ADVERTISEMENT

ಬಾಗೇಪಲ್ಲಿ: ತೀರುವುದೇ ನೀರಿನ ಹಾಹಾಕಾರ

ನೂತನ ಸಂಸದ ಡಾ.ಕೆ.ಸುಧಾಕರ್ ಅವರಿಗೆ ತಾಲ್ಲೂಕಿನ ಜನರ ಮನವಿ

ಪಿ.ಎಸ್.ರಾಜೇಶ್
Published 12 ಜೂನ್ 2024, 5:06 IST
Last Updated 12 ಜೂನ್ 2024, 5:06 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಬಾಗೇಪಲ್ಲಿ: ಕೃಷ್ಣಾ ನದಿಯಿಂದ ಬಾಗೇಪಲ್ಲಿಗೆ ನೀರು ಹರಿಸುತ್ತೇನೆ, ಕೈಗಾರಿಕೆ ‌ತರಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ– ಚುನಾವಣೆ ಸಂದರ್ಭದಲ್ಲಿ ಬಾಗೇಪಲ್ಲಿಯ ಜನರಿಗೆ ಡಾ.ಕೆ.ಸುಧಾಕರ್ ಅವರು ನೀಡಿದ್ದ ಭರವಸೆ ಇದು. ಈಗ ಅವರೇ ಸಂಸದರು. ತಾಲ್ಲೂಕಿನ ಜನರು ನೀರಿನ ವಿಚಾರವಾಗಿ ತೀವ್ರ ಕಾತರರಾಗಿದ್ದಾರೆ. 

ರಾಜಧಾನಿ ಬೆಂಗಳೂರಿಗೆ 100 ಕಿಲೋಮೀಟರ್ ದೂರ ಇರುವ ಹಾಗೂ ರಾಷ್ಟ್ರೀಯ ಹೆದ್ದಾರಿ ರಸ್ತೆ 44 ಹಾದು ಹೋಗುವ ಬಾಗೇಪಲ್ಲಿ ರಾಜ್ಯದ ಗಡಿ ತಾಲ್ಲೂಕು. ಈ ವಿಧಾನಸಭಾ ಕ್ಷೇತ್ರ ಬಾಗೇಪಲ್ಲಿ, ಗುಡಿಬಂಡೆ, ಚೇಳೂರು ತಾಲ್ಲೂಕು ಒಳಗೊಂಡಿದೆ.

ADVERTISEMENT

ಡಿ.ಎಂ.ನಂಜುಂಡಪ್ಪ ವರದಿ ಪ್ರಕಾರ ಬಾಗೇಪಲ್ಲಿ, ಅತಿ ಹಿಂದುಳಿದ ತಾಲ್ಲೂಕು. ಯಾವುದೇ ನದಿ ನಾಲೆಗಳು ಇಲ್ಲ. ಕೇವಲ ಮಳೆ ಆಧಾರಿತ ಪ್ರದೇಶ ಹೊಂದಿದೆ. ಮುಂಗಾರು, ಹಿಂಗಾರು ಮಳೆ ಕೈಕೊಟ್ಟಿದ್ದರಿಂದ ಜನ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ತಾತ್ಸಾರ ಉಂಟಾಗಿದೆ. ಕೊಳವೆಬಾವಿ, ತೆರೆದಬಾವಿಗಳ ಬಳಕೆಯಿಂದ ಕೃಷಿ, ತರಕಾರಿ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಕೃಷಿ ಬಳಕೆಗೆ ಶಾಶ್ವತವಾಗಿ ನೀರು ಸಿಗದೇ, ಹೊಲ-ಗದ್ದೆಗಳು ಬೀಳು ಬಿಟ್ಟಿದ್ದಾರೆ. 

ಕ್ಷೇತ್ರದ ಪಕ್ಕದ ಸತ್ಯಸಾಯಿ ಜಿಲ್ಲೆಯ ಹಿಂದೂಪೂರ ತಾಲ್ಲೂಕಿನ ಗಡಿಯ ಚಿಲಮತ್ತೂರು, ಲೇಪಾಕ್ಷಿ, ಕದಿರಿ ಜಿಲ್ಲೆಗಳಲ್ಲಿನ ಗ್ರಾಮಗಳಿಗೆ ಕೃಷ್ಣಾನದಿಯಿಂದ ಕಾಲುವೆಯ ಮೂಲಕ ನೀರು ಹರಿಸಲಾಗಿದೆ. ಬೃಹತ್ ಅಣೆಕಟ್ಟುಗಳನ್ನು ನಿರ್ಮಿಸಿ, ನೀರನ್ನು ಹಿಡಿದಿಟ್ಟುಕೊಳ್ಳುವ ಯೋಜನೆಗಳನ್ನು ಜಾರಿ ಮಾಡಲಾಗಿದೆ. ಕೃಷ್ಣಾ ನದಿಯ ಬಿ ಸ್ಕಿಂ ಪ್ರಕಾರ ಬಚಾವತ್ ಆಯೋಗದ ವರದಿಯಿಂತೆ ಕ್ಷೇತ್ರಕ್ಕೆ ಸಹ ಕೃಷ್ಣಾ ನದಿಯಲ್ಲಿ ನೀರಿನ ಪಾಲು ಇದೆ.

ರಾಜ್ಯದ ಗಡಿಯಲ್ಲಿ ಹರಿಯುವ ನೀರು, ಕ್ಷೇತ್ರಕ್ಕೆ ಹರಿಸುವ ಯೋಜನೆಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕ್ರಮ ತೆಗೆದುಕೊಂಡಿಲ್ಲ.  

ಪಕ್ಕದ ಆಂಧ್ರಪ್ರದೇಶದ ಗಡಿಯಲ್ಲಿ ಬೃಹತ್ ಕೈಗಾರಿಕೆಗಳು ಇವೆ. ಆದರೆ ಬಾಗೇಪಲ್ಲಿಯಲ್ಲಿ ಯಾವುದೇ ಕೈಗಾರಿಕೆಗಳು ಇಲ್ಲ. ಕೈಗಾರಿಕೀಕರಣಕ್ಕೆ 1,200 ಎಕರೆ ಪ್ರದೇಶ ಗುರುತಿಸಲಾಗಿದೆ. ಆದರೆ ರೈತರ ಜಮೀನುಗಳಿಗೆ ಸರ್ಕಾರಗಳು ಪರಿಹಾರ ನೀಡದೇ ಇರುವುದರಿಂದ ಕೈಗಾರಿಕೆಗಳು ಆರಂಭ ಆಗಿಲ್ಲ.

ಆಂಧ್ರಪ್ರದೇಶದಲ್ಲಿ ಎನ್‍ಡಿಎ ಮೈತ್ರಿಯಾಗಿರುವ ತೆಲುಗುದೇಶಂ ಅಧಿಕಾರ ಹಿಡಿದಿದೆ. ಈ ಕಾರಣದಿಂದ ನೀರಾವರಿ ವಿಚಾರವು ಮತ್ತೆ ತಾಲ್ಲೂಕಿನಲ್ಲಿ ಗರಿಗೆದರಿದೆ. ಹೀಗೆ ನೀರಾವರಿ ಸಮಸ್ಯೆ ಪರಿಹರಿಸಬೇಕು ಮತ್ತು ಕೈಗಾರಿಕೆಗಳನ್ನು ಸ್ಥಾಪಿಸಬೇಕು ಎನ್ನುವುದು ಬಯಲು ಸೀಮೆಯ ಬಾಗೇಪಲ್ಲಿ ಜನರ ಒತ್ತಾಯವಾಗಿದೆ. 

ಶಾಶ್ವತ ನೀರಾವರಿ, ಕೈಗಾರಿಕೆಗಳ ಸ್ಥಾಪನೆಗೆ ಎಚ್.ಡಿ.ದೇವೇಗೌಡ, ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಪತ್ರ ಬರೆಯಲಾಗುವುದು.
ಬಿ.ಆರ್.ನರಸಿಂಹನಾಯ್ಡು, ಜೆಡಿಎಸ್ ರಾಜ್ಯ ಕಾರ್ಯದರ್ಶಿ

ಆಂಧ್ರ ಸರ್ಕಾರಕ್ಕೆ ಪತ್ರ ಬರೆಯಲು ಮನವಿ

ಶಾಶ್ವತ ನೀರಾವರಿ ಕಲ್ಪಿಸಿಯೇ ಮುಂದಿನ ಚುನಾವಣೆಯಲ್ಲಿ ಮತ ಯಾಚಿಸುತ್ತೇನೆ. ಎತ್ತಿನಹೊಳೆ ಯೋಜನೆ  ಕಾಮಗಾರಿ ಪೂರ್ಣಗೊಳಿಸಿ ನೀರು ಸರಬರಾಜು ಮಾಡಬೇಕು.  ಕೃಷ್ಣಾ ನದಿಯ ನಮ್ಮ ಪಾಲಿಗೆ ಬರುವ ನೀರನ್ನು ಕಾಲುವೆಯ ಮೂಲಕ ಹರಿಸಲು ಆಂಧ್ರಪ್ರದೇಶದ ಸರ್ಕಾರಕ್ಕೆ ಪತ್ರ ಬರೆಯುವಂತೆ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಮನವಿ ಮಾಡುತ್ತೇನೆ– ಎಸ್.ಎನ್.ಸುಬ್ಬಾರೆಡ್ಡಿ, ಶಾಸಕ, ಬಾಗೇಪಲ್ಲಿ

ಕೈಗಾರಿಕೆ ಆರಂಭಿಸಿ

ಶಾಶ್ವತ ನೀರಾವರಿ ಯೋಜನೆ ಹಾಗೂ ಕೈಗಾರಿಕಾ ಸ್ಥಾಪನೆಯ ಯಾವ ಜನಪ್ರತಿನಿಧಿಯೂ ಗಮನ ಹರಿಸಿಲ್ಲ. ಕೇಂದ್ರ ಸರ್ಕಾರ ಎರಡೂ ರಾಜ್ಯಗಳ ಜೊತೆ ಚರ್ಚಿಸಿ ಕೃಷ್ಣಾ ನದಿಯ ನೀರನ್ನು ಕ್ಷೇತ್ರಕ್ಕೆ ಹರಿಯುವಂತೆ ಮಾಡಲು ಯೋಜನೆ ರೂಪಿಸಬೇಕು. ಕೈಗಾರಿಕೆಗಳನ್ನು ಆರಂಭಿಸಬೇಕು – ಎಂ.ಪಿ.ಮುನಿವೆಂಕಟಪ್ಪ, ಸಿಪಿಎಂ ಜಿಲ್ಲಾ ಕಾರ್ಯದರ್ಶಿ

ನನ್ನ ಆಯ್ಕೆ ಮಾಡಿದರೆ ಕೃಷ್ಣಾ ನದಿಯ ನೀರನ್ನು ಹರಿಸುತ್ತೇನೆ ಎಂದು ಕ್ಷೇತ್ರದ ಮತದಾರರಿಗೆ ಸುಧಾಕರ್ ಭರವಸೆ ನೀಡಿದ್ದಾರೆ.
ರಾಮಲಿಂಗಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ
ನೂನತ ಸಂಸದ ಡಾ.ಕೆ.ಸುಧಾಕರ್ ಭರವಸೆ ಈಡೇರಿಸುವ ನಿರೀಕ್ಷೆ ಇದೆ.
ಜಿ.ಎಂ.ರಾಮಕೃಷ್ಣಪ್ಪ, ಶಾಶ್ವತ ನೀರಾವರಿ ಹೋರಾಟಗಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.