ಚಿಕ್ಕಬಳ್ಳಾಪುರ: ‘ನನ್ನ ವಿರುದ್ಧ ಎಷ್ಟೇ ದೂರು ಕೊಡಲಿ. ಬಚ್ಚೇಗೌಡನನ್ನು ಯಾರೂ ಏನೂ ಮಾಡಲು ಆಗುವುದಿಲ್ಲ. ಯಾರು ಏನು ಕ್ರಮ ತೆಗೆದುಕೊಳ್ಳುತ್ತಾರೋ ನಾನು ನೋಡುತ್ತೇನೆ’ ಎಂದು ಸಂಸದ ಬಿ.ಎನ್.ಬಚ್ಚೇಗೌಡ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತ, ಮಾಜಿ ಶಾಸಕ ಎಂಟಿಬಿ ನಾಗರಾಜ್ ಅವರ ವಿರುದ್ಧ ವಾಗ್ದಾಳಿ ನಡೆಸಿದರು.
‘ಬಚ್ಚೇಗೌಡನ ಮೇಲೆ ಪದೇ ಪದೇ ದೂರು ಕೊಡುತ್ತಿದ್ದಾರೆ. ಏನಾದರೂ ದೂರು ಕೊಡಲಿ, ಅದಕ್ಕೆಲ್ಲ ನಾ ಹೆದರುವುದಿಲ್ಲ. ನಾನೇನು ರಾಜಕಾರಣಕ್ಕೆ ಹೊಸಬನಲ್ಲ. ಇಂತಹ ದೂರುಗಳನ್ನೆಲ್ಲ ನಾನು ಲೆಕ್ಕಕ್ಕೆ ಇಡುವುದಿಲ್ಲ. ಅವನದು ಏನೇ ಇದ್ದರೂ ಮನೆಯಲ್ಲಿ ಜೇಬಿನಲ್ಲಿ ಇಟ್ಟುಕೊಳ್ಳಲಿ’ ಎಂದು ತಿಳಿಸಿದರು.
‘ನನ್ನ ವಿರುದ್ಧ ಕ್ರಮ ತೆಗೆದುಕೊಳ್ಳುವುದಾದರೆ ತೆಗೆದುಕೊಳ್ಳಲಿ. ನನ್ನನ್ನು ಸಂಸದ ಸ್ಥಾನದಿಂದ ಉಚ್ಛಾಟಿಸಲು ಆಗುವುದಿಲ್ಲ. ಹೀಗಾಗಿ ಆ ಸ್ಥಾನ ಹೋಗುವುದಿಲ್ಲ. ಪಕ್ಷದಿಂದ ಒಬ್ಬರಿಗೆ ನಷ್ಟವಾಗಬಹುದಷ್ಟೇ, ಅದನ್ನೆಲ್ಲ ನಾನು ಲೆಕ್ಕಕ್ಕೆ ಇಟ್ಟಿಲ್ಲ. ಯಾರು ಏನು ಮಾಡುತ್ತಾರೋ ನೋಡೋಣ. ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬ ಗಾದೆಯಂತೆ ಕೆಲವರು ಚುನಾವಣೆಯಲ್ಲಿ ಸೋತ ಬಳಿಕ ಮತದಾರರ ಬಗ್ಗೆ ಮಾತನಾಡುತ್ತಿದ್ದಾರೆ. ಯಾರೇ ಆಗಲಿ ಆ ರೀತಿ ಮಾತನಾಡಬಾರದು’ ಎಂದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ರಾಜಾ ಇಲಿ ಎಂದ ಕೆಪಿಸಿಸಿ ವಕ್ತಾರ ವಿ.ಎಸ್.ಉಗ್ರಪ್ಪ ಅವರ ಟೀಕೆ ಕುರಿತಂತೆ, ‘ಕೆಲವರ ಮಾತು ಅವರ ಯೋಗ್ಯತೆ ತೋರಿಸುತ್ತದೆ. ರಾಜಕೀಯದಲ್ಲಿ ಇನ್ನೊಬ್ಬರ ಬಗ್ಗೆ ಮಾತನಾಡುವಾಗ ಹೀಯಾಳಿಸಬಾರದು. ಗೌರವವಾಗಿ ಕಾಣಬೇಕು. ಇವತ್ತು ರಾಜಕಾರಣ ಗೌರವದಿಂದ ನಡೆಯುತ್ತಿಲ್ಲ. ಬರೀ ಸಂಘರ್ಷದ ರೀತಿ ನಡೆದುಕೊಂಡು ಹೋಗುತ್ತಿದೆ. ಇದನ್ನು ನಾನು ಒಪ್ಪುವುದಿಲ್ಲ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.