ADVERTISEMENT

ಶಾಸಕರಾಗುವವರಲ್ಲಿ ಸ್ವಂತ ಪರಿಶ್ರಮವೇ ಹೆಚ್ಚು, ಪಕ್ಷದ ಪಾಲು ಕಡಿಮೆ: ಜಿ.ವಿ.ರಾಜೇಶ್

ಹಳೇ ಮೈಸೂರು ಭಾಗ; ಬಿಜೆಪಿ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಅಭಿಮತ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2023, 11:13 IST
Last Updated 29 ಆಗಸ್ಟ್ 2023, 11:13 IST
ಜಿ.ವಿ. ರಾಜೇಶ್
ಜಿ.ವಿ. ರಾಜೇಶ್   

ಚಿಕ್ಕಬಳ್ಳಾಪುರ: ಹಳೇ ಮೈಸೂರು ಭಾಗದಲ್ಲಿ ಬಿಜೆಪಿಯಿಂದ ಶಾಸಕರಾಗುವವರಲ್ಲಿ ಅವರ ಸ್ವಂತ ಪರಿಶ್ರಮ ಶೇ 90ರಷ್ಟು ಇದ್ದರೆ ಪಕ್ಷದ ಪಾಲು ಶೇ 10ರಷ್ಟು ಮಾತ್ರ ಎಂದು ಬಿಜೆಪಿ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಜಿ.ವಿ. ರಾಜೇಶ್ ತಿಳಿಸಿದರು.

ನಗರದಲ್ಲಿ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷರಿಗೆ ಮಂಗಳವಾರ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ಗೆ ತನ್ನದೇ ಆದ ಮತ ಬ್ಯಾಂಕ್ ಇದೆ. ಆದರೆ ಬಿಜೆಪಿಗೆ ಆ ರೀತಿಯಲ್ಲಿ ಇಲ್ಲ. ಬಿಜೆಪಿಯಿಂದ ಶಾಸಕರಾಗಲು ಅಭಿವೃದ್ಧಿ, ಜನಪ್ರಿಯತೆ, ನಾಯಕತ್ವವನ್ನು ಪಣಕ್ಕೆ ಒಡ್ಡಬೇಕಾಗುತ್ತದೆ. ಪಕ್ಷ, ಸಿದ್ಧಾಂತದ ಕಾರಣ ಶೇ 10ರಷ್ಟು ಮತಗಳು ಇದಕ್ಕೆ ಬಂದು ಸೇರುತ್ತವೆ ಎಂದು ಹೇಳಿದರು. 

ADVERTISEMENT

ಈ ಭಾಗದ ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ 40 ರಿಂದ 50 ಸಾವಿರದಷ್ಟು ಮತ ಬ್ಯಾಂಕ್‌ ಇದೆ. ಆದರೆ ಬಿಜೆಪಿಯವರು 1 ಮತದಿಂದ ಲೆಕ್ಕಾಚಾರ ಆರಂಭಿಸಬೇಕು. ಹಳೇ ಮೈಸೂರು ಭಾಗದ ಗ್ರಾಮಗಳಲ್ಲಿ ಹಿಂದೂ– ಮುಸ್ಲಿಮರ ನಡುವೆ ಜಗಳ ನಡೆಯುವುದಿಲ್ಲ. ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಜಗಳ ನಡೆಯುತ್ತದೆ. ಆದರೆ  ಹಾಸನ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ ಸೇರಿದಂತೆ ಕೆಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಒಳ ಅಪವಿತ್ರ ಮೈತ್ರಿ ಮಾಡಿಕೊಂಡ ಕಾರಣ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲಬೇಕಾಯಿತು ಎಂದರು.

ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿಗೆ ಹಿನ್ನಡೆ ಆಗುತ್ತಿದೆ. ಸರ್ಕಾರಿ ಕಾಮಗಾರಿಗಳು ನಡೆಯುತ್ತಿಲ್ಲ. ಒಂದು ಕೂಲಿ ಕಾರ್ಮಿಕರ ಕುಟುಂಬಕ್ಕೆ ಈ ಎಲ್ಲ ಗ್ಯಾರಂಟಿ ಯೋಜನೆಗಳಿಂದ ಮಾಸಿಕ ₹ 2 ಸಾವಿರದಿಂದ ₹ 3.5 ಸಾವಿರ ತಲುಪುತ್ತದೆ. ಇದೇ ಕುಟುಂಬ ಕೂಲಿ ಕೆಲಸಗಳಿಂದ ಮಾಸಿಕ ₹ 10 ಸಾವಿರದಿಂದ ₹ 15 ಸಾವಿರ ಗಳಿಸುತ್ತಿತ್ತು. ಅಭಿವೃದ್ಧಿ ಕಾಮಗಾರಿಗಳು ಸ್ಥಗಿತವಾದ ಕಾರಣ ಇವರ ಬದುಕು ಕಷ್ಟಕ್ಕೆ ಸಿಲುಕಿದೆ ಎಂದು ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.