ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಪರಿತ್ಯಕ್ತ ಮತ್ತು ಒಪ್ಪಿಸಲ್ಪಟ್ಟ ಮಕ್ಕಳು ವಿದೇಶಗಳಿಗೆ ದತ್ತು ಮಕ್ಕಳಾಗಿ ಹೋಗುತ್ತಿದ್ದಾರೆ. ವಿದೇಶದ ಜೊತೆಗೆ ರಾಜ್ಯದ ವಿವಿಧ ಭಾಗಗಳು ಮತ್ತು ಹೊರ ರಾಜ್ಯಕ್ಕೂ ಮಕ್ಕಳನ್ನು ದತ್ತು ನೀಡಲಾಗುತ್ತಿದೆ.
ಜಿಲ್ಲೆಯಲ್ಲಿ 2019-20ನೇ ಸಾಲಿನಿಂದ ಇಲ್ಲಿಯವರೆಗೂ ಒಪ್ಪಿಸಲ್ಪಟ್ಟ, ಪರಿತ್ಯಕ್ತ ಒಟ್ಟು 45 ಮಕ್ಕಳನ್ನು ದತ್ತು ನೀಡಲಾಗಿದೆ. ಇವರಲ್ಲಿ 40 ಮಕ್ಕಳನ್ನು ದೇಶದ ಒಳಗೆ ದತ್ತು ನೀಡಲಾಗಿದೆ. ತಲಾ ಇಬ್ಬರು ಮಕ್ಕಳನ್ನು ಇಟಲಿ ಮತ್ತು ಕೆನಡಾ, ಒಂದು ಮಗುವನ್ನು ಅಮೆರಿಕದ ದಂಪತಿಗೆ ದತ್ತು ನೀಡಲಾಗಿದೆ.
ದತ್ತು ಪಡೆಯಲು ಇಚ್ಚಿಸುವ ದಂಪತಿ ನೋಂದಣಿಗೆ ಕೇಂದ್ರ ಸರ್ಕಾರದ https://cara.wcd.gov.in ಅಥವಾ https://carings.wcd.gov.in ವೆಬ್‌ಸೈಟ್ ಸಂಪರ್ಕಿಸಬಹುದು.
ಮಕ್ಕಳಿಲ್ಲದವರು ಶಾಶ್ವತವಾಗಿ ಮಗುವಿನ ಹಕ್ಕು ಬಾಧ್ಯತೆಗಳೊಂದಿಗೆ ಮತ್ತು ಜವಾಬ್ದಾರಿಗಳನ್ನು ಕಾನೂನು ಬದ್ಧವಾಗಿ ಪಡೆದುಕೊಳ್ಳುವುದೇ ದತ್ತು ಪ್ರಕ್ರಿಯೆ. ಈ ಪ್ರಕ್ರಿಯೆಗೆ ಪರಿತ್ಯಕ್ತ, ಅನಾಥ, ಒಪ್ಪಿಸಲ್ಪಟ್ಟ ಮಕ್ಕಳು ಒಳಪಡುತ್ತಾರೆ. ಮಕ್ಕಳ ಮಾರಾಟ ಶಿಕ್ಷಾರ್ಹ. ಮಕ್ಕಳನ್ನು ಮಾರುವುದು, ಕೊಳ್ಳುವುದು ಅಥವಾ ಕಾನೂನು ಬಾಹಿರ ದತ್ತು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವುದು ಶಿಕ್ಷಾರ್ಹ.
ಮಕ್ಕಳನ್ನು ಮಾರುವವರಿಗೂ ಹಾಗೂ ಕೊಳ್ಳುವರಿಗೂ ಬಾಲನ್ಯಾಯ ಕಾಯ್ದೆ 2015 ಸೆಕ್ಷನ್ 81ರ ಅನ್ವಯ 5 ವರ್ಷಗಳವರೆಗೂ ಜೈಲು ಶಿಕ್ಷ, ₹ 1 ಲಕ್ಷದ ದಂಡ ವಿಧಿಸಲಾಗುತ್ತದೆ. ಈ ಅಪರಾಧದಲ್ಲಿ ಆಸ್ಪತ್ರೆಯ ಸಿಬ್ಬಂದಿಗಳು ಶಾಮೀಲಾದರೆ 3 ವರ್ಷಗಳಿಗೆ ಕಡಿಮೆ ಇಲ್ಲದಂತೆ ಶಿಕ್ಷೆಯನ್ನು 7 ವರ್ಷಗಳವರೆಗೆ ವಿಸ್ತರಣೆ ಆಗುತ್ತದೆ.
ಬೇಡವಾದ ನವಜಾತ ಶಿಶು ಅಥವಾ ಮಕ್ಕಳನ್ನು ಎಲ್ಲಂದರಲ್ಲಿ ಬಿಟ್ಟು ಪುಟ್ಟ ಜೀವನಗಳನ್ನು ಅಪಾಯಕ್ಕೆ ಗುರಿ ಮಾಡದೇ ಮಕ್ಕಳನ್ನು ಮಮತೆಯ ತೊಟ್ಟಿಲು ಅಥವಾ ಮಕ್ಕಳ ಕಲ್ಯಾಣ ಸಮಿತಿ, ಚಿಕ್ಕಬಳ್ಳಾಪುರ ಇಲ್ಲಿಗೆ ಹಾಜರಾಗಿ ಸರ್ಕಾರದ ವಶಕ್ಕೆ ಒಪ್ಪಿಸಬಹುದು.
ಮಾಹಿತಿಗಾಗಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಜಿಲ್ಲಾಡಳಿತ ಭವನ, ಚಿಕ್ಕಬಳ್ಳಾಪುರ, 08156-277113 ಅಥವಾ ಸಿ.ವಿ ಕಮಲಮ್ಮ ಮತ್ತು ಸಿ.ವಿ ವೆಂಕಟರಾಯಪ್ಪ ಸ್ಮಾರಕ ವಿಶೇಷ ದತ್ತು ಸ್ವೀಕಾರ ಕೇಂದ್ರ (ಕೆ.ವಿ.ಟ್ರಸ್ಟ್) ಕಂದವಾರಪೇಟೆ 15 ನೇ ವಾರ್ಡ್, 08156-274427 ಸಂಪರ್ಕಿಸಬಹುದು ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ನೌತಾಜ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.