ADVERTISEMENT

ಮಣ್ಣಿನ ಸಂರಕ್ಷಣೆಗೆ ಸಲಹೆ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2020, 8:40 IST
Last Updated 6 ಡಿಸೆಂಬರ್ 2020, 8:40 IST
ಚಿಂತಾಮಣಿಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿಶ್ವ ಮಣ್ಣು ದಿನಾಚರಣೆಯನ್ನು ವಿಜ್ಞಾನಿ ಡಾ.ಆರ್.ಮಂಜುನಾಥ್ ಉದ್ಘಾಟಿಸಿದರು.
ಚಿಂತಾಮಣಿಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿಶ್ವ ಮಣ್ಣು ದಿನಾಚರಣೆಯನ್ನು ವಿಜ್ಞಾನಿ ಡಾ.ಆರ್.ಮಂಜುನಾಥ್ ಉದ್ಘಾಟಿಸಿದರು.   

ಚಿಂತಾಮಣಿ: ಆಹಾರದ ಭದ್ರತೆಯಂತೆ ಮಣ್ಣಿಗೂ ಭದ್ರತೆ ಒದಗಿಸಿದರೆ ಪೌಷ್ಟಿಕ ಆಹಾರ, ಫಲವತ್ತತೆ ಕಾಪಾಡುವುದರ ಜತೆಗೆ ಮಣ್ಣಿನ ಮಾಲಿನ್ಯವನ್ನು ತಡೆಗಟ್ಟಬಹುದು ಎಂದು ಕೃಷಿ ವಿಜ್ಞಾನ ಕೇಂದ್ರ ಮುಖ್ಯಸ್ಥ ಡಾ.ಆರ್. ಮಂಜುನಾಥ್ ಅಭಿಪ್ರಾಯಪಟ್ಟರು.

ಕೃಷಿ ವಿಜ್ಞಾನ ಕೇಂದ್ರವು, ರೇಷ್ಮೆ ಕೃಷಿ ಮಹಾವಿದ್ಯಾಲಯದ ಸಹಯೋಗದೊಂದಿಗೆ ಶನಿವಾರ ಹಮ್ಮಿಕೊಂಡಿದ್ದ "ವಿಶ್ವ ಮಣ್ಣು ದಿನಾಚರಣೆ' ಯನ್ನು ಉದ್ಘಾಟಿಸಿ ಮಾತನಾಡಿದರು.

ರೈತರು ವೈಜ್ಞಾನಿಕವಾಗಿ ಬೆಳೆಯನ್ನು ಬೆಳೆಯುವ ಅನಿವಾರ್ಯತೆ ಎದುರಾಗಿದೆ. ಪ್ರತಿಯೊಬ್ಬರೂ ಮಣ್ಣಿನ ಪರೀಕ್ಷೆ ಮಾಡಿಸಿಕೊಂಡು ಅದಕ್ಕೆ ಅನುಗುಣವಾಗಿ ಬೆಳೆಯನ್ನು ಬೆಳೆಯಬೇಕು. ಸಮತೋಲನವಾದ ಪೋಷಕಾಶಗಳನ್ನು ಒದಗಿಸುವ ಮೂಲಕ ಉತ್ತಮ ಇಳುವರಿ ಪಡೆಯಬಹುದು ಎಂದರು.

ADVERTISEMENT

ವಿಜ್ಞಾನಿ ಡಾ.ಡಿ.ವಿ.ನವೀನ್ ವಿಶ್ವ ಮಣ್ಣು ದಿನಾಚರಣೆಯ ಕುರಿತು ಮಾತನಾಡಿ ಮಣ್ಣು ಜೀವ ವೈವಿಧ್ಯತೆಯಿಂದ ಕೂಡಿದೆ. ಆರೋಗ್ಯಕರವಾದ ಮಣ್ಣಿನಲ್ಲಿ ಉತ್ತಮವಾಗಿ ಬೆಳೆ ಬೆಳೆಯುತ್ತದೆ. ಉತ್ತಮ ಉತ್ಪನ್ನಗಳಿಂದ ಮನುಷ್ಯನ ಆರೋಗ್ಯಕ್ಕೂ ಸಹಾಯವಾಗುತ್ತದೆ. ಮಣ್ಣಿನಲ್ಲಿನ ಸೂಕ್ಷ್ಮಜೀವಿಗಳು ನೀರಿನ ಶುದ್ಧೀಕರಣ, ಮಣ್ಣಿನ ಮಲಿನತೆ ಕಡಿಮೆ ಮಾಡಿ ಹವಾಮಾನ ವೈಪರೀತ್ಯಗಳನ್ನು ಕಡಿಮೆ ಮಾಡುತ್ತದೆ ಎಂದು ತಿಳಿಸಿದರು.

ಕೇಂದ್ರದ ಮಣ್ಣು ವಿಜ್ಞಾನಿ ಡಾ.ಬಿ.ಗಾಯಿತ್ರಿ ತಾಂತ್ರಿಕ ಮಾಹಿತಿ ನೀಡಿ ಅತಿಯಾದ ರಸಗೊಬ್ಬರ ಹಾಗೂ ಪೀಡೆನಾಶಕಗಳ ಬಳಕೆಯಿಂದ ನೈಸರ್ಗಿಕ ಸಂಪನ್ಮೂಲಗಳಾದ ಮಣ್ಣು, ನೀರು, ಸುತ್ತಮುತ್ತಲಿನ ವಾತಾವರಣ, ಸ್ಸಯ ಮತ್ತು ಪ್ರಾಣಿ ಸಂಕುಲಗಳು ಮಲಿನಗೊಳ್ಳುತ್ತಿವೆ. ಭೂಮಿಯ ಭೌತಿಕ, ರಾಸಾಯನಿಕ ಹಾಗೂ ಜೈವಿಕ ಗುಣಧರ್ಮಗಳು ಕ್ಷೀಣಿಸುತ್ತಿವೆ ಎಂದರು.

ಬರಡಾಗುತ್ತಿರುವ ಭೂಮಿಗೆ ಚೈತನ್ಯ ತುಂಬಲು ಮಣ್ಣಿನಲ್ಲಿ ಸಾವಯವ ಅಂಶಗಳು ಹೆಚ್ಚಿಸುವುದು ಅಗತ್ಯ ಮತ್ತು ಅನಿವಾರ್ಯ. ಮಣ್ಣಿನಲ್ಲಿ ಸಾವಯವ ಅಂಶ ಹೆಚ್ಚಾದಂತೆ ಜೀವಿಗಳ ವೃದ್ಧಿ ಹೆಚ್ಚುತ್ತದೆ. ಇದರಿಂದ ಮಣ್ಣು ಆರೋಗ್ಯವಾಗಿ ಫಲವತ್ತಾಗಿ ಮಾರ್ಪಡುತ್ತದೆ ಎಂದು ಭಾಗವಹಿಸಿದ್ದ ರೈತರಿಗೆ ಅರಿವು ಮೂಡಿಸಿದರು.

ಕಾರ್ಯಕ್ರಮದಲ್ಲಿ ಪ್ರಗತಿಪರ ರೈತರಾದ ಎಂ.ಎನ್.ರವಿಶಂಕರ್, ಕೆ.ಸುರೇಶ್ ಅವರನ್ನು ಸನ್ಮಾನಿಸಲಾಯಿತು. ರೇಷ್ಮೆ ಕೃಷಿ ವಿದ್ಯಾಲಯದ ವಿದ್ಯಾರ್ಥಿಗಳು ಮಣ್ಣಿನ ಆರೋಗ್ಯ ಕುರಿತ ಭಿತ್ತಿಪತ್ರಗಳ ಪ್ರದರ್ಶನಗಳು ಏರ್ಪಡಿಸಿದ್ದರು. ಡಾ.ಸಿ.ಎನ್.ನಳಿನಾ, ಡಾ.ವಿ.ವೆಂಕಟಾಚಲಪತಿ, ಪ್ರಾಧ್ಯಾಪಕರು, ಸಿಬ್ಬಂದಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ರೈತರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.