ಶಿಡ್ಲಘಟ್ಟ: ರೇಷ್ಮೆ ಮತ್ತು ಹೈನುಗಾರಿಕೆಗೆ ಶಿಡ್ಲಘಟ್ಟ ತಾಲ್ಲೂಕು ಹೆಸರುವಾಸಿ. ಸದ್ಯದಲ್ಲೇ ₹185 ಕೋಟಿ ವೆಚ್ಚದ ಹೈಟೆಕ್ ಸರ್ಕಾರಿ ರೇಷ್ಮೆ ಮಾರುಕಟ್ಟೆಯ ನಿರ್ಮಾಣ ಕೂಡ ಪ್ರಾರಂಭವಾಗಲಿದೆ.
ಐದು ದಶಕದ ಹಿಂದೆ ರೇಷ್ಮೆ ಬೆಳೆಗಾರರ ಪರಿಸ್ಥಿತಿ ಈಗಿನಂತಿರಲಿಲ್ಲ. 60ರ ದಶಕದ ಸಮಯ. ವೈಜ್ಞಾನಿಕ ರೇಷ್ಮೆ ಬೇಸಾಯ ಆಗ ತಾನೆ ಕೋಲಾರ ಜಿಲ್ಲೆಯನ್ನು ಪ್ರವೇಶಿಸಿತ್ತು. ರೈತರು ವಾಣಿಜ್ಯ ಬೆಳೆಯಾಗಿ ರೇಷ್ಮೆಯನ್ನು ಆಗ ತಾನೆ ಕಂಡುಕೊಳ್ಳುತ್ತಿದ್ದರು. ಹಳೆಯ ಪದ್ಧತಿ ಹಾಗೂ ಬೇಸಾಯವನ್ನು ಬಿಟ್ಟು ಹೊಸತನದ ಕೃಷಿಗೆ ಅಳವಡಿಸಿಕೊಳ್ಳಲು ಕೆಲವರು ಅನುಮಾನಪಡುತ್ತಿದ್ದರೆ, ಕೆಲವರು ಆತಂಕದಿಂದಲೇ ರೇಷ್ಮೆ ಕೃಷಿಯನ್ನು ಕೈಗೊಳ್ಳಲು ಪ್ರಾರಂಭಿಸಿದ್ದರು.
ಬೇಸಾಯದಿಂದ ಸಾಮಾನ್ಯ ರೈತರೂ ಆರ್ಥಿಕವಾಗಿ ಸಬಲರಾಗಬಹುದು ಎಂಬುದನ್ನು ಮನಗಂಡು ಶಿಡ್ಲಘಟ್ಟ ತಾಲ್ಲೂಕಿನ ವ್ಯಕ್ತಿಯೊಬ್ಬರು ಪುಸ್ತಕಗಳನ್ನು ಹೊರತಂದರು. ರೇಷ್ಮೆ ಕುರಿತಂತೆ ಪತ್ರಿಕೆಗಳನ್ನು ನಡೆಸುವ ಸಾಹಸಕ್ಕೆ ಕೈಹಾಕಿ ರೈತರಿಗೆ ಅರಿವು ಮೂಡಿಸಲು ಪ್ರಯತ್ನಿಸಿದ್ದರು. ಹಾಗೆಂದು ಇವರೇನೂ ಸಾಹಿತಿಯಾಗಿರಲಿಲ್ಲ. ಅಪ್ಪಟ ರೈತರಾಗಿದ್ದ ಆನೂರು ಗ್ರಾಮದ ಮುನೇಗೌಡರು ಆ ಕಾಲದಲ್ಲಿಯೇ ಈ ವಿಶಿಷ್ಟತೆಯನ್ನು ಮೆರೆದಿದ್ದರು.
ಆನೂರು ಎ.ಎಂ.ಮುನೇಗೌಡರು ಆನೂರಿನ ಪಟೇಲರಾಗಿದ್ದ ಮುನಿಶಾಮೇಗೌಡರ ಮಗ. ಕೃಷಿಗೆ ಸಂಬಂಧಿಸಿದ್ದ ಎಲ್.ಎಜಿ ಎಂಬ ಡಿಪ್ಲೊಮಾ ಪಾಸು ಮಾಡಿ ಸರ್ಕಾರಿ ಉದ್ಯೋಗ ತಿರಸ್ಕರಿಸಿ ವ್ಯವಸಾಯವನ್ನೇ ನಂಬಿ ಗ್ರಾಮಕ್ಕೆ ಹಿಂದಿರುಗಿದ್ದರು. ದೊಡ್ಡಕುಟುಂಬದ ಹಿರಿಯರಾಗಿದ್ದ ಇವರು ಕುಟುಂಬದ ಜವಾಬ್ದಾರಿಯೊಂದಿಗೆ ಸಾಹಿತ್ಯಾಭಿಮಾನಿಯಾಗಿದ್ದರು. ಇವರು ಜಿಲ್ಲೆಯ ಹಿರಿಯ ಸಾಹಿತಿಗಳಲ್ಲೊಬ್ಬರಾದ ಸಂತೇಕಲ್ಲಹಳ್ಳಿಯ ಲಕ್ಷ್ಮಿನರಸಿಂಹಶಾಸ್ತ್ರಿಗಳ ಒಡನಾಟ ಹೊಂದಿದ್ದು ಶಾಸ್ತ್ರಿಗಳ ಸಾಹಿತ್ಯ ಸೇವೆಗೆ ಆರ್ಥಿಕ ನೆರವು ನೀಡುತ್ತಿದ್ದರು.
ಬೇಸಾಯದಿಂದ ಸಾಮಾನ್ಯ ರೈತರೂ ಆರ್ಥಿಕವಾಗಿ ಸಬಲರಾಗಬಹುದು ಎಂಬುದನ್ನು ಗ್ರಹಿಸಿದ ಮುನೇಗೌಡರು ಈ ಬೇಸಾಯದ ಬಗ್ಗೆ ರೈತರಿಗೆ ತಿಳಿವಳಿಕೆ ನೀಡಬೇಕೆಂದು ನಿರ್ಧರಿಸಿದರು. ಸರ್ಕಾರ ರೇಷ್ಮೆ ವ್ಯವಸಾಯದ ಬಗ್ಗೆ ರೈತರಿಗೆ ಅರಿವು ಮೂಡಿಸುವ ಮೊದಲೇ ಮುನೇಗೌಡರು ‘ರೇಷ್ಮೆ ಕೈಗಾರಿಕೆ’ ಎಂಬ ದ್ವೈಮಾಸಿಕ ಪತ್ರಿಕೆ ತರುವ ಸಾಹಸಕ್ಕೆ ಕೈಹಾಕಿದರು.
ರೇಷ್ಮೆ ಬೇಸಾಯದ ಬಗ್ಗೆ ಅಪಾರ ತಿಳಿವಳಿಕೆ ಹೊಂದಿದ್ದರು. ಬೇರೆ ರಾಷ್ಟ್ರಗಳಲ್ಲಿ ರೇಷ್ಮೆ ಕೃಷಿ ಹೇಗೆ ನಡೆದಿದೆ, ವ್ಯಾಪಿಸಿದೆ. ಅದರ ಸಾಧ್ಯ ಅಸಾಧ್ಯತೆಗಳೇನು ಎಂಬುದರ ಸಮಗ್ರ ಮಾಹಿತಿ ಕಲೆಹಾಕಿದ್ದರು. ತಾವು ತಿಳಿದಿರುವ ವಿಷಯಗಳನ್ನು ರೈತರಿಗೆ ತಿಳಿಸಬೇಕೆಂಬ ಕಳಕಳಿಯಿತ್ತು. ವಿಷಯವನ್ನು ಸಾಮಾನ್ಯರಿಗೆ ಮನದಟ್ಟು ಮಾಡುವ ಕಲೆಯೂ ಗೌಡರಿಗೆ ಸಿದ್ಧಿಸಿತ್ತು. ಮುನೇಗೌಡರ ಈ ಪ್ರಯತ್ನಕ್ಕೆ ಜೊತೆಯಾದವರು ಶಾಸ್ತ್ರಿಗಳು.
ಬೆಂಗಳೂರಿನ ಕಲಾಸಿಪಾಳ್ಯಂನ ಹಾಸನದ ವೆಂಕಟೇಶಯ್ಯ ಅವರ ಮುದ್ರಣಾಲಯದಲ್ಲಿ ಇವರ ಪತ್ರಿಕೆ ರೂಪುಗೊಳ್ಳುತ್ತಿತ್ತು. ಪತ್ರಿಕೆಯ ಕರಡು ತಿದ್ದುವುದು, ಭಾಷೆ ಪರಿಷ್ಕರಿಸುವ ಕೆಲಸವನ್ನು ಶಾಸ್ತ್ರಿಗಳು ಮಾಡುತ್ತಿದ್ದರು. 16 ಪುಟಗಳ ಈ ಮಾಸಪತ್ರಿಕೆಯ ಎಲ್ಲ ಲೇಖನಗಳನ್ನೂ ಗೌಡರೇ ಬರೆಯುತ್ತಿದ್ದರು. ಕೆಲ ಲೇಖನಗಳು ಇಂಗ್ಲಿಷ್ ನಲ್ಲಿದ್ದರೆ, ಕೆಲವು ಲೇಖನಗಳನ್ನು ಸಚಿತ್ರವಾಗಿಯೂ ಪ್ರಕಟಿಸುತ್ತಿದ್ದರು. ಪತ್ರಿಕೆಗೆ ಚಂದಾದಾರರಿದ್ದರೋ ಇಲ್ಲವೋ, ಯಾವುದೇ ಆರ್ಥಿಕ ಅಪೇಕ್ಷೆಯಿಲ್ಲದೆ ಕೆಲಕಾಲ ಈ ಪತ್ರಿಕೆ ಹೊರತಂದರು. ಆರ್ಥಿಕ ಮುಗ್ಗಟ್ಟಿನಿಂದ, ಜನರ ಮತ್ತು ಸರ್ಕಾರದ ಪ್ರೋತ್ಸಾಹದ ಕೊರತೆಯಿಂದ ಪತ್ರಿಕೆ ಕೊನೆಯುಸಿರೆಳೆಯಿತು.
ರೈತರಾಗಿದ್ದು ರೈತರ ಬದುಕಿನ ಬಗ್ಗೆ ಕಳಕಳಿ ಹೊಂದಿದ್ದ ಮುನೇಗೌಡರು ‘ಗ್ರಾಮೋದ್ಧಾರವಾಗುವುದೆಂದು?’ ಸೇರಿದಂತೆ ಕೆಲವು ಪುಸ್ತಕ ಬರೆದು ಪ್ರಕಟಿಸಿದ್ದರು. ಈ ಪುಸ್ತಕದ ಬಿನ್ನಹದಲ್ಲಿ, ‘ಗ್ರಾಮವಾಸಿಗಳು ಸಂಘಗಳನ್ನು ಏರ್ಪಡಿಸಿ ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಂಡು ತಮ್ಮ ಕಾಲಿನ ಮೇಲೆ ತಾವು ನಿಲ್ಲುವಂತಾಗಬೇಕು. ಪ್ರತಿಯೊಂದಕ್ಕೂ ಇತರರನ್ನೇ ನಂಬಿಕೊಂಡಿರುವುದು ಹಿಂದುಳಿದವರ ಲಕ್ಷಣ. ಇದು ತೊಲಗಿದಂತೆಲ್ಲಾ ರೈತನು ಅಭಿವೃದ್ಧಿ ಹೊಂದುತ್ತಿದ್ದಾನೆಂದು ತಿಳಿಯಬೇಕು’ ಎಂದು ಬರೆಯುತ್ತಾರೆ ಮುನೇಗೌಡರು.
ಮುನೇಗೌಡರು ರೇಷ್ಮೆ ಬೇಸಾಯದ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸಲು ಕ್ರಿಯಾಶೀಲರಾಗಿದ್ದವರು. ರೇಷ್ಮೆ ಬೇಸಾಯ ಸುಣ್ಣಕಟ್ಟು ರೋಗ ಮತ್ತು ಹೂಜಿ ನೊಣಗಳ ಹಾವಳಿಯಿಂದಾಗಿ ಸೊರಗಿದಾಗ ಅದರಿಂದ ಪಾರಾಗುವ ಬಗ್ಗೆ ತಮ್ಮ ಆಲೋಚನೆಗಳನ್ನು ದಾಖಲಿಸುತ್ತಿದ್ದರು. ಆಗ ಸರ್ಕಾರದ ರೇಷ್ಮೆ ಇಲಾಖೆ ಮುನೇಗೌಡರ ಸೂಚನೆಗಳನ್ನು ಕಿವಿಗೆ ಹಾಕಿಕೊಳ್ಳಲಿಲ್ಲ. ಮೈಸೂರಿನ ರೇಷ್ಮೆ, ಜಪಾನಿನ ರೇಷ್ಮೆ, ರೇಷ್ಮೆ ಕುರಿತ ಕವನ, ರೇಷ್ಮೆ ಇಲಾಖೆ, ರೇಷ್ಮೆ ಕೈಗಾರಿಕೆಯ ವಿವಿಧ ಕಸುಬುಗಳ ಹಾಗೂ ಸಮಸ್ಯೆಗಳ ಕುರಿತಂತೆ ವೈವಿಧ್ಯಮಯ ಲೇಖನ ಇವರ ‘ರೇಷ್ಮೆ ಕೈಗಾರಿಕೆ’ ದ್ವೈಮಾಸಿಕ ಪತ್ರಿಕೆಯಲ್ಲಿ ಪ್ರಕಟವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.