ಚಿಕ್ಕನಾಯಕನಹಳ್ಳಿ: ಮದುವೆಯಾದ ಹೆಣ್ಣು ಮಕ್ಕಳಿಗೆ ತವರಿನಿಂದ ಬಾಗಿನ ಬರುತ್ತದೆ ಎಂದರೆ ಅದೇನೊ ಸಂಭ್ರಮ. ಹೆಣ್ಣು ಮಕ್ಕಳಿಗೆತವರಿನಿಂದ ಕಳಿಸುವ ಕುಂಕುಮಕ್ಕೆ ಬೆಲೆ ಕಟ್ಟಲಾಗದಷ್ಟು ಅಮೂಲ್ಯ ವಸ್ತುವಾಗಿಬಿಡುತ್ತದೆ. ಆದರೆ, ಈ ಬಾರಿ ಕೋವಿಡ್‌ನಿಂದಾಗಿ ಬಾಗಿನಕ್ಕೂ ಮೋಡ ಕವಿದಿದೆ.
ಈಗಿನ ಪರಿಸ್ಥಿತಿಯಲ್ಲಿ ಸಾರ್ವಜನಿಕ ವಾಹನಗಳಲ್ಲಿ ಪ್ರಯಾಣಿಸುವುದು ಕ್ಷೇಮಕರವಲ್ಲವೆಂಬ ಕಾರಣದಿಂದ ತವರೂರುಗಳಿಂದ ಬಾಗಿನವನ್ನು ಕೊರಿಯರ್, ಅಂಚೆ ಮೂಲಕ ಕಳುಹಿಸಲಾಗುತ್ತಿದೆ.
ಸಾಮಾನ್ಯವಾಗಿ ಬಾಗಿನವನ್ನು ಅಮ್ಮ, ಅಪ್ಪ, ಅಣ್ಣ, ತಮ್ಮ ತಂದು ಕೊಟ್ಟರೆ ಅಕ್ಕಪಕ್ಕದ ಮನೆಯವರನ್ನೆಲ್ಲ ಕರೆದು, ಕುಂಕುಮ, ಹಣ್ಣು ವಿತರಣೆ ಮಾಡುವ ಜತೆಗೆ ಕೊಟ್ಟಿರುವ ಉಡುಗೊರೆಯನ್ನು ತೋರಿಸಿ ಸಂಭ್ರಮಿಸುತ್ತಿದ್ದರು. ಈಗ ತವರಿನವರನ್ನು ‘ಬನ್ನಿ’ ಎಂದು ಕರೆಯುವುದು ದುಸ್ತರವಾಗಿದೆ. ಬರುವುದಕ್ಕೂ ತೊಂದರೆಯಾಗಿದೆ. ಹಾಗಾಗಿ, ಈ ಬಾರಿ ಬಾಗಿನ ಹೇಗೆ ಬಂದರೂ ಸ್ವೀಕರಿಸುವ ಮನಸ್ಥಿತಿಗೆ ತಲುಪಿದ್ದಾರೆ ಹೆಣ್ಣು ಮಕ್ಕಳು.
ವ್ಯಾಪಾರಕ್ಕೂ ಪೆಟ್ಟು: ಹೆಣ್ಣು ಮಕ್ಕಳು ಒಂದು ರೀತಿಯ ಸಂಕಟ ಅನುಭವಿಸುತ್ತಿದ್ದರೆ, ಬಾಗಿನದ ವ್ಯಾಪಾರವನ್ನೇ ನಂಬಿದವರು ಮತ್ತೊಂದು ರೀತಿಯ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ವ್ಯಾಪಾರ ಬಿರುಸಿಲ್ಲದೆ ವ್ಯಾಪಾರಸ್ಥರು ತೊಂದರೆ ಅನುಭವಿಸುತ್ತಿದ್ದಾರೆ.
ಗೌರಿ ಹಬ್ಬ ಇಪ್ಪತ್ತು ದಿನಗಳಿವೆ ಎನ್ನುವ ವೇಳೆಗಾಗಲೇ ವ್ಯಾಪಾರಸ್ಥರು ರಸ್ತೆ ಬದಿ, ಅಂಗಡಿಗಳಲ್ಲಿ ಬಾಗಿನದ ಕಿಟ್ ವ್ಯಾಪಾರ ಆರಂಭಿಸುತ್ತಿದ್ದರು. ವ್ಯಾಪಾರವೂ ಅಷ್ಟೇ ಜೋರಾಗಿ ನಡೆಯುತ್ತಿತ್ತು. ಆದರೆ, ಕೊರೊನಾ ಕಾರಣ ಕೆಲವೇ ಕೆಲವು
ವ್ಯಾಪಾರಸ್ಥರು ಮಾತ್ರ ಬಾಗಿನ ವ್ಯಾಪಾರಕ್ಕೆ ಇಳಿದಿದ್ದಾರೆ. ಆದರೂ ವ್ಯಾಪಾರ ಏರುಗತಿ ಕಂಡಿಲ್ಲ. ಚೇತರಿಸುವ ಲಕ್ಷಣಗಳೂ
ಕಾಣುತ್ತಿಲ್ಲ.
‘ಗೌರಿ ಹಬ್ಬ ಸಮೀಪಿಸಿದಾಗ ಜನರ ಅಪೇಕ್ಷೆ ನೋಡಿ ವ್ಯಾಪಾರ ಆರಂಭಿಸೋಣ. ಬಂಡವಾಳ ಹಾಕಿ ಕೈ ಸುಟ್ಟುಕೊಳ್ಳುವುದು ಬೇಡ’ ಎನ್ನುತ್ತಿದ್ದಾರೆ ಕೆಲ ವ್ಯಾಪಾರಿಗಳು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.