ಚಿಕ್ಕಬಳ್ಳಾಪುರ: ಇತ್ತೀಚೆಗೆ ನಿಧನ ಹೊಂದಿದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಸ್ಮರಣಾರ್ಥ ಬಿಜೆಪಿ ಜಿಲ್ಲಾ ಘಟಕದ ವತಿಯಿಂದ ನಗರದಲ್ಲಿ ಇತ್ತೀಚೆಗೆ ‘ಕಾವ್ಯಾಂಜಲಿ’ ಕಾರ್ಯಕ್ರಮ ಆಯೋಜಿಸಲಾಗಿತ್ತು.
ನಗರದ ಭುವನೇಶ್ವರಿ ವೃತ್ತದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕವಯತ್ರಿಯರು, ಕಲಾವಿದರು ವಾಜಪೇಯಿ ಅವರು ರಚಿಸಿದ ಕಾವ್ಯಗಳ ವಾಚನ ಮಾಡಿದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಜಿ.ವಿ.ಮಂಜುನಾಥ್ ಮಾತನಾಡಿ, ‘ದೇಶ ಕಂಡ ಹಿರಿಯ ರಾಜಕೀಯ ಮುತ್ಸದಿ ವಾಜಪೇಯಿ ಅವರ ಅಗಲಿಕೆ ದೇಶಕ್ಕೆ ತುಂಬಲಾರದ ನಷ್ಟ. ಅಂತಹ ಮೇರುಪುರುಷನನ್ನು ಕಳೆದುಕೊಂಡು ದೇಶ ಬಡವಾಗಿದೆ. ಉತ್ತಮ ವಾಗ್ಮಿ, ಕವಿಯಾಗಿದ್ದ ಅಟಲ್‌ಜೀ ಅವರು ತಮ್ಮ ಕವಿತೆಗಳಿಂದಲೇ ಅನೇಕ ಹೃದಯ ಗೆದ್ದಿದ್ದರು’ ಎಂದು ಹೇಳಿದರು.
‘ನಗರ ಹೊರವಲಯದಲ್ಲಿ ನಿರ್ಮಾಣಗೊಂಡಿರುವ ರಾಷ್ಟ್ರೀಯ ಹೆದ್ದಾರಿ 7 ನೋಡಿದಾಗಲೆಲ್ಲ ವಾಜಪೇಯಿ ಅವರ ನೆನಪು ಬರುತ್ತದೆ. ದೇಶದ ಎಲ್ಲ ಮೂಲೆಗಳಿಗೆ ಸಂಕರ್ಪ ಕಲ್ಪಿಸುವಂತೆ ಹೆದ್ದಾರಿ ನಿರ್ಮಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಗ್ರಾಮೀಣಾಭಿವೃದ್ಧಿಗೆ ಒತ್ತು ನೀಡಿದ್ದ ಅವರು, ಹಳ್ಳಿಗಳಿಗೆ ಗುಣಮಟ್ಟದ ರಸ್ತೆಗಳನ್ನು ನಿರ್ಮಿಸಲು ತೋರಿದ ಕಾಳಜಿ ಅವಿಸ್ಮರಣೀಯವಾಗಿದೆ’ ಎಂದು ತಿಳಿಸಿದರು.
ಮಂಡಲ ಅಧ್ಯಕ್ಷ ಅಗಲಗುರ್ಕಿ ಚಂದ್ರಶೇಖರ್ ಮಾತನಾಡಿ, ‘ಯಾರೊಂದಿಗೂ ವೈರತ್ವ ಸಾಧಿಸದೆ ಅಜಾತಶತ್ರು ಎಂದೆ ಖ್ಯಾತರಾಗಿದ್ದ ವಾಜಪೇಯಿ ಅವರು ಎಲ್ಲ ಪಕ್ಷದವರನ್ನು ಒಗ್ಗೂಡಿಸಿಕೊಂಡು ಆಡಳಿತ ನಡೆಸಿದ್ದರು. ಅಂತಹ ರಾಜಕೀಯ ಮೇರು ಪುರುಷನನ್ನು ಮತ್ತೆ ಕಾಣಲು ಸಾಧ್ಯವಿಲ್ಲ. ಅವರಿಗೆ ಅತ್ಯಂತ ಪ್ರೀತಿ ಪಾತ್ರವಾಗಿದ್ದ ಕಾವ್ಯದ ಮೂಲಕವೇ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದು ಹೇಳಿದರು.
ಕಲಾವಿದರಾದ ಬಿ.ವಿ.ಕೃಷ್ಣ, ಶಾಮ ಸುಂದರ್ ಹಾಗೂ ಸೋ.ಸು ನಾಗೇಂದ್ರ ನಾಥ್ ಸೇರಿದಂತೆ ಮಹಿಳಾ ಕವಿಯತ್ರಿಯರು ಅಟಲ್ ಜೀ ಅವರ ರಚನೆಯ ಕಾವ್ಯಗಳನ್ನು ವಾಚಿಸಿದರು. ಎಸ್ಸಿ ಮೋರ್ಚಾದ ಜಿಲ್ಲಾ ಘಟಕದ ಅಧ್ಯಕ್ಷ ಹನುಮಂತಪ್ಪ, ಹಿರಿಯ ಮುಖಂಡರಾದ ಮೈಲ್ಲಪ್ಪನಹಳ್ಳಿ ಕೃಷ್ಣಮೂರ್ತಿ, ಲಕ್ಷ್ಮೀನಾರಾಯಣ ಗುಪ್ತಾ, ಎ.ವಿ.ಬೈರೇಗೌಡ, ಚಿಕ್ಕನಹಳ್ಳಿ ನಾರಾಯಣಸ್ವಾಮಿ, ಲಕ್ಷ್ಮೀಪತಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.