ADVERTISEMENT

ಚಿಕ್ಕಬಳ್ಳಾಪುರ: ಕೆಸರು ಗದ್ದೆಯಾದ ಹೂ ಮಾರುಕಟ್ಟೆ

ಮಳೆಗಾಲದಲ್ಲಿ ‘ಉಪ ಪ್ರಾಂಗಣ’ ಅಧ್ವಾನ; ಕನಿಷ್ಠ ವ್ಯವಸ್ಥೆಗಳನ್ನೂ ಮಾಡದ ಎಪಿಎಂಸಿ

ಡಿ.ಎಂ.ಕುರ್ಕೆ ಪ್ರಶಾಂತ
Published 17 ಅಕ್ಟೋಬರ್ 2024, 6:20 IST
Last Updated 17 ಅಕ್ಟೋಬರ್ 2024, 6:20 IST
ಚಿಕ್ಕಬಳ್ಳಾಪುರದ ಹೂ ಮಾರುಕಟ್ಟೆ ಉಪಪ್ರಾಂಗಣದ ಸ್ಥಿತಿ
ಚಿಕ್ಕಬಳ್ಳಾಪುರದ ಹೂ ಮಾರುಕಟ್ಟೆ ಉಪಪ್ರಾಂಗಣದ ಸ್ಥಿತಿ   

ಚಿಕ್ಕಬಳ್ಳಾಪುರ: ಪ್ರತಿ ವರ್ಷದ ಮಳೆಗಾಲದಲ್ಲಿ ನಗರದ ಕೆ.ವಿ.ಕ್ಯಾಂಪಸ್ ಬಳಿಯ ಹೂ ಮಾರುಕಟ್ಟೆ ‘ಉಪ ಪ್ರಾಂಗಣ’ ಕೆಸರು ಗದ್ದೆಯಾಗುತ್ತದೆ. ಆಗ ಎಪಿಎಂಸಿ ಅಧಿಕಾರಿಗಳ ವಿರುದ್ಧ ರೈತರು, ವರ್ತಕರು ಆಕ್ರೋಶ ವ್ಯಕ್ತಪಡಿಸುತ್ತಾರೆ. ಮಾಧ್ಯಮಗಳಲ್ಲಿಯೂ ಸುದ್ದಿ ಆಗುತ್ತದೆ. ಆದರೆ ಅಧಿಕಾರಿಗಳು ಮಾತ್ರ ‘ಖಾಸಗಿ ಜಾಗ’ದ ನೆಪ ಹೇಳಿ ಕನಿಷ್ಠ ಸೌಲಭ್ಯಗಳನ್ನೂ ಕಲ್ಪಿಸಿದೆ ಕೈ ತೊಳೆದುಕೊಳ್ಳುತ್ತಾರೆ.

ಮತ್ತೊಂದು ಮಳೆಗಾಲ ಬಂದಾಗ ಮತ್ತದೇ ಅಧ್ವಾನ, ಆಕ್ರೋಶ. ಕೆ.ವಿ.ಕ್ಯಾಂಪಸ್ ಬಳಿಯ ಹೂ ಮಾರುಕಟ್ಟೆ ಜಾಗವು ಸಮತಟ್ಟಿಲ್ಲದ ಮತ್ತು ಕನಿಷ್ಠ ಸೌಲಭ್ಯಗಳೂ ಇಲ್ಲದ ಉಪಪ್ರಾಂಗಣವಾಗಿದೆ.

ಮಳೆಗಾಲದಲ್ಲಿ ಆವರಣದಲ್ಲಿ ನೀರು ನಿಲ್ಲದಂತೆ ಹರಿದು ಹೋಗಲು ವ್ಯವಸ್ಥೆ ಮಾಡಬೇಕು. ಮಹಿಳೆಯರಿಗೆ ಶೌಚಾಲಯದ ವ್ಯವಸ್ಥೆ ಮತ್ತು ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಬೇಕು ಎಂದು ಈ ಹಿಂದಿನಿಂದಲೂ ವರ್ತಕರು ಮನವಿ ಮಾಡುತ್ತಲೇ ಇದ್ದಾರೆ. ಆದರೆ ಈ ಯಾವುದೂ ಜಾರಿ ಆಗುತ್ತಲೇ ಇಲ್ಲ.

ADVERTISEMENT

ಉಪಪ್ರಾಂಗಣದ ತಗ್ಗು ದಿಣ್ಣೆಗಳಲ್ಲಿಯೇ ವರ್ತಕರು, ರೈತರು ವ್ಯಾಪಾರ ನಡೆಸುವರು. ಒಂದೆಡೆ ಕಸದ ರಾಶಿ. ಸ್ವಲ್ಪ ಮಳೆ ಸುರಿದರೂ ಈ ಸ್ಥಳವು ಕೆಸರು ಗದ್ದೆ ಆಗುತ್ತದೆ. 

ಕೋವಿಡ್ ಸಂದರ್ಭದಲ್ಲಿ ಅಂತರ ಕಾಪಾಡಿಕೊಳ್ಳಬೇಕು ಮತ್ತು ರೋಗ ತಡೆಯಬೇಕು ಎನ್ನುವ ಉದ್ದೇಶದಿಂದ ಚಿಕ್ಕಬಳ್ಳಾಪುರ ಎಪಿಎಂಸಿಯಿಂದ ಇಲ್ಲಿನ ಹೂ ಮಾರುಕಟ್ಟೆ ಸ್ಥಳಾಂತರವಾಯಿತು. ಖಾಸಗಿ ಜಾಗವನ್ನು ಬಾಡಿಗೆಗೆ ಪಡೆದು ಇಲ್ಲಿ ವ್ಯಾಪಾರ ವಹಿವಾಟಿಗೆ ಅವಕಾಶ ಕಲ್ಪಿಸಲಾಯಿತು. 

ಖಾಸಗಿ ಜಾಗವಾದ ಕಾರಣ ಯಾವುದೇ ನಿರ್ಮಾಣ ಕಾಮಗಾರಿಗಳನ್ನು ನಡೆಸಲು ಸಾಧ್ಯವಿಲ್ಲ. ಆದರೆ ಮಾರುಕಟ್ಟೆಯಲ್ಲಿ ನೀರು ನಿಲ್ಲದಂತೆ ಎಂ.ಸ್ಯಾಂಡ್, ಜಲ್ಲಿ ಹಾಕಿಸಬೇಕು. ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಕನಿಷ್ಠ ಮಟ್ಟದಲ್ಲಿ ವ್ಯವಸ್ಥೆಗಳನ್ನು ರೂಪಿಸಬೇಕು ಎನ್ನುವ ಆಗ್ರಹ ವರ್ತಕರು ಮತ್ತು ರೈತರದ್ದಾಗಿದೆ.

ತಾತ್ಕಾಲಿಕವಾಗಿ ನಡೆಯುತ್ತಿದ್ದ ಹೂ ಮಾರುಕಟ್ಟೆಗೆ ಕಳೆದ ಮಾರ್ಚ್‌ನಲ್ಲಿ ‘ಅಧಿಕೃತ’ ಎನ್ನುವ ಮುದ್ರೆ ಸರ್ಕಾರದಿಂದ ಬಿದ್ದಿದೆ. ಚಿಕ್ಕಬಳ್ಳಾ‍ಪುರ ಎಪಿಎಂಸಿಯ ‘ಉಪ ಪ್ರಾಂಗಣವಾಗಿ’ವಾಗಿ ಕಾರ್ಯನಿರ್ವಹಿಸುತ್ತಿದೆ. ರಾಜ್ಯ ಕೃಷಿ ಮಾರಾಟ ಇಲಾಖೆ ನಿರ್ದೇಶಕರೇ ಈ ಬಗ್ಗೆ ಅಧಿಕೃತ ಆದೇಶ ಹೊರಡಿಸಿದ್ದಾರೆ.  

ಹೀಗೆ ಉಪಪ್ರಾಂಗಣದ ಮುದ್ರೆ ಬಿದ್ದ ನಂತರ ಇಲ್ಲಿ ವಹಿವಾಟು ನಡೆಸುವ ವರ್ತಕರಿಂದ ಸೆಸ್ ಸಹ ಸಂಗ್ರಹಿಸಲಾಗುತ್ತಿದೆ. ಹೀಗಿದ್ದರೂ ಕನಿಷ್ಠ ಮಟ್ಟದಲ್ಲಿ ಸೌಲಭ್ಯಗಳು ಇಲ್ಲ.

ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ದೇವನಹಳ್ಳಿ, ಶಿಡ್ಲಘಟ್ಟ ತಾಲ್ಲೂಕಿನ ರೈತರು ಇಲ್ಲಿಗೆ ಹೂವನ್ನು ತರುತ್ತಾರೆ. ಮಾರುಕಟ್ಟೆಯಲ್ಲಿ 80ರಿಂದ 90 ಮಂದಿ ವರ್ತಕರು ವಹಿವಾಟು ನಡೆಸುತ್ತಾರೆ. 

ಈ ಸ್ಥಳವು ಎಲ್ಲ ಭಾಗದ ರೈತರಿಗೂ ಸಂಪರ್ಕಕ್ಕೆ ಅನುಕೂಲವಾಗಿದೆ. ಆದರೆ ತಾತ್ಕಾಲಿಕ ಮಾರುಕಟ್ಟೆಗೆ ಉಪಪ್ರಾಂಗಣದ ಮುದ್ರೆ ಬಿದ್ದರೂ ವ್ಯವಸ್ಥೆಗಳು ಸುಧಾರಣೆ ಕಾಣುತ್ತಿಲ್ಲ.

...
...

‘ಶುಲ್ಕ ಪಾವತಿಸಿದರೂ ಸೌಲಭ್ಯವಿಲ್ಲ’

ತಾತ್ಕಾಲಿಕ ಹೂ ಮಾರುಕಟ್ಟೆಯು ಉಪಪ್ರಾಂಗಣವಾದ ನಂತರ ಶುಲ್ಕ ವಸೂಲಿ ಮಾಡಲಾಗುತ್ತಿದೆ. ಸಣ್ಣ ವ್ಯಾಪಾರಿಗಳು ಒಂದು ವಾರಕ್ಕೆ ಒಂದು ಸಾವಿರದಿಂದ ಒಂದೂವರೆ ಸಾವಿರ ದೊಡ್ಡ ವ್ಯಾಪಾರಿಗಳು ಎರಡರಿಂದ ಮೂರು ಸಾವಿರ ಆರ್‌ಎಂಸಿ ಶುಲ್ಕವನ್ನು ಎಪಿಎಂಸಿಗೆ ಪಾವತಿಸುತ್ತಿದ್ದೇವೆ ಎಂದು ಚಿಕ್ಕಬಳ್ಳಾಪುರ ಹೂ ಮಾರುಕಟ್ಟೆ ವರ್ತಕರ ಸಂಘದ ಅಧ್ಯಕ್ಷ ರವೀಂದ್ರ ‘ಪ್ರಜಾವಾಣಿ’ಗೆ ತಿಳಿಸಿದರು. ಖಾಸಗಿ ಜಾಗವಾದ ಕಾರಣ ಇಲ್ಲಿ ಮಳಿಗೆ ನಿರ್ಮಾಣ ಸಾಧ್ಯವಿಲ್ಲ. ಆದರೆ ಕನಿಷ್ಠ ಮಟ್ಟದಲ್ಲಿ ನಿರ್ವಹಣೆಯನ್ನಾದರೂ ಮಾಡಬೇಕು. ಮಳೆ ನೀರು ಆವರಣದಲ್ಲಿ ನಿಲ್ಲದೆ ಹೊರಗೆ ಹರಿದು ಹೋಗಲು ವ್ಯವಸ್ಥೆ ಮಾಡಬೇಕು ಎಂದರು. ಕೊಚ್ಚೆ ನೀರು ಮಾರುಕಟ್ಟೆ ಆವರಣದಿಂದ ಹೊರಗೆ ಹೋಗುತ್ತಿಲ್ಲ.  ಸಾವಿರಾರೂ ಬೈಕ್‌ಗಳು ವಾಹನಗಳು ಬರುತ್ತವೆ. ಮತ್ತಷ್ಟು ರಾಡಿಯಾಗುತ್ತದೆ. ದೇವರಿಗೆ ಇಡುವ ಹೂವನ್ನು ಕೊಳಚೆಯಲ್ಲಿ ಇರಿಸುವ ಸ್ಥಿತಿ ಇದೆ ಎಂದು ಬೇಸರ ವ್ಯಕ್ತಪಡಿಸಿದರು.

‘ಸ್ವಲ್ಪ ಜಾರಿದರೂ ಅಪಾಯ’

ಮಾರುಕಟ್ಟೆಯು ‍ಪೂರ್ಣವಾಗಿ ಕೆಸರು ಮಯವಾಗಿದೆ. ಬೈಕ್‌ಗಳಲ್ಲಿ ಬರುವಾಗ ಸ್ವಲ್ಪ ಜಾರಿದರೂ ಅಪಾಯ ಖಚಿತ ಎನ್ನುತ್ತಾರೆ ರೈತ ಮಂಜುನಾಥ್. ನಮ್ಮ ಕಣ್ಣ ಎದುರೇ ಮೂರ್ನಾಲ್ಕು ಮಂದಿ ರೈತರು ಹೂ ತರುವಾಗ ಜಾರಿ ಬಿದ್ದಿದ್ದಾರೆ. ಕೈ ಕಾಲು ಮುರಿದುಕೊಳ್ಳುವ ಸಾಧ್ಯತೆಯೂ ಇದೆ. ಹೊಸ ಹೂ ಮಾರುಕಟ್ಟೆಗೆ ಜಾಗ ಗುರುತಿಸಿದ್ದಾರೆ. ಒಳ್ಳೆಯದೇ. ಆ ಮಾರುಕಟ್ಟೆ ಆಗುವವರೆಗೆ ಇಲ್ಲಿ ವ್ಯವಸ್ಥೆಗಳನ್ನು ಸೂಕ್ತವಾಗಿ ಮಾಡಬೇಕು ಅಲ್ಲವೇ ಎಂದು ಪ್ರಶ್ನಿಸುವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.