ಚಿಕ್ಕಬಳ್ಳಾಪುರ: ಅರಣ್ಯ ಇಲಾಖೆಯ ವಾರ್ಷಿಕ ಯೋಜನೆಗಳಿಗೆ ರಾಜ್ಯ ಸರ್ಕಾರ ಬಿಡುಗಡೆ ಮಾಡುವ ಅನುದಾನವನ್ನು ಗಣನೀಯವಾಗಿ ಕಡಿಮೆ ಮಾಡಿದೆ. ಈ ಪರಿಣಾಮ ಜಿಲ್ಲೆಯಲ್ಲಿ ಅರಣ್ಯ ಇಲಾಖೆಯ ಮೂಲಕ ನಡೆಯುತ್ತಿದ್ದ ಹಸಿರೀಕರಣಕ್ಕೆ ತೀವ್ರ ಹಿನ್ನಡೆ ಆಗಿದೆ.
ಪ್ರಸಕ್ತ ವರ್ಷ ಹೊಸ ಯೋಜನೆಗಳನ್ನು ಜಾರಿಗೊಳಿಸುವುದಿರಲಿ ಈ ಹಿಂದಿನ ವರ್ಷಗಳಲ್ಲಿ ನೆಟ್ಟ ಗಿಡಗಳ ಅರ್ಧದಷ್ಟೂ ಸಸಿಗಳನ್ನು ಅರಣ್ಯ ಇಲಾಖೆ ನೆಡಲು ಸಾಧ್ಯವಾಗುತ್ತಿಲ್ಲ. ಅನುದಾನ ಕಡಿತಕ್ಕೆ ಕೊರೊನಾವೇ ಕಾರಣ ಎನ್ನುವರು ಅಧಿಕಾರಿಗಳು.
ಯೋಜನೆಗಳಿಗೆ ಅನುದಾನ ಕಡಿತಗೊಳಿಸಿರುವುದಷ್ಟೇ ಅಲ್ಲ ಕಚೇರಿ ನಿರ್ವಹಣೆ ಸೇರಿದಂತೆ ಆಡಳಿತಾತ್ಮಕ ಖರ್ಚು ವೆಚ್ಚಗಳನ್ನೂ ಕಡಿಮೆಗೊಳಿಸುವಂತೆ ಸರ್ಕಾರ ಸೂಚಿಸಿವೆ. ಇದಕ್ಕೆ ಬಿಡುಗಡೆ ಆಗಬೇಕಿದ್ದ ಅನುದಾನಕ್ಕೂ ಕತ್ತರಿ ಬಿದ್ದಿದೆ.
ಕಳೆದ ವರ್ಷ ಅರಣ್ಯ ಇಲಾಖೆಯಿಂದ ಜಿಲ್ಲೆಯಲ್ಲಿ 13 ಲಕ್ಷ ಸಸಿಗಳನ್ನು ಬೆಳೆಸಲಾಗಿತ್ತು. ಇವುಗಳಲ್ಲಿ 10 ಲಕ್ಷ ಸಸಿಗಳನ್ನು ಅರಣ್ಯ ಇಲಾಖೆಯೇ ನೆಟ್ಟು ಬೆಳೆಸಿದ್ದರೆ, 3 ಲಕ್ಷ ಸಸಿಗಳನ್ನು ರೈತರಿಗೆ ವಿತರಿಸಲಾಗಿತ್ತು. ಆದರೆ ಈ ವರ್ಷ ಆರು ಲಕ್ಷ ಸಸಿಗಳನ್ನಷ್ಟೇ ಅರಣ್ಯ ಇಲಾಖೆ ಬೆಳೆಸಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಸಸ್ಯ ಕ್ಷೇತ್ರ ವಿಸ್ತರಣೆ ಸಹ ಗಣನೀಯವಾಗಿ ಕಡಿಮೆ ಆಗಿದೆ. ಹಿಂದಿನ ವರ್ಷ ಜಿಲ್ಲೆಯಲ್ಲಿ 2,600 ಹೆಕ್ಟೇರ್‌ನಲ್ಲಿ ಹೊಸದಾಗಿ ಸಸಿಗಳನ್ನು ಬೆಳೆಸಲಾಗಿತ್ತು. ಹೀಗೆ ದೊಡ್ಡ ಪ್ರಮಾಣದಲ್ಲಿಯೇ ಅರಣ್ಯೀಕರಣಕ್ಕೆ ಒತ್ತು ನೀಡಲಾಗಿತ್ತು. ಪ್ರಸಕ್ತ ವರ್ಷ ಕೇವಲ 500 ಹೆಕ್ಟೇರ್‌ವರೆಗೆ ಮಾತ್ರ ಸಸ್ಯ ನೆಡುವ ಯೋಜನೆಯನ್ನು ಮಿತಿಗೊಳಿಸಲಾಗಿದೆ. ಹೀಗೆ ದೊಡ್ಡ ಪ್ರಮಾಣದಲ್ಲಿಯೇ ಸಸಿ ನೆಡುವ ಯೋಜನೆಗೆ ಮಿತಿ ಹೇರಲಾಗಿದೆ.
ಪ್ರತಿ ವರ್ಷದ ಮಳೆಗಾಲದ ಅವಧಿಯಲ್ಲಿ ರಸ್ತೆ ಬದಿ, ಸರ್ಕಾರಿ ಜಮೀನುಗಳಲ್ಲಿ ಇಲಾಖೆ ಸಸಿಗಳನ್ನು ನೆಡುತ್ತಿತ್ತು. ಆದರೆ ಈ ಬಾರಿ ರಸ್ತೆ ಬದಿಯಲ್ಲಿ ಸಸಿಗಳನ್ನು ನಾಟಿ ಮಾಡುವ ಯೋಜನೆಗೂ ಕತ್ತರಿ ಪ್ರಯೋಗವಾಗಿದೆ. ಇದಕ್ಕೂ ಅನುದಾನವನ್ನು ಸರ್ಕಾರ ನೀಡಿಲ್ಲ.
ಹಸಿರೀಕರಣಕ್ಕೆ ಹಿನ್ನಡೆ: ರಾಷ್ಟ್ರೀಯ ಅರಣ್ಯ ನೀತಿಯ ಪ್ರಕಾರ ಒಂದು ಜಿಲ್ಲೆಯಲ್ಲಿ ಶೇ 33ರಷ್ಟು ಅರಣ್ಯ ಇರಬೇಕು. ಈಗ ಜಿಲ್ಲೆಯಲ್ಲಿ ಶೇ 19ರಷ್ಟು ಅರಣ್ಯವಿದೆ. ಅರಣ್ಯ ಪ್ರದೇಶವಿಲ್ಲದಿರುವುದೂ ಜಿಲ್ಲೆಯನ್ನು ಬರಡುಗೊಳಿಸಿದೆ. ಈ ನಡುವೆಯೇ ಸರ್ಕಾರ ಮರ ಗಿಡಗಳ ತೀವ್ರ ಕೊರತೆ ಎದುರಿಸುತ್ತಿರುವ ಜಿಲ್ಲೆಯ ಅರಣ್ಯ ಇಲಾಖೆಗೆ ಅನುದಾನ ಕಡಿತಗೊಳಿಸುವುದು ಸರಿಯಲ್ಲ.
ಕನಿಷ್ಠ ವಿವೇಚನೆ ಬಳಸಿದ್ದರೂ ಜಿಲ್ಲೆಗೆ ಅನುದಾನ ಕಡಿಮೆ ಮಾಡುತ್ತಿರಲಿಲ್ಲ. ಬೇರೆ ಜಿಲ್ಲೆಗಳಲ್ಲಿ ಹೆಚ್ಚು ಅರಣ್ಯವಿದೆ. ಅಂತಹ ಜಿಲ್ಲೆಗಳಿಗೆ ಅನುದಾನ ಕಡಿಮೆ ಮಾಡಲಿ. ಆದರೆ ಬರಡು ಜಿಲ್ಲೆಯಲ್ಲಿ ಗಿಡ ಮರಗಳನ್ನು ಹೆಚ್ಚು ಬೆಳೆಸಬೇಕಾದುದು ಸರ್ಕಾರದ ಕರ್ತವ್ಯ ಎನ್ನುತ್ತಾರೆ ಜಿಲ್ಲೆಯ ಪರಿಸರ ಪ್ರಿಯರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.