ಬಾಗೇಪಲ್ಲಿ: ಪಟ್ಟಣದ ಮುಖ್ಯರಸ್ತೆ ಹಾಗೂ ಬೀದಿಬೀದಿಗಳಲ್ಲಿ ಎಲ್ಲೆಂದರಲ್ಲಿ ಆಟೋಗಳನ್ನು ನಿಲ್ಲಿಸುವುದರಿಂದ ಸಾರ್ವಜನಿಕ ಓಡಾಟಕ್ಕೆ ಹಾಗೂ ವಾಹನಗಳ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ.
ಎಲ್ಲೆಂದರಲ್ಲಿ ಆಟೋ ನಿಲ್ಲಿಸುವುದು, ಅಡ್ಡಾದಿಡ್ಡಿಯಾಗಿ ಸಂಚರಿಸುವುದು, ಆಟೋಗಳಲ್ಲಿ ಹತ್ತಾರು ಮಂದಿಯನ್ನು ಸಾಗಿಸುವುದು, ಸಮವಸ್ತ್ರ ಧರಿಸದೇ ಇರುವುದು ಸೇರಿದಂತೆ ರಾಜಾರೋಷವಾಗಿ ಸಂಚಾರ ನಿಯಮಗಳನ್ನು ಉಲ್ಲಂಘಿಸಿದರೂ ಸಂಬಂಧಪಟ್ಟ ಪ್ರಾದೇಶಿಕ ಸಾರಿಗೆ ಇಲಾಖೆ ಹಾಗೂ ಪೊಲೀಸ್ ಅಧಿಕಾರಿಗಳು ಜಾಣ ಮೌನ ವಹಿಸಿದ್ದಾರೆ. ಕೂಡಲೇ ಈ ವರ್ತನೆಗೆ ಕಡಿವಾಣ ಹಾಕಬೇಕು ಎಂದು ಇಲ್ಲಿನ ನಾಗರಿಕರು ಒತ್ತಾಯಿಸಿದ್ದಾರೆ.
ಪಟ್ಟಣದಲ್ಲಿರುವ ಒಂದೇ ಒಂದು ವಿಶಾಲ ರಸ್ತೆ ಎಂದರೆ ಅದು ಡಿವಿಜಿ ಮುಖ್ಯರಸ್ತೆ. ಈ 100 ಅಡಿ ಮುಖ್ಯ ರಸ್ತೆಯಲ್ಲಿ ವ್ಯಾಪಾರ ವಹಿವಾಟು ಜೋರಾಗಿದೆ. ಸರ್ಕಾರಿ ಶಾಲಾ–ಕಾಲೇಜುಗಳು, ಕಚೇರಿಗಳು ಇಲ್ಲಿಯೇ ಇವೆ. ತಳ್ಳುವ ಗಾಡಿಗಳಲ್ಲಿ ಹಣ್ಣು, ತರಕಾರಿ, ಹೂವು ವ್ಯಾಪಾರ ಮಾಡುವವರು ಸಾಕಷ್ಟು ಜನರಿದ್ದಾರೆ. ಆದರೆ, ಸರಿಯಾದ ನಿಲ್ದಾಣಗಳ ವ್ಯವಸ್ಥೆ ಇಲ್ಲದ ಕಾರಣ ಆಟೋ, ಟೆಂಪೊ, ಖಾಸಗಿ ಬಸ್ಸುಗಳು ಸೇರಿದಂತೆ ಎಲ್ಲಾ ವಾಹನಗಳನ್ನು ಮುಖ್ಯರಸ್ತೆಯ ಇಕ್ಕೆಲಗಳಲ್ಲಿ ನಿಲುಗಡೆ ಮಾಡಲಾಗುತ್ತದೆ.
ಅದರಲ್ಲೂ ಆಟೋಗಳ ಸಂಚಾರ ಅಶಿಸ್ತು ಮಿತಿಮೀರಿದೆ. ರಸ್ತೆಯುದ್ದಕ್ಕೂ ಎಲ್ಲೆಂದರಲ್ಲಿ ನಿಲ್ಲಿಸುತ್ತಾರೆ. ಅಡ್ಡಾದಿಡ್ಡಿಯಾಗಿ ಚಾಲನೆ ಮಾಡುತ್ತಾರೆ. ಪಾನ್ ಮಸಾಲ, ಗುಟ್ಕಾ ಜಗಿದು ರಸ್ತೆಯ ಮೇಲೆ ಎಲ್ಲೆಂದರಲ್ಲಿ ಉಗಿಯುತ್ತಾರೆ. ಇದರಿಂದ ಹಿಂಬದಿಯ ವಾಹನ ಸವಾರರು ತೊಂದರೆ ಅನುಭವಿಸುವಂತಾಗಿದೆ.
ಪಟ್ಟಣದ ಸಾರಿಗೆ ಬಸ್ ನಿಲ್ದಾಣದ ಮುಂದೆ, ತಾಲ್ಲೂಕು ಕಚೇರಿ, ಪಂಚಾಯಿತಿ, ಡಾ.ಎಚ್.ಎನ್.ವೃತ್ತ, ಕುಂಬಾರಪೇಟೆ, ಆವುಲಮಂದೆ ರಸ್ತೆ ವೃತ್ತ, ಸಂತೇಮೈದಾನದ ರಸ್ತೆಯ ವೃತ್ತಗಳಲ್ಲಿ ಎಲ್ಲೆಂದರಲ್ಲಿ ಅಡ್ಡಾದಿಡ್ಡಿಯಾಗಿ ನಿಂತ ಆಟೋಗಳೇ ಕಾಣುತ್ತವೆ. ಇದರಿಂದ ಪಾದಚಾರಿಗಳು ನಡು ರಸ್ತೆಯಲ್ಲಿ ಸಂಚರಿಸಬೇಕಾಗಿದೆ. ಬೆಳಗ್ಗೆ, ಸಂಜೆ ಸಮಯದಲ್ಲಿ ಶಾಲಾ, ಕಾಲೇಜು ವಿದ್ಯಾರ್ಥಿಗಳು ಓಡಾಡುವುದೂ ಕಷ್ಟವಾಗಿದೆ.
ಇದೆಲ್ಲವನ್ನು ನೋಡಿಯೂ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಹಾಗೂ ಪೊಲೀಸರು ಜಾಣ ಮೌನ ತೋರುತ್ತಿದ್ದಾರೆ.
ಆಟೋಗಳ ಉಪಟಳ ಹೆಚ್ಚಿದೆ. ಏನಾದರೂ ಹೇಳಲು ಹೋದರೆ ಉಡಾಫೆ ಮಾಡುತ್ತಾರೆ. ಇಡೀ ಪಟ್ಟಣವೇ ಆಟೋ ನಿಲ್ದಾಣವಾಗಿ ಮಾರ್ಪಟ್ಟಿದೆ. ವಯೋವೃದ್ಧರು ರಸ್ತೆಯ ಮೇಲೆ ಓಡಾಡುವುದೇ ಕಷ್ಟವಾಗಿದೆ. ಸಂಬಂಧಪಟ್ಟ ಅಧಿಕಾರಿಗಳ ಈ ಬಗ್ಗೆ ಕ್ರಮ ಕೈಗೊಳ್ಳಬೇಕು.ಗಂಗಪ್ಪ, ಸ್ಥಳೀಯ ನಿವಾಸಿ
ಕೆಲ ಆಟೋಗಳ ಚಾಲಕರು ಮನ ಬಂದಂತೆ ವರ್ತಿಸುತ್ತಾರೆ. ಪ್ರಯಾಣಿಕರಿಗಾಗಲೀ, ಸಾರ್ವಜನಿಕರಿಗಾಗಲೀ ರಕ್ಷಣೆಯೇ ಇಲ್ಲದಂತಾಗಿದೆ'ಸೋಮಶೇಖರ್, ಎಸ್‍ಎಫ್‍ಐ ಜಿಲ್ಲಾ ಮುಖಂಡ
ಪಟ್ಟಣದಲ್ಲಿ ಟ್ರಾಫಿಕ್ ಸಮಸ್ಯೆ, ಅಡ್ಡಾದಿಡ್ಡಿ ಚಾಲನೆ, ಎಲ್ಲೆಂದರಲ್ಲಿ ವಾಹನ ನಿಲುಗಡೆ ಸೇರಿದಂತೆ ಅನೇಕ ಸಮಸ್ಯೆಗಳ ಬಗ್ಗೆ ಸೂಕ್ತ ಕ್ರಮ ಜರುಗಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಶಾಂತಿ ಸಭೆಗಳಲ್ಲಿ ತಿಳಿಸಲಾಗುವುದು.ಪೈಪಾಳ್ಯರವಿ ದಲಿತ ಸಂಘರ್ಷ ಸಮಿತಿ ತಾಲ್ಲೂಕು ಸಂಚಾಲಕ
ಪಟ್ಟಣದ ಮುಖ್ಯರಸ್ತೆಯಲ್ಲಿರುವ ಟ್ರಾಫಿಕ್ ಸಮಸ್ಯೆಯನ್ನು ಹಂತ ಹಂತವಾಗಿ ಬಗೆಹರಿಸಲಾಗುವುದು. ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದವರ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು. ಆಟೋಗಳ ಚಾಲಕರು ಸಂಚಾರಿ ನಿಯಮಗಳನ್ನು ಪಾಲನೆ ಮಾಡಬೇಕು. ಇಲ್ಲದಿದ್ದರೆ ಅಂಥವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದುಪ್ರಶಾಂತ್ ವರ್ಣಿ, ಸರ್ಕಲ್ ಇನ್‌ಸ್ಪೆಕ್ಟರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.