ADVERTISEMENT

ಶಿಡ್ಲಘಟ್ಟ | ಮಿಶ್ರ ಬೆಳೆ: ಆರ್ಥಿಕ ಪ್ರಗತಿ ಕಂಡ ರೈತ

ಡಿ.ಜಿ.ಮಲ್ಲಿಕಾರ್ಜುನ
Published 1 ಜುಲೈ 2024, 7:01 IST
Last Updated 1 ಜುಲೈ 2024, 7:01 IST
ಶಿಡ್ಲಘಟ್ಟ ತಾಲ್ಲೂಕಿನ ತಿಮ್ಮನಾಯಕನಹಳ್ಳಿಯ ರೈತ ಟಿ.ಕೆ.ಅರುಣ್ ಕುಮಾರ್ ಅಡಿಕೆ ಸಸಿಗಳ ನಡುವೆ ಬಾಳೆ ಬೆಳೆದಿರುವುದು
ಶಿಡ್ಲಘಟ್ಟ ತಾಲ್ಲೂಕಿನ ತಿಮ್ಮನಾಯಕನಹಳ್ಳಿಯ ರೈತ ಟಿ.ಕೆ.ಅರುಣ್ ಕುಮಾರ್ ಅಡಿಕೆ ಸಸಿಗಳ ನಡುವೆ ಬಾಳೆ ಬೆಳೆದಿರುವುದು   

ಶಿಡ್ಲಘಟ್ಟ: ಮಿಶ್ರ ಬೆಳೆಯನ್ನು ಸಹ-ಬೆಳೆಸುವಿಕೆ ಅಥವಾ ಬಹು ಬೆಳೆ ಎಂದೂ ಕರೆಯುತ್ತಾರೆ. ಇದರಲ್ಲಿ ಎರಡಕ್ಕಿಂತ ಹೆಚ್ಚು ಅಥವಾ ಕೆಲವೊಮ್ಮೆ ಎರಡು ಬೆಳೆಗಳನ್ನು ಒಂದೇ ಸಮಯದಲ್ಲಿ ಒಂದೇ ಪ್ರದೇಶದಲ್ಲಿ ಬೆಳೆಯಲಾಗುತ್ತದೆ. ಈ ರೀತಿಯ ಬೆಳೆ ಪದ್ಧತಿಯು ಬೆಳೆ ಉತ್ಪಾದನೆಯನ್ನು ಹೆಚ್ಚಿಸುವುದರ ಜತೆಗೆ ಮಣ್ಣಿನ ಫಲವತ್ತತೆಯನ್ನು ಸುಧಾರಿಸುತ್ತದೆ. ರೈತ ಆರ್ಥಿಕವಾಗಿ ಪ್ರಗತಿ ಕಾಣಲು ಇದು ಅತ್ಯುತ್ತಮ ಮಾರ್ಗ ಎನ್ನುತ್ತಾರೆ ತಾಲ್ಲೂಕಿನ ತಿಮ್ಮನಾಯಕನಹಳ್ಳಿಯ ರೈತ ಟಿ.ಕೆ.ಅರುಣ್ ಕುಮಾರ್.

ಇದು ಬೆಳೆ ವೈಫಲ್ಯದ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಒಂದು ಬೆಳೆಗೆ ಮತ್ತೊಂದು ಪೂರಕವಾಗುವಂತೆ ಎರಡೆರಡು ಬೆಳೆ ಬೆಳೆಯಬಹುದು. ಇದು ಮಣ್ಣಿನ ಗುಣಮಟ್ಟವನ್ನು ಕಾಪಾಡುವುದರ ಜತೆಗೆ ಸರಿಯಾದ ಮಣ್ಣಿನ ಬಳಕೆಯನ್ನು ಅನುಮತಿಸುತ್ತದೆ ಎಂದು ಅನುಭವದ ಮಾತನಾಡುತ್ತಾರೆ.

ತಾಲ್ಲೂಕಿನ ತಿಮ್ಮನಾಯಕನಹಳ್ಳಿಯಲ್ಲಿ ರೈತ ಟಿ.ಕೆ.ಅರುಣ್ ಕುಮಾರ್ ಅವರು ಒಂದು ಸಾವಿರ ಅಡಿಕೆ ಸಸಿ ಮತ್ತು ಒಂದು ಸಾವಿರ ಬಾಳೆ ಸಸಿಗಳನ್ನು ಮಿಶ್ರ ಬೆಳೆಗಳಾಗಿ ಬೆಳೆದಿರುವರು. ಅಡಿಕೆ ಸಸಿ ಬೆಳೆಯಲು ನೆರಳು ಬೇಕು. ಅದಕ್ಕೆ ಪೂರಕವಾಗುವಂತೆ ಜಿ9 ತಳಿಯ ಪಚ್ಚಬಾಳೆ ನೆಟ್ಟಿದ್ದಾರೆ. ನಾಲ್ಕು ವರ್ಷಗಳಲ್ಲಿ ಬಾಳೆಯಿಂದ ನಾಲ್ಕು ಫಸಲು ಸಿಗುತ್ತದೆ. ಅಷ್ಟರಲ್ಲಿ ಅಡಿಕೆಯೂ ಫಲ ನೀಡುವ ಹಂತಕ್ಕೆ ಬಂದಿರುತ್ತದೆ ಎನ್ನುತ್ತಾರೆ ಅವರು.

ADVERTISEMENT

ಬಾಳೆ ಗಿಡ ಇದೀಗ ಫಲ ಬಿಟ್ಟಿದ್ದು, ಒಂದೊಂದು ಗೊನೆಯೂ 60 ರಿಂದ 80 ಕೆ.ಜಿ.ತೂಗಲಿದ್ದು, ಉತ್ತಮ ಬೆಲೆ ಸಿಗಲಿದೆ.

ದಾಳಿಂಬೆ ಕೂಡ ಬೆಳೆದಿದ್ದು, ಅದರ ನಡುವೆ ಮಿಶ್ರ ಬೆಳೆಯಾಗಿ ಕಡಲೆಬೀಜವನ್ನು ಬಿತ್ತಿದ್ದಾರೆ. ಇದರಿಂದ ದಾಳಿಂಬೆ ಗಿಡಗಳ ನಡುವೆ ಹುಲ್ಲು ಬೆಳೆಯುವುದು ತಪ್ಪುತ್ತಿದೆ. ಕಡಲೆಕಾಯಿ ಮೂರರಿಂದ ನಾಲ್ಕು ತಿಂಗಳಿಗೆ ಕಟಾವಿಗೆ ಬರುತ್ತದೆ.

ಈ ಪದ್ಧತಿಯನ್ನು ಅವರು ಕುರಿಸಾಕಾಣಿಕೆಗೂ ಅಳವಡಿಸಿಕೊಂಡಿದ್ದಾರೆ. ಕೊಂಚ ಎತ್ತರದಲ್ಲಿ ಕುರಿ ಶೆಡ್ ಮಾಡಿದ್ದು, ಕೆಳಗಡೆ ನಾಟಿ ಕೋಳಿಗಳನ್ನು ಸಹ ಸಾಕುತ್ತಿದ್ದಾರೆ.

ರೈತರು ಮೊದಲು ತಮ್ಮ ಜೀವನಕ್ಕೆ ಬೇಕಾದ ಆಹಾರಗಳನ್ನು ಬೆಳೆದುಕೊಳ್ಳಬೇಕು. ನಂತರ ಮಾರಾಟಕ್ಕೆ ಮುಂದಾಗಬೇಕು, ಎನ್ನುವ ಇವರು, ಮನೆಯ ಬಳಿ ಮನೆಗೆ ಬೇಕಾಗುವಷ್ಟು ಸೊಪ್ಪು ತರಕಾರಿಗಳನ್ನು ಬೆಳೆದುಕೊಳ್ಳುತ್ತಾರೆ.

‘ಕೃಷಿ ಇಂದು ಅನಾಕರ್ಷಕವಾಗಿದೆ. ಇದರಿಂದ ರೈತರು ಬದುಕು ಕಟ್ಟಲಾಗುವುದಿಲ್ಲ ಎಂಬ ಅಭಿಪ್ರಾಯವಿದೆ. ಇದನ್ನು ನಾವು ಬದಲಿಸಬೇಕಿದೆ. ಕೃಷಿ ಎಂದರೆ ಸಮಗ್ರವಾದುದು. ಅದರಲ್ಲಿ ಕೋಳಿ ಸಾಕಣೆ, ಕುರಿ ಸಾಕಣೆ, ಹೈನುಗಾರಿಕೆ ಎಲ್ಲವೂ ಸೇರಿರುತ್ತದೆ. ಆದರೆ, ಇತ್ತೀಚೆಗೆ ಈ ರೀತಿ ಸಮಗ್ರೀಕರಣ ಮಾಡುವುದನ್ನು ಬಿಟ್ಟು ಛಿದ್ರಛಿದ್ರ ಮಾಡಿದ್ದೇವೆ. ಸಮಗ್ರತೆ ಇದ್ದಾಗ ರೈತನ ಬದುಕು ಹಸನಾಗುತ್ತದೆ’ ಎನ್ನುತ್ತಾರೆ ರೈತ ಟಿ.ಕೆ.ಅರುಣ್ ಕುಮಾರ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.