ADVERTISEMENT

ಬಾಗೇಪಲ್ಲಿ: ಅನೈತಿಕ ಚಟುವಟಿಕೆ ತಾಣವಾದ ತಹಶೀಲ್ದಾರ್ ವಸತಿ ಗೃಹ

ಪಿ.ಎಸ್.ರಾಜೇಶ್
Published 18 ಮಾರ್ಚ್ 2024, 6:47 IST
Last Updated 18 ಮಾರ್ಚ್ 2024, 6:47 IST
ಬಾಗೇಪಲ್ಲಿ ಪಟ್ಟಣದ ಡಿವಿಜಿ ಮುಖ್ಯರಸ್ತೆಯ ಪಕ್ಕದಲ್ಲಿ ಬ್ರಿಟಿಷರು ನಿರ್ಮಿಸಿದ ಕಟ್ಟಡ
ಬಾಗೇಪಲ್ಲಿ ಪಟ್ಟಣದ ಡಿವಿಜಿ ಮುಖ್ಯರಸ್ತೆಯ ಪಕ್ಕದಲ್ಲಿ ಬ್ರಿಟಿಷರು ನಿರ್ಮಿಸಿದ ಕಟ್ಟಡ    

ಬಾಗೇಪಲ್ಲಿ: ಪಟ್ಟಣದ ಡಿವಿಜಿ ಮುಖ್ಯರಸ್ತೆಯ ಪಕ್ಕದಲ್ಲಿ ಬ್ರಿಟಿಷರು ಕಟ್ಟಿಸಿದ ಕಟ್ಟಡದ ತಹಶೀಲ್ದಾರ್ ವಸತಿ ಗೃಹ ಇದೀಗ ಅಧಿಕಾರಿಗಳ ವಾಸಕ್ಕೆ ಯೋಗ್ಯವಿಲ್ಲದೆ ನೈತಿಕ ಚಟುವಟಿಕೆಯ ತಾಣವಾಗಿ ಪರಿಣಮಿಸಿದೆ.

ಹೈದರಾಬಾದ್-ಚೆನ್ನೈ ನಡುವಿನ ಮಾರ್ಗ ಮಧ್ಯದ ಪಟ್ಟಣದ ಮುಖ್ಯರಸ್ತೆಯ ಪಕ್ಕದಲ್ಲಿ ಬ್ರಿಟಿಷರು ವಾಸ್ತವ್ಯ ಮಾಡಲು 3 ಕಟ್ಟಡ ನಿರ್ಮಿಸಿದ್ದಾರೆ. ಪಟ್ಟಣದ ಹೊರವಲಯದಲ್ಲಿನ ಪ್ರವಾಸಿ ಮಂದಿರದ ಕಟ್ಟಡ, ತಹಶೀಲ್ದಾರ್ ವಸತಿ ಗೃಹ ಕಟ್ಟಡ ಹಾಗೂ ಈಗಿನ ಬಾಲಕಿಯರ ಸರ್ಕಾರಿ ಶಾಲಾವರಣದಲ್ಲಿ 3 ಕಟ್ಟಡ ನಿರ್ಮಿಸಿದ್ದಾರೆ. ಕಟ್ಟಡಗಳ ಮುಂದೆ ಸೈನಿಕರು ತಂಗಲು ಹಾಗೂ ಕುದುರೆಗಳನ್ನು ಕಟ್ಟಿಹಾಕಲು ವಿಶಾಲವಾದ ಜಾಗ ಮಾಡಿದ್ದಾರೆ. ಅನೇಕ ವರ್ಷಗಳ ಹಿಂದೆ ಬ್ರಿಟಿಷರು ನಿರ್ಮಿಸಿದ ಕಟ್ಟಡಗಳು ಇಂದಿಗೂ ನೋಡುಗರ ಕಣ್ಮನ ಸೆಳೆಯುವಂತೆ ಆಗಿವೆ.

ಬ್ರಿಟಿಷರು ನಿರ್ಮಿಸಿದ ಕಟ್ಟಡಗಳ ಪೈಕಿ ಪಟ್ಟಣದ ಹೊರವಲಯದ ಪ್ರವಾಸಿ ಮಂದಿರದ ಬಳಿ, ಈಗಿನ ತಹಶೀಲ್ದಾರ್ ವಸತಿ ಗೃಹದ ಕಟ್ಟಡ ಮಾತ್ರ ಉಳಿದಿದೆ. ಸರ್ಕಾರಿ ಶಾಲಾವರಣದಲ್ಲಿದ್ದ ಕಟ್ಟಡ ಶಿಥಿಲಾವಸ್ಥೆಯಲ್ಲಿದ್ದು ಸಿಮೆಂಟ್, ಹೆಂಚುಗಳು ಉದುರಿದ ಪರಿಣಾಮ ಇದೀಗ ನೂತನ ಶಾಲಾ ಕಟ್ಟಡ ನಿರ್ಮಿಸಲಾಗಿದೆ.

ADVERTISEMENT

ಪಟ್ಟಣದ ಮುಖ್ಯರಸ್ತೆಯ ಪಕ್ಕದಲ್ಲಿ 45 ವರ್ಷಗಳಿಂದ ಬ್ರಿಟಿಷರು ನಿರ್ಮಿಸಿದ ಕಟ್ಟಡದಲ್ಲಿ ತಹಶೀಲ್ದಾರ್ ವಸತಿ ಗೃಹವಾಗಿ ಮಾಡಲಾಗಿತ್ತು. ಆದರೆ ಕಟ್ಟಡ ಶಿಥಿಲಾವಸ್ಥೆಯಲ್ಲಿದೆ. ಈ ಹಿಂದಿನ ತಹಶೀಲ್ದಾರ್ ಕಟ್ಟಡವನ್ನು ಸಮರ್ಪಕವಾಗಿ ನಿರ್ಮಿಸುವಂತೆ ಲೋಕೊಪಯೋಗಿ ಇಲಾಖೆಗೆ ಪತ್ರ ಬರೆದಿದ್ದಾರೆ.

ತಹಶೀಲ್ದಾರ್ ಪ್ರಶಾಂತ್ ಕೆ.ಪಾಟೀಲ್ ಅವರು ವಸತಿ ಗೃಹದಲ್ಲಿ ವಾಸ್ತವ್ಯ ಮಾಡಲು ಆಗಿಲ್ಲ. ತಾಲ್ಲೂಕು ಕೇಂದ್ರಸ್ಥಾನದಲ್ಲಿ ಅಧಿಕಾರಿಗೆ ಸರ್ಕಾರಿ ಬಂಗಲೆ ಇಲ್ಲ.

ಮೊದಲಿಗೆ ವಸತಿ ಗೃಹದ ಮುಖ್ಯದ್ವಾರದ ಗೇಟಿಗೆ ಬೀಗ ಹಾಕಿದ್ದರು. ವಸತಿ ಗೃಹದ ಮುಂದೆ ಇಂದಿರಾ ಕ್ಯಾಂಟಿನ್ ಕಟ್ಟಡ ನಿರ್ಮಾಣ ಕಾರ್ಯ ನಡೆಯುತ್ತಿದೆ. ಇದೀಗ ಗೇಟ್‌ ಇಲ್ಲದಿರುವುದರಿಂದ ಮದ್ಯದ ಬಾಟಲಿ, ಬೀಡಿ, ಸಿಗರೇಟು ತುಂಡುಗಳು, ನೀರಿನ ಬಾಟಲಿಗಳು ಸೇರಿದಂತೆ ವಿವಿಧ ವಸ್ತುಗಳು ಚೆಲ್ಲಾಪಿಲ್ಲೆಯಾಗಿ ಬೀಸಾಡಿದ್ದಾರೆ.

ವಸತಿ ಗೃಹ ಇಲ್ಲದಿರುವುದರಿಂದ ತಾಲ್ಲೂಕಿನ ಬಹುತೇಕ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ಇಲ್ಲ ಎಂದು ರೈತ ಮುಖಂಡ ಗೋವಿಂದರೆಡ್ಡಿ ತಿಳಿಸಿದರು. ಬ್ರಿಟಿಷರು ವಾಸ್ತುಶಿಲ್ಪದಂತೆ ಕಟ್ಟಡ ನಿರ್ಮಿಸಿದ್ದಾರೆ. ಕಟ್ಟಡವನ್ನು ದುರಸ್ತಿ ಮಾಡಿಸಬೇಕು. ಅಧಿಕಾರಿಗಳ ವಸತಿ ಗೃಹಕ್ಕೆ ಬಳಕೆ ಮಾಡಿಸಬೇಕು ಎಂದು ದಲಿತ ಹಕ್ಕುಗಳ ಸಮಿತಿಯ ಮುಖಂಡ ಜಿ.ಕೃಷ್ಣಪ್ಪ ಹೇಳಿದರು.

ಬ್ರಿಟಿಷರು ನಿರ್ಮಿಸಿದ ಕಟ್ಟಡದ ಜಾಗವನ್ನು ಹಾಗೇ ಬಿಡಬೇಕಾಗಿತ್ತು. ಬ್ರಿಟಿಷರು ನಿರ್ಮಿಸಿದ ಕಟ್ಟಡಕ್ಕೆ ಧಕ್ಕೆ ಆಗದಂತೆ ತಾಲ್ಲೂಕು ಆಡಳಿತ ಎಚ್ಚರ ವಹಿಸಬೇಕು ಎಂದು ಪ್ರಾಂತ ಕೃಷಿಕೂಲಿಕಾರರ ಸಂಘದ ರಾಜ್ಯ ಸಮಿತಿ ಸದಸ್ಯ ಎಂ.ಎನ್.ರಘುರಾಮರೆಡ್ಡಿ ತಿಳಿಸಿದರು.

ಕಟ್ಟಡದ ಮುಖ್ಯದ್ವಾರದ ಗೇಟು ಇರಿಸಬೇಕು. ಅನೈತಿಕ ಚಟುವಟಿಕೆ ನಡೆಯದಂತೆ ಕ್ರಮ ಜರುಗಿಸಬೇಕು
ಸೋಮಶೇಖರ ಡಿವೈಎಫ್‌ಐ ಮುಖಂಡ

ಲೋಕೊಪಯೋಗಿ ಇಲಾಖೆಗೆ ಪತ್ರ

ಈಗಿನ ಕಟ್ಟಡವು ಶಿಥಿಲಾವಸ್ಥೆಯಲ್ಲಿ ಇದೆ. ದುರಸ್ತಿ ಮಾಡುವಂತೆ ಲೋಕೊಪಯೋಗಿ ಇಲಾಖೆಗೆ ಪತ್ರ ಬರೆಯಲಾಗಿದೆ. ವಸತಿ ಗೃಹ ಇಲ್ಲದಿರುವುದರಿಂದ ಖಾಸಗಿ ಮನೆಯಲ್ಲಿ ವಾಸವಾಗಿದ್ದೇನೆ. ಸರ್ಕಾರ ಕಟ್ಟಡವನ್ನು ದುರಸ್ತಿ ಮಾಡಿದರೆ ಅಧಿಕಾರಿಗಳು ಕಟ್ಟಡದಲ್ಲಿ ವಾಸ ಮಾಡುತ್ತಾರೆ ಎಂದು ತಹಶೀಲ್ದಾರ್ ಪ್ರಶಾಂತ್ ಕೆ.ಪಾಟೀಲ್ ಹೇಳಿದರು. ‘ಬ್ರಿಟಿಷರು ನಿರ್ಮಿಸಿದ ಕಟ್ಟಡವನ್ನು ದುರಸ್ತಿ ಮಾಡಿಸಲು ಅಂದಾಜು ವೆಚ್ಚ ಪಟ್ಟಿ ತಯಾರಿಸಿ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಸರ್ಕಾರ ಅನುದಾನ ನೀಡಿದರೆ ನೂತನ ವಸತಿ ಗೃಹ ನಿರ್ಮಿಸಲಾಗುವುದು ಎಂದು ಲೋಕೊಪಯೋಗಿ ಇಲಾಖೆ‌ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ರವಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.