ADVERTISEMENT

ಚಿಂತಾಮಣಿ | ಕಸದ ರಾಶಿಯಲ್ಲಿ ಬಾಬು ಜಗಜೀವನ್ ರಾಂ ಚಿತ್ರ ಪತ್ತೆ; ಪ್ರತಿಭಟನೆ

ಘಟನೆ ಖಂಡಿಸಿ ದಲಿತಪರ ಸಂಘಟನೆಗಳ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2024, 13:00 IST
Last Updated 21 ನವೆಂಬರ್ 2024, 13:00 IST
ಚಿಂತಾಮಣಿಯ ಸರ್ಕಾರಿ ಬಾಲಕರ ಕಾಲೇಜು ಆವರಣದ ಬಾಬು ಜಗಜೀವನರಾಂ ಅವರ ಭಾವಚಿತ್ರಕ್ಕೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿ ದಲಿತಪರ ಸಂಘಟನೆಗಳ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು
ಚಿಂತಾಮಣಿಯ ಸರ್ಕಾರಿ ಬಾಲಕರ ಕಾಲೇಜು ಆವರಣದ ಬಾಬು ಜಗಜೀವನರಾಂ ಅವರ ಭಾವಚಿತ್ರಕ್ಕೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿ ದಲಿತಪರ ಸಂಘಟನೆಗಳ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು   

ಚಿಂತಾಮಣಿ: ನಗರದ ಬಾಲಕರ ಸರ್ಕಾರಿ ಪಿಯು ಕಾಲೇಜು ಆವರಣದ ಶೌಚಾಲಯಗಳ ಪಕ್ಕದ ಕಸದ ರಾಶಿಯಲ್ಲಿ ಮಾಜಿ ಪ್ರಧಾನಿ ಬಾಬು ಜಗಜೀವನ ರಾಂ ಅವರ ಭಾವಚಿತ್ರ ಬಿಸಾಡಿ ಅವಮಾನ ಮಾಡಲಾಗಿದೆ ಎಂದು ಆರೋಪಿಸಿ ದಲಿತಪರ ಸಂಘಟನೆಗಳ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು. 

ಕಾಲೇಜು ಪ್ರಾಂಶುಪಾಲರ ವಿರುದ್ಧ ಧಿಕ್ಕಾರಗಳನ್ನು ಕೂಗಿದ ಪ್ರತಿಭಟನಕಾರರು, ‘ಜಗಜೀವನ ರಾಂ ಅವರ ಭಾವಚಿತ್ರವನ್ನು ಕಸದಲ್ಲಿ ಬಿಸಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು. 

ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ನಗರ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ವಿಜಿಕುಮಾರ್, ಪ್ರತಿಭಟನಕಾರರೊಂದಿಗೆ ಮಾತುಕತೆ ನಡೆಸಿದರು. ಜೊತೆಗೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಆದರೆ, ಇದಕ್ಕೆ ಬಗ್ಗದ ಪ್ರತಿಭಟನಕಾರರು, ಶಿಕ್ಷಣ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬರಬೇಕು ಎಂದು ಪಟ್ಟು ಹಿಡಿದರು. 

ADVERTISEMENT

ಅದರಂತೆ ಸ್ಥಳಕ್ಕೆ ಬಂದ ಕ್ಷೇತ್ರ ಶಿಕ್ಷಣಾಧಿಕಾರಿ ವಿ. ಉಮಾದೇವಿ ಪ್ರತಿಭಟನಕಾರರೊಂದಿಗೆ ಚರ್ಚೆ ಮಾಡಿದರು. ಜೊತೆಗೆ ಪಿಯು ಕಾಲೇಜು ತಮ್ಮ ವ್ಯಾಪ್ತಿಗೆ ಬರುವುದಿಲ್ಲ. ಆದಾಗ್ಯೂ, ತಹಶೀಲ್ದಾರ್ ಸೂಚನೆಯಂತೆ ತನಿಖೆ ನಡೆಸಲಾಗುವುದು ಎಂದು ಭರವಸೆ ನೀಡಿದರು. ಆಗ ಪ್ರತಿಭಟನಕಾರರು ತಮ್ಮ ಪ್ರತಿಭಟನೆಯನ್ನು ಹಿಂಪಡೆದರು. 

ಭಾವಚಿತ್ರವನ್ನು ಯಾರು ತಂದು ಕಸದಲ್ಲಿ ಬಿಸಾಡಿದ್ದಾರೆ ಎಂಬುದು ಗೊತ್ತಿಲ್ಲ. ಮೂರು ದಿನಗಳ ಹಿಂದೆ ಕಾಲೇಜು ಸ್ವಚ್ಛಗೊಳಿಸಿದಾಗ ಭಾವಚಿತ್ರ ಇಲ್ಲದೆ ಇರುವುದು ಕಂಡುಬಂದಿತ್ತು ಎಂದು ಕಾಲೇಜು ಸಿಬ್ಬಂದಿ ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.