ಶಿಡ್ಲಘಟ್ಟ: ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಬುಧವಾರ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾಗಿರುವ ಆಯುಷ್ಮಾನ್ ಭವ ಅಭಿಯಾನಕ್ಕೆ ಶಾಸಕ ಬಿ.ಎನ್. ರವಿಕುಮಾರ್ ಉದ್ಘಾಟನೆ ನೆರವೇರಿಸಿದರು.
ಈ ವೇಳೆ ಅವರು ಮಾತನಾಡಿ, ‘ಆಯುಷ್ಮಾನ್ ಭವ ಅಭಿಯಾನವು ಕೇಂದ್ರ ಸರ್ಕಾರದ ಎಲ್ಲ ಆರೋಗ್ಯ ಯೋಜನೆಗಳ ಸಮಗ್ರ ಗುಚ್ಚವಾಗಿದೆ. ಸೆ. 17ರಂದು ಪ್ರಧಾನಿ ನರೇಂದ್ರ ಮೋದಿ ಜನ್ಮ ದಿನದ ಅಂಗವಾಗಿ ಆರಂಭವಾಗುವ 15 ದಿನಗಳ ಸೇವಾ ಪಾಕ್ಷಿಕ ಕಾರ್ಯಕ್ರಮವು ಅಕ್ಟೋಬರ್ ಎರಡರಂದು ಮುಕ್ತಾಯವಾಗಲಿದೆ. ಈ ಅವಧಿಯಲ್ಲಿ ಆರೋಗ್ಯ ಸೇವೆಗಳು, ವಿವಿಧ ಆರೋಗ್ಯ ಯೋಜನೆಗಳ ಮಾಹಿತಿ ಹಾಗೂ ಆರೋಗ್ಯ ಜಾಗೃತಿ ಶಿಬಿರಗಳು ನಡೆಯಲಿವೆ. ಇದರ ಉಪಯೋಗ ಕ್ಷೇತ್ರದ ಜನಸಾಮಾನ್ಯರಿಗೆ ಸಿಗಬೇಕು’ ಎಂದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ ಮಾತನಾಡಿ, ‘ಈ ಅಭಿಯಾನದಡಿ ಫಲಾನುಭವಿಗಳ ಪ್ರತಿ ಮನೆಗೆ ಆಯುಷ್ಮಾನ್ ಕಾರ್ಡ್ ವಿತರಿಸಲಾಗುವುದು. ಜೊತೆಗೆ ಒಂದು ವಾರದ ಮಟ್ಟಿಗೆ ಆಯುಷ್ಮಾನ್ ಮೇಳವೂ ನಡೆಯಲಿದೆ. ಅಲ್ಲದೆ, ಗ್ರಾಮ ಹಾಗೂ ನಗರ ಪ್ರದೇಶಗಳ ವಾರ್ಡ್‌ಗಳ ಮಟ್ಟದಲ್ಲಿ ಆಯುಷ್ಮಾನ್ ಸಭಾ ಆಯೋಜನೆಗೆ ತೀರ್ಮಾನಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ವಿವಿಧ ಆರೋಗ್ಯ ಯೋಜನೆಗಳು ಹಾಗೂ ಸೇವೆಗಳ ಕುರಿತಾಗಿ ಜನರಿಗೆ ಜಾಗೃತಿ ಮೂಡಿಸಲಾಗುವುದು’ ಎಂದು ವಿವರಿಸಿದರು.
ನಗರಸಭೆಯ ಅಧ್ಯಕ್ಷೆ ಸುಮಿತ್ರ ರಮೇಶ್, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಬಂಕ್ ಮುನಿಯಪ್ಪ, ತಾದೂರು ರಘು, ನಗರಸಭೆ ಸದಸ್ಯರಾದ ಅನಿಲ್ ಕುಮಾರ್, ಮಂಜುನಾಥ್, ಮನೋಹರ್, ಮೇಲೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಆರ್.ಎ. ಉಮೇಶ್, ಜಿಲ್ಲಾ ಕುಟುಂಬ ಮತ್ತು ಕಲ್ಯಾಣ ಅಧಿಕಾರಿ ಚಂದ್ರಶೇಖರ್, ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ವಾಣಿ, ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಸುಬ್ಬಾರೆಡ್ಡಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನವತಾಜ್, ಬಿಸಿಎಂ ಅಧಿಕಾರಿ ಪಾಟೀಲ್, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಜಗದೀಶ್, ಶಿಕ್ಷಣ ಇಲಾಖೆಯ ಮಂಜುನಾಥ್, ಆರೋಗ್ಯ ಇಲಾಖೆಯ ವೈದ್ಯಾಧಿಕಾರಿಗಳು, ಸಿಬ್ಬಂದಿ, ಎನ್‌ಜಿಒ ಪ್ರತಿನಿಧಿಗಳು, ಆಶಾ ಕಾರ್ಯಕರ್ತೆಯರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.