ಗೌರಿಬಿದನೂರು: ನಾಡಿದ ಹೆಸರಾಂತ ಸಂತ, ತ್ರಿವಿಧ ದಾಸೋಹಿ, ಸಿದ್ಧಗಂಗಾ ಮಠದ ದಿವಂಗತ ಶಿವಕುಮಾರ್ ಸ್ವಾಮೀಜಿಗೆ 'ಭಾರತರತ್ನ' ಪ್ರಶಸ್ತಿ ನೀಡಿ ಗೌರವಿಸುವ ಮೂಲಕ ಅವರ ಸಮಾಜಮುಖಿ ಕಾರ್ಯಗಳಿಗೆ ಅರ್ಥಪೂರ್ಣ ಸನ್ಮಾನ ನೀಡಿ, ಜನರ ಆಶಯಗಳನ್ನು ಈಡೇರಿಸಬೇಕಾಗಿದೆ ಎಂದು ಶಾಸಕ ಎನ್.ಎಚ್.ಶಿವಶಂಕರರೆಡ್ಡಿ ಒತ್ತಾಯಿಸಿದ್ದಾರೆ.
ಸಿದ್ಧಗಂಗಾ ಮಠದಲ್ಲಿ ದಶಕಗಳ ಕಾಲ ನಿರಂತರವಾಗಿ ಲಕ್ಷಾಂತರ ಮಂದಿ ಮಕ್ಕಳಿಗೆ ಅನ್ನ, ಅಕ್ಷರ ಮತ್ತು ವಸತಿಯನ್ನು ನೀಡಿ ಅವರ ಭವಿಷ್ಯವನ್ನು ರೂಪಿಸಲು ಬೆನ್ನೆಲುಬಾಗಿ ನಿಂತಿದ್ದ ಶಿವಕುಮಾರ ಸ್ವಾಮೀಜಿ ಕಾರ್ಯ ನಿಜಕ್ಕೂ ಅನನ್ಯ. ಅವರ ಈ ನಿಸ್ವಾರ್ಥ ಸೇವೆ ನಾಡು ಹಾಗೂ ದೇಶದ ಜನತೆಗೆ ಮಾದರಿಯಾಗಬೇಕಾಗಿದೆ.
ಸಿದ್ಧಗಂಗಾ ಶ್ರೀಯವರು ಒಂದು ಸಮುದಾಯಕ್ಕೆ ಸೀಮಿತವಾಗದೆ, ಎಲ್ಲ ವರ್ಗದ ಜನರ ಪಾಲಿಗೆ ಆರಾಧ್ಯ ದೈವರಾಗಿದ್ದಾರೆ. ಒಂದು ನೂರು ವರ್ಷಗಳಿಗೂ ಅಧಿಕವಾಗಿ ಅವರು ಈ ಭೂಮಿಯ ಮೇಲೆ ನಡೆದಾಡಿಕೊಂಡು ನಿಸ್ವಾರ್ಥ ಸೇವೆ ಮಾಡುವ ಮೂಲಕ ಜನರ ಮನ ಮನೆಗಳಲ್ಲಿ ನಿಜವಾದ ದೇವರಾಗಿದ್ದಾರೆ.
ಸಮಾಜದ ಏಳಿಗೆಗಾಗಿ, ಬಡವ ಮತ್ತು ಮಧ್ಯಮ ವರ್ಗದ ಜನತೆಯ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ನಾಡಿನಾದ್ಯಂತ ಊರೂರು ಅಲೆದು ದೇಣಿಗೆ ಮತ್ತು ದವಸ ಧಾನ್ಯಗಳನ್ನು ಸಂಗ್ರಹಣೆ ಮಾಡಿ ಸಿದ್ಧದಗಂಗಾ ಮಠದಲ್ಲಿನ ಮಕ್ಕಳ ಬದುಕಿಗೆ ಆಸರೆಯಾಗಿ ನಿಂತರು. ದಿನಗಳು ಕಳೆದಂತೆ ಈ ಕ್ಷೇತ್ರಕ್ಕೆ ಬರುವ ಭಕ್ತಾದಿಗಳಿಗೂ ಅನ್ನ ಮತ್ತು ವಸತಿ ಸೌಲಭ್ಯಗಳನ್ನು ಕಲ್ಪಿಸಿದರು. ಅವರು ಅಡಿಪಾಯ ಹಾಕಿಕೊಟ್ಟು ನಡೆಸಿದ ಪ್ರತಿಯೊಂದು ಸಾಮಾಜಿಕ ಮತ್ತು ಧಾರ್ಮಿಕ ಕಾರ್ಯಗಳನ್ನು ನಿತ್ಯ ನಡೆಸಿಕೊಂಡು ಬರಲಾಗುತ್ತಿರುವುದು ವಿಶೇಷ.
ಪಕ್ಷಾತೀತವಾಗಿ ಮತ್ತು ಜಾತ್ಯತೀತವಾಗಿ ಎಲ್ಲರನ್ನೂ ಸಮಾನವಾಗಿ ಕಾಣುವ ಅವರ ಈ ಮೌಲ್ಯಾಧಾರಿತ ಗುಣಗಳು ಲಕ್ಷಾಂತರ ಜನರನ್ನು ಕ್ಷೇತ್ರದತ್ತ ಆಕರ್ಷಿಸುತ್ತವೆ. ಸಿದ್ಧಗಂಗಾ ಮಠದಲ್ಲಿ ಓದಿ ಬೆಳೆದ ಲಕ್ಷಾಂತರ ಮಂದಿ ವಿದ್ಯಾರ್ಥಿಗಳು ಇಂದು ರಾಜ್ಯ ಹಾಗೂ ರಾಷ್ಟ್ರದ ವಿವಿಧೆಡೆ ತಮ್ಮ ಬದುಕು ರೂಪಿಸಿಕೊಳ್ಳಲು ಸಹಕಾರಿಯಾಗಿದೆ. ಇಂತಹ ಮಹಾನ್ ಪುರುಷ, ಕೋಟ್ಯಂತರ ಜನರ ಬದುಕಿಗೆ ಮಾದರಿಯಾಗಿರುವ ಇವರಿಗೆ ಸರ್ಕಾರವು ಭಾರತರತ್ನ ಪ್ರಶಸ್ತಿ ನೀಡಿ ಗೌರವಿಸಿದಲ್ಲಿ ಈ ನಾಡು ನುಡಿ ಮತ್ತು ನೆಲಕ್ಕೆ ಗೌರವ ಹೆಚ್ಚಾಗುತ್ತದೆ ಎಂದು ಕೋಟ್ಯಂತರ ಭಕ್ತರ ಆಶಯವಾಗಿದೆ ಎನ್ನುತ್ತಾರೆ ಶಾಸಕ ಎನ್.ಎಚ್.ಶಿವಶಂಕರರೆಡ್ಡಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.