ADVERTISEMENT

ಸಡಗರದ ನಡುವೆ ‘ಸುಗ್ಗಿ ಹಬ್ಬ’ ಸಂಪನ್ನ

ಅಲಂಕೃತ ಜಾನುವಾರುಗಳ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 15 ಜನವರಿ 2020, 12:47 IST
Last Updated 15 ಜನವರಿ 2020, 12:47 IST
ಚಿಕ್ಕಬಳ್ಳಾಪುರದ ದೊಡ್ಡಭಜನೆ ಮನೆಯ ಭಕ್ತರು ಶ್ರೀಕೃಷ್ಣನ ಭಾವಚಿತ್ರದ ಮೆರವಣಿಗೆ ನಡೆಸಿದರು.
ಚಿಕ್ಕಬಳ್ಳಾಪುರದ ದೊಡ್ಡಭಜನೆ ಮನೆಯ ಭಕ್ತರು ಶ್ರೀಕೃಷ್ಣನ ಭಾವಚಿತ್ರದ ಮೆರವಣಿಗೆ ನಡೆಸಿದರು.   

ಚಿಕ್ಕಬಳ್ಳಾಪುರ: ‘ಸಮೃದ್ಧಿಯ ಸಂಕೇತ’ವಾದ ಮಕರ ಸಂಕ್ರಾಂತಿ ಹಬ್ಬವನ್ನು ಜಿಲ್ಲೆಯಾದ್ಯಂತ ಬುಧವಾರ ಶ್ರದ್ಧಾಭಕ್ತಿ ಮತ್ತು ಸಡಗರದಿಂದ ಆಚರಿಸಲಾಯಿತು. ಹಬ್ಬದ ಪ್ರಯುಕ್ತ ಹಳ್ಳಿ, ಪಟ್ಟಣ, ನಗರಗಳ ದೇವಾಲಯಗಳಲ್ಲಿ ವಿಶೇಷ ಅಲಂಕಾರ, ಅಭಿಷೇಕ, ಪೂಜೆ, ಮಂಗಳಾರತಿ ಕೈಂಕರ್ಯಗಳು ನಡೆದವು.

ಸುರ್ಯೋದಯಕ್ಕೂ ಮುನ್ನವೇ ಎದ್ದು ಕಪ್ಪು ಎಳ್ಳಿನೊಂದಿಗೆ ಸ್ನಾನ ಮಾಡಿದ ಜನರು ದೇವಸ್ಥಾನಗಳಿಗೆ ತೆರಳಿ ಎಳ್ಳೆಣ್ಣೆ ದೀಪ ಹಚ್ಚುತ್ತಿದ್ದರು. ಉತ್ತರಾಯಣ ಪುಣ್ಯಕಾಲದ ಅಂಗವಾಗಿ ಸೂರ್ಯನಿಗೆ ಪೂಜೆ ಸಲ್ಲಿಸಿ, ನಮಸ್ಕರಿಸುತ್ತಿದ್ದ ದೃಶ್ಯಗಳು ಗೋಚರಿಸಿದವು.

ಕೆಲವರು ಸಂಕ್ರಾಂತಿ ಪುಣ್ಯ ಕಾಲದ ಸ್ನಾನ ಮಾಡುವ ಉದ್ದೇಶಗಳಿಂದ ಪರಸ್ಥಳಗಳಿಗೆ ಪ್ರವಾಸ ಹೊರಟರು. ಜನರು ನೆರೆಯವರಿಗೆ ಬಂಧು ಮಿತ್ರರಿಗೆ ಎಳ್ಳು ಬೆಲ್ಲ, ಕಬ್ಬಿನ ಜಲ್ಲೆ ಹಂಚು ಮೂಲಕ ಹಬ್ಬದ ಶುಭ ಕೋರುತ್ತಿದ್ದರು.
ಸುರ್ಯೋದಯದೊಂದಿಗೆ ಜಾನುವಾರ ಮೈತೊಳೆದು ಸ್ವಚ್ಛಗೊಳಿಸಿದ ಗ್ರಾಮೀಣ ಪ್ರದೇಶಗಳ ಜನರು ‘ಸುಗ್ಗಿಯ ಹಬ್ಬ’ದ ಪ್ರಯುಕ್ತ ರಾಸುಗಳನ್ನು ಬಗೆ ಬಗೆಯಲ್ಲಿ ಶೃಂಗರಿಸಿ, ಮೆರವಣಿಗೆ ನಡೆಸಿ ಸಂಜೆ ವೇಳೆ ಕಿಚ್ಚು ಹಾಯಿಸಿ ಸಂಭ್ರಮಪಟ್ಟರು.

ADVERTISEMENT

ನಗರದ ಬಿ.ಬಿ.ರಸ್ತೆಯ ಅಯ್ಯಪ್ಪಸ್ವಾಮಿ ದೇವಾಲಯ, ಬಜಾರ್‌ ರಸ್ತೆ ಕೋದಂಡರಾಮಸ್ವಾಮಿ ದೇವಸ್ಥಾನ, ಬಾಲಾಜಿ ಚಿತ್ರಮಂದಿರ ಹಿಂಭಾಗದ ರಸ್ತೆಯ ಪ್ರಸಾದ ಗಣಪತಿ ಮಂದಿರ, ಕೋಟೆ ಕಾಳಿ ದೇವಸ್ಥಾನ, ರಂಗಸ್ಥಳದ ರಂಗನಾಥಸ್ವಾಮಿ ದೇವಾಲಯ, ಎಂ.ಜಿ.ರಸ್ತೆಯ ಮರುಳಸಿದ್ದೇಶ್ವರ, ಕಂದವಾರಪಟೆಯ ಲಕ್ಷ್ಮಿವೆಂಕಟರಮಣಸ್ವಾಮಿ ದೇವಾಲಯದ ಸೇರಿದಂತೆ ಹಲವಾರು ದೇವಾಲಯಗಳಲ್ಲಿ ಹಬ್ಬದ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ರಥೋತ್ಸವ ಹಮ್ಮಿಕೊಳ್ಳಲಾಗಿತ್ತು.

ನಗರದ 7ನೇ ವಾರ್ಡ್‌ನಲ್ಲಿ ಗಂಗಮಾಂಭ ಸೇವಾ ಅಭಿವೃದ್ಧಿ ಸಂಘದ ಪದಾಧಿಕಾರಿಗಳು ಸಂಕ್ರಾಂತಿ ಪ್ರಯುಕ್ತ ರಾಸುಗಳ ಮೆರವಣಿಗೆ ಆಯೋಜಿಸಿದ್ದರು. ನಿಮಾಕಲಕುಂಟೆಯಲ್ಲಿರುವ ಸಂಘದ ಕಚೇರಿಯಿಂದ ಆರಂಭಗೊಂಡ ಮೆರವಣಿಗೆ ಎಂ.ಜಿ.ರಸ್ತೆ, ಮೈಲಪ್ಪನಹಳ್ಳಿ ರಸ್ತೆ ಮುಖಾಂತರ ಗಂಗನಮಿದ್ದೆ ತಲುಪಿ ಕೊನೆಗೊಂಡಿತು. ಮೆರವಣಿಗೆಯಲ್ಲಿ ಗಂಗಮಾಂಭ ದೇವಿ ಉತ್ಸವ ಮೂರ್ತಿ ಮೆರವಣಿಗೆ ಮಾಡಲಾಯಿತು.

ಅಯ್ಯಪ್ಪ ಸ್ವಾಮಿ ಆಸ್ತಿಕರ ಸೇವಾ ಸಂಘದ ಪದಾಧಿಕಾರಿಗಳು ಮತ್ತು ಅಯ್ಯಪ್ಪ ಮಾಲಾಧಾರಿಗಳು ನಗರದ ಕೆಇಬಿ ಕಾಲೋನಿಯಲ್ಲಿರುವ ಗಣಪತಿ ದೇವಾಲಯದಿಂದ ಬಿ.ಬಿ.ರಸ್ತೆಯಲ್ಲಿರುವ ಅಯ್ಯಪ್ಪಸ್ವಾಮಿ ದೇವಾಲಯದ ವರೆಗೆ ಆಲಂಕಾರಿಕ ಆಭರಣಗಳನ್ನು ಮೆರವಣಿಗೆಯಲ್ಲಿ ಹೊತ್ತು ತಂದರು.

ದಾರಿಯುದ್ದಕ್ಕೂ ಚೆಂಡೆವಾದ್ಯ ಮೇಳದೊಂದಿಗೆ ಸಾಗಿದ ಮೆರವಣಿಗೆ ನೋಡುಗರ ಮನ ಸೆಳೆಯಿತು. ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಸಂಜೆ ಮಹಾಜ್ಯೋತಿ, ಪ್ರಸಾದ ವಿನಿಯೋಗ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಜತೆಗೆ ಹೂವಿನ ಪಲ್ಲಕ್ಕಿ ಮೆರವಣಿಗೆ ಆಯೋಜಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.