಕರೇಬಂಟನ ಮಾತು ಕೇಳದೆ ಅವನ ಸಾವಿಗೆ ಕಾರಣರಾಗಿದ್ದಕ್ಕೆ ಅವರೆಲ್ಲಾ ಪಶ್ಚಾತ್ತಾಪಪಡುತ್ತಾರೆ. ಅಂದಿನಿಂದ ಅವನ ನೆನಪಲ್ಲಿ ಅತ್ತೆಮಳೆಯ ಒಂದು ಮಂಗಳವಾರ ಅಥವಾ ಶುಕ್ರವಾರ ಹೊಂಗಲು ಆಚರಣೆ ಮಾಡಿಕೊಂಡು ಬರಲಾಗುತ್ತಿದೆ’ ಎಂದು ಡಿ.ಎನ್.ಸುದರ್ಶನರೆಡ್ಡಿ ತಿಳಿಸಿದರು.

‘ಕುಂಬಾರರ ಆವೆಯಿಂದ ಬೂದಿ ತಂದು ಅದಕ್ಕೆ ಮರಿಹೊಡೆದ ರಕ್ತ ಬೆರೆಸಿ ಸರಹದ್ದಿನವರೆಗೂ ಜಮೀನಿನ ಎಲ್ಲ ಬೆಳೆಗಳ ಮೇಲೂ ಚರಗ ಚೆಲ್ಲಿಕೊಂಡು ಬರುತ್ತಾರೆ.  ಲಕ್ಕಿರಿ ಕಡ್ಡಿ, ಬೂದಿ ತೆಗೆದುಕೊಂಡು ಜಮೀನುಗಳ ಬಳಿ ನಾವು ಕರೇಬಂಟ, ಅವನ ಹೆಂಡತಿ ಮತ್ತು ಅವನ ಮಗುವಿನ ಚಿತ್ರ ಬರೆದು ಬರುತ್ತಾರೆ’.

ಈ ಬೂದಿ, ಲಕ್ಕಿರಿಕಡ್ಡಿ ತರುವ, ಹಂಚುವ ಕೆಲಸ ಚರಗ ಚೆಲ್ಲುವ ಕೆಲಸ ಊರ ತೋಟಿಯ ಜವಾಬ್ದಾರಿ. ಆತನಿಗೆ ತಲಾ ಇಂತಿಷ್ಟು ‘ಓಲಿ’ ಕೊಡಬೇಕು ಮತ್ತು ಬೆಳೆ ಆದಾಗ ‘ಮ್ಯಾರೆ’ ಕೊಡಬೇಕು. ಗೌಡರ ಮಾರ್ಗದರ್ಶನದಲ್ಲಿ ಇದು ನಡೆಯುತ್ತದೆ. ಓಲಿ ಕಾಸುಗಳಲ್ಲೇ ಮರಿ ತರಬೇಕು.

ಕೆ.ಮುತ್ತುಕದಹಳ್ಳಿಯಲ್ಲಿ ಕುಂಬಾರರ ಮನೆಯಿಂದ ಒಲೆ ಬೂದಿಯನ್ನ ತಂದು ಊರು ಬಾಗಿಲ ಬಳಿ ಅತ್ತೆಮ್ಮನ ಚಿತ್ರ ಬಿಡಿಸಿ ಪೂಜೆಮಾಡಲಾಯಿತು.

ಪೂಜೆ ನಂತರ ಬೂದಿಯನ್ನು ಗ್ರಾಮದ ತಮ್ಮ ಜಮೀನುಗಳ ಬಳಿ ಅತ್ತೆಮ್ಮನ ಚಿತ್ರ ಬಿಡಿಸಿ ಬಂದರು. ಇದರಿಂದ ಮಳೆ ಚೆನ್ನಾಗಿ ಬಿದ್ದು ಸಮೃದ್ಧವಾದ ಬೆಳೆಯಾಗಿ ಜನ, ಜಾನುವಾರ ರೋಗ ರುಜಿನಗಳಿಲ್ಲದಂತೆ ನಾಡು ಸುಭಿಕ್ಷವಾಗುತ್ತದೆ ಎಂಬುದು ಅವರ ನಂಬಿಕೆ.

ಗ್ರಾಮಸ್ಥರಾದ ನಾರಾಯಣಪ್ಪ, ನಾಗರಾಜ್, ರಾಮ, ಅಶ್ವತ್ಥಪ್ಪ, ಕೇಶವ, ವೆಂಕಟೇಶಪ್ಪ, ಚನ್ನರಾಯಪ್ಪ, ನಾಗೇಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.