ಚಿಂತಾಮಣಿ: ತಾಲ್ಲೂಕಿನ ನಂದಿಗಾನಹಳ್ಳಿಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಹಾಗೂ ಶ್ರೀವಾತ್ಸಲ್ಯ ಜ್ಞಾನ ವಿಕಾಸ ಕೇಂದ್ರದಿಂದ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಂಘದ ಸದಸ್ಯರಿಗೆ ಹಾಗೂ ಗ್ರಾಮಸ್ಥರಿಗೆ ಉಚಿತವಾಗಿ ಆಯುಷ್ಮಾನ್ ಕಾರ್ಡ್ ವಿತರಿಸಲಾಯಿತು.
ಸಂಸ್ಥೆಯ ಜಿಲ್ಲಾ ಸಂಚಾಲಕ ಬಿ. ವಸಂತ್ ಮಾತನಾಡಿ, ಗ್ರಾಮದಲ್ಲಿ 1,300 ಆಯುಷ್ಮಾನ್ ಕಾರ್ಡ್ ವಿತರಣೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ತಾಲ್ಲೂಕಿನ ಪ್ರತಿ ಗ್ರಾಮದಲ್ಲೂ ಇಂತಹ ಸಭೆ ನಡೆಸಿ ಸಂಘದ ಸದಸ್ಯರು ಸೇರಿದಂತೆ ಗ್ರಾಮಸ್ಥರಿಗೂ ಆಯುಷ್ಮಾನ್ ಕಾರ್ಡ್ಗಳನ್ನು ವಿತರಿಸಲಾಗುವುದು ಎಂದರು.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಯಾಸ್ಮಿನ್ ತಾಜ್ ಮಾತನಾಡಿ, ಸರ್ಕಾರಿ ಸೌಲಭ್ಯಗಳನ್ನು ಫಲಾನುಭವಿಗಳ ಮನೆ ಬಾಗಿಲಿಗೆ ತಲುಪಿಸುವುದು ಸರ್ಕಾರದ ಅಧಿಕಾರಿಗಳ ಮತ್ತು ನೌಕರರ ಜವಾಬ್ದಾರಿಯಾಗಿದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯು ಸರ್ಕಾರದ ಜತೆ ಕೈಜೋಡಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದು ಶ್ಲಾಘಿಸಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲ್ಲೂಕು ಯೋಜನಾಧಿಕಾರಿ ಶಾರಿಕಾ ಮಾತನಾಡಿದರು.
ಮೈಕ್ರೋ ರೀಜನಲ್ ಅಧಿಕಾರಿ ರವೀಂದ್ರ, ಸಮನ್ವಯಾಧಿಕಾರಿ ಉಷಾರಾಣಿ, ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ವೀರಪ್ಪರೆಡ್ಡಿ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಸರಸ್ವತಮ್ಮ, ಮೇಲ್ವಿಚಾರಕ ಮುನಿಕೃಷ್ಣ, ಸೇವಾ ಪ್ರತಿನಿಧಿ ಸೌಭಾಗ್ಯಾ, ವಲಯದ ಎಲ್ಲ ಸೇವಾ ಪ್ರತಿನಿಧಿಗಳು ಹಾಗೂ ಮಹಿಳೆಯರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.