ಚಿಕ್ಕಬಳ್ಳಾಪುರ: ರಸ್ತೆ ವಿಸ್ತರಣೆಗೆ ಜಾಗ ಕಳೆದುಕೊಂಡ ಮಾಲೀಕರಿಗೆ ಸೂಕ್ತ ಪರಿಹಾರ ನೀಡದೆ ನಿರ್ಲಕ್ಷ್ಯ ತೋರಿದ ಹಿನ್ನೆಲೆಯಲ್ಲಿ ಇಲ್ಲಿನ ಉಪವಿಭಾಗಾಧಿಕಾರಿ ಕಚೇರಿಯ ಚರಾಸ್ತಿ ಜಪ್ತಿಗೆ ಚಿಕ್ಕಬಳ್ಳಾಪುರ ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಲಯವು ಆದೇಶಿಸಿದೆ.
ಬುಧವಾರ ವರ್ತಕರು, ನ್ಯಾಯಾಲಯದ ಇಬ್ಬರು ಸಿಬ್ಬಂದಿ ಬಂದು ಉಪವಿಭಾಗಾಧಿಕಾರಿ ಕಚೇರಿಯ ಕುರ್ಚಿ, ಮೇಜು ಸೇರಿದಂತೆ ಪೀಠೋಪಕರಣಗಳು, ಕಂಪ್ಯೂಟರ್, ಮತ್ತಿತರ ವಸ್ತುಗಳನ್ನು ಕಚೇರಿಯಿಂದ ಹೊರಗೆ ಇಟ್ಟರು.
ಕೆಲ ಸಮಯದ ನಂತರ ಕಟ್ಟಡಗಳ ಮಾಲೀಕರು, ನ್ಯಾಯಾಲಯದ ಸಿಬ್ಬಂದಿ ಮತ್ತು ಉಪವಿಭಾಗಾಧಿಕಾರಿ ನಡುವೆ ಮಾತುಕತೆ ನಡೆಯಿತು. ಒಂದು ತಿಂಗಳ ಒಳಗೆ ಪರಿಹಾರದ ಹಣ ದೊರಕಿಸಿಕೊಡುವುದಾಗಿ ಉಪವಿಭಾಗಾಧಿಕಾರಿ ಭರವಸೆ ನೀಡಿದ ನಂತರ ಪೀಠೋಪಕರಣಗಳನ್ನು ಮೊದಲು ಇದ್ದಂತೆಯೇ ಕಚೇರಿಯೊಳಗೆ ಇರಿಸಲಾಯಿತು.
ಏನಿದು ಪ್ರಕರಣ: 2006ರಲ್ಲಿ ಬಾಗೇಪಲ್ಲಿ ಪಟ್ಟಣದ ನ್ಯಾಯಾಲಯದ ಬಳಿಯಿಂದ ನ್ಯಾಷನಲ್ ಕಾಲೇಜುವರೆಗಿನ ಡಿ.ವಿ.ಜಿ ರಸ್ತೆ ವಿಸ್ತರಣೆಗೆ ಅಧಿಸೂಚನೆ ಹೊರಡಿಸಲಾಯಿತು. 2011ರಲ್ಲಿ ಕಟ್ಟಡಗಳ ಮಾಲೀಕರಿಗೆ ಪರಿಹಾರದ ಹಣ ನೀಡಲಾಯಿತು.
ರಸ್ತೆಯ ಎರಡೂ ಬದಿ ತಲಾ 50 ಅಡಿಗಳಂತೆ 100 ಅಡಿ ವಿಸ್ತರಿಸಲಾಯಿತು. 350 ಕಟ್ಟಡಗಳು ವಿಸ್ತರಣೆ ವ್ಯಾಪ್ತಿಗೆ ಒಳಪಟ್ಟವು.
ಕಟ್ಟಡಗಳ ಮಾಲೀಕರಿಗೆ ಒಂದು ಚದುರ ಅಡಿಗೆ ಅಂದು ₹ 280 ಪರಿಹಾರ ಧನ ನಿಗದಿಪಡಿಸಲಾಗಿತ್ತು. ಆದರೆ 32 ಮಂದಿ ಕಟ್ಟಡಗಳ ಮಾಲೀಕರು ಈ ಪರಿಹಾರದ ಹಣ ಸಾಕಾಗುವುದಿಲ್ಲ ಎಂದು ನ್ಯಾಯಾಲಯದ ಮೊರೆ ಹೋದರು. ನ್ಯಾಯಾಲಯವು ಚದುರ ಅಡಿಗೆ ₹ 890 ನಿಗದಿಪಡಿಸಿತು.
ನ್ಯಾಯಾಲಯವು ನಿಗದಿಪಡಿಸಿದ್ದ ಈ ಪರಿಹಾರವನ್ನು ಕಟ್ಟಡಗಳ ಮಾಲೀಕರಿಗೆ ನೀಡಿರಲಿಲ್ಲ. ಇದನ್ನು ಪ್ರಶ್ನಿಸಿ ಶ್ರೀನಿವಾಸರೆಡ್ಡಿ, ಗಂಗಮ್ಮ ದೇವಾಲಯ ಟ್ರಸ್ಟ್, ಕಾಂಗ್ರೆಸ್ ಕಚೇರಿ, ಸತೀಶ್ ಬಾಬು, ನರಸಿಂಹನಾಯ್ಡು, ವೆಂಕಟಲಕ್ಷ್ಮಮ್ಮ, ಪಾರ್ವತಮ್ಮ ಸೇರಿದಂತೆ ಒಂಬತ್ತು ಮಂದಿ ಕಟ್ಟಡಗಳ ಮಾಲೀಕರು ಮತ್ತೆ ನ್ಯಾಯಾಲಯದ ಮೊರೆ ಹೋದರು.
ಈ ಕಟ್ಟಡಗಳ ಮಾಲೀಕರಿಗೆ ಸುಮಾರು ₹ 3.5 ಕೋಟಿ ಪರಿಹಾರದ ಹಣ ಬರಬೇಕಿದೆ. ಇವರನ್ನು ಅನುಸರಿಸಿ ಉಳಿದ ಕಟ್ಟಡಗಳ ಮಾಲೀಕರು ಸಹ ಹೆಚ್ಚುವರಿ ಪರಿಹಾರ ನೀಡಬೇಕು ಎಂದು ನ್ಯಾಯಾಲಯಕ್ಕೆ ಮೊರೆ ಹೋಗಿದ್ದಾರೆ.
ಈ 9 ಮಂದಿ ಕಟ್ಟಡಗಳ ಮಾಲೀಕರು ಪರಿಹಾರದ ಹಣ ನೀಡದ ಕಾರಣ ನ್ಯಾಯಾಲಯವು ಎಸಿ ಕಚೇರಿಯ ವಾಹನ ಸೇರಿದಂತೆ ಚರಾಸ್ತಿ ಜಪ್ತಿಗೆ ಆದೇಶಿಸಿತ್ತು.
ಉಪವಿಭಾಗಾಧಿಕಾರಿ ಕಚೇರಿಯ ಕುರ್ಚಿಗಳು, ಮೇಜು, ಕಂಪ್ಯೂಟರ್ ಮತ್ತಿತರ ವಸ್ತುಗಳನ್ನು ಕಚೇರಿಯಿಂದ ಹೊರಗೆ ಇಟ್ಟಿರುವುದನ್ನು ಕಂಡು ಕುತೂಹಲದಿಂದ ಅಪಾರ ಸಂಖ್ಯೆಯ ಸಾರ್ವಜನಿಕರು ಕಚೇರಿ ಅಂಗಳದಲ್ಲಿ ಜಮಾಯಿಸಿದ್ದರು.
‘ನಾಲ್ಕು ತಿಂಗಳ ಹಿಂದೆಯೇ ನ್ಯಾಯಾಲಯವು ಜಪ್ತಿ ಆದೇಶ ನೀಡಿದೆ. ಶ್ರೀನಿವಾಸರೆಡ್ಡಿ ಅವರಿಗೆ ₹ 2 ಕೋಟಿ ಪರಿಹಾರದ ಹಣ ಬರಬೇಕು. ನನಗೆ ₹ 8 ಲಕ್ಷ ಪರಿಹಾರದ ಹಣ ಬರಬೇಕಾಗಿದೆ’ ಎಂದು ಕಟ್ಟಡ ಮಾಲೀಕ ಸತೀಶ್ ಬಾಬು ತಿಳಿಸಿದರು.
‘ಭೂಸ್ವಾಧೀನ ಅಧಿಕಾರಿಯಾಗಿದ್ದ ಎಸಿ’ ಪರಿಹಾರದ ಹಣದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ನಾವು ನ್ಯಾಯಾಲಯದ ಮೊರೆ ಹೋದೆವು. ಜಪ್ತಿ ಆದೇಶ ಹೊರಬಿದ್ದು ನಾಲ್ಕು ತಿಂಗಳಾಗಿದೆ. ಲೋಕೋಪಯೋಗಿ ಇಲಾಖೆಯವರ ಜೊತೆ ಮಾತುಕತೆ ನಡೆಸಿ ಪರಿಹಾರ ಕೊಡಿಸುತ್ತೇವೆ. ಎರಡು ತಿಂಗಳು ಸಮಯ ಕೊಡಿ ಎಂದು ಉಪವಿಭಾಗಾಧಿಕಾರಿ ತಿಳಿಸಿದ್ದರು. ಆದರೆ ನಾಲ್ಕು ತಿಂಗಳಾದರೂ ಪರಿಹಾರದ ಹಣ ಬರಲಿಲ್ಲ. ಆದ ಕಾರಣ ಜಪ್ತಿ ಆದೇಶವನ್ನು ತಂದೆವು. ಅಂದು ಭೂಸ್ವಾಧೀನ ಅಧಿಕಾರಿ ಎಸಿ ಅವರೇ ಆಗಿದ್ದರು ಎಂದು ಕಟ್ಟಡ ಮಾಲೀಕ ಶ್ರೀನಿವಾಸರೆಡ್ಡಿ ತಿಳಿಸಿದರು. ನ್ಯಾಯಾಲಯದಿಂದ ಇಬ್ಬರು ಅಮಿನಗಳು ಬಂದಿದ್ದಾರೆ. ಮತ್ತೆ ಎರಡು ತಿಂಗಳು ಸಮಯ ಕೊಡಿ ಎಂದು ಉಪವಿಭಾಗಾಧಿಕಾರಿ ಕೇಳುತ್ತಿದ್ದಾರೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.