ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ವ್ಯಾಪಕವಾಗಿ ಹಸಿರು ಬೆಳೆಸಲು ನಿರ್ಧರಿಸಿರುವ ಜಿಲ್ಲಾ ಪಂಚಾಯಿತಿ ಮತ್ತು ಜಿಲ್ಲಾಡಳಿತ ಆ ನಿಟ್ಟಿನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಶಾಲಾ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಮಕ್ಕಳನ್ನು ಅರಣ್ಯ ಇಲಾಖೆ ಸಸ್ಯೋದ್ಯಾನ ಕರೆದೊಯ್ದು ಅರಣ್ಯೀಕರಣದ ಮಹತ್ವ ತಿಳಿಸುವ ಕೆಲಸಕ್ಕೆ ಮುಂದಾಗಿವೆ.
ಇತ್ತೀಚೆಗೆ ಜಿಲ್ಲೆಯ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಲ್ಲಿ ಜಾರಿಗೆ ತಂದ ತಿಂಗಳಲ್ಲಿ ಎರಡು ಶನಿವಾರಗಳ ‘ಬ್ಯಾಗ್ ರಹಿತ ದಿನ’ವನ್ನು ಈ ಉದ್ದೇಶಕ್ಕಾಗಿ ಬಳಸಿಕೊಳ್ಳಲು ನಿರ್ಧರಿಸಲಾಗಿದೆ.
ಈ ತಿಂಗಳ ಎರಡನೇ ‘ಬ್ಯಾಗ್ ರಹಿತ ದಿನ’ವಾದ ಶನಿವಾರ ಜಿಲ್ಲೆಯ ಸುಮಾರು 600 ವಿದ್ಯಾರ್ಥಿಗಳನ್ನು ಶೈಕ್ಷಣಿಕ ಅಧ್ಯಯನ ಪ್ರವಾಸದ ನೆಪದಲ್ಲಿ ಅರಣ್ಯ ಇಲಾಖೆ ನರ್ಸರಿಗಳಿಗೆ ಕರೆದೊಯ್ದು ಅಲ್ಲಿ ವಲಯ ಅರಣ್ಯಾಧಿಕಾರಿಗಳಿಂದ ಪರಿಸರ ಸಂರಕ್ಷಣೆಯ ಮಹತ್ವ ತಿಳಿಸಿಕೊಡುವ ಪ್ರಯತ್ನ ಮಾಡಲಾಯಿತು. ಜತೆಗೆ ವಿದ್ಯಾರ್ಥಿಗಳಲ್ಲಿದ್ದ ಅನೇಕ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಅವಕಾಶ ಕಲ್ಪಿಸಲಾಗಿತ್ತು.
ಪ್ರತಿ ತಾಲ್ಲೂಕಿನಿಂದ ಆಯ್ದ 100 ವಿದ್ಯಾರ್ಥಿಗಳನ್ನು ಈ ಪರಿಸರ ಪ್ರವಾಸಕ್ಕೆ ಕರೆದುಕೊಂಡು ಹೋಗಲಾಗಿತ್ತು. ಚಿಕ್ಕಬಳ್ಳಾಪುರದಲ್ಲಿ ಸೂಲಾಲಪ್ಪನ ದಿನ್ನೆ ಅರಣ್ಯ ಪ್ರದೇಶ, ಬಾಗೇಪಲ್ಲಿಯಲ್ಲಿ ಪರಗೋಡು ಅರಣ್ಯ, ಚಿಂತಾಮಣಿ ತಾಲ್ಲೂಕಿನಲ್ಲಿ ಕಾಡುಮಲ್ಲೇಶ್ವರ ಬೆಟ್ಟ, ಗೌರಿಬಿದನೂರಿನಲ್ಲಿ ಕುರೂಡಿ ಅರಣ್ಯ, ಶಿಡ್ಲಘಟ್ಟ ಹೊರವಲಯದ ಅರಣ್ಯ ಪ್ರದೇಶದಲ್ಲಿ ವಿದ್ಯಾರ್ಥಿಗಳಿಗೆ ಈ ಪ್ರವಾಸ ಆಯೋಜಿಸಲಾಗಿತ್ತು.
ಈ ಪ್ರವಾಸದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ವಿದ್ಯಾರ್ಥಿಗಳಿಗೆ ವಿವಿಧ ಸಸಿಗಳನ್ನು ಪರಿಚಯಿಸಿದರು. ಔಷಧಿ ಸಸ್ಯಗಳ ಮಹತ್ವ ತಿಳಿಸಿದರು. ಬೀಜದುಂಡೆ ತಯಾರಿಸುವ ಪ್ರಾತ್ಯಕ್ಷಿಕೆ ನೀಡಿದರು. ಕಾಡಿನ ರಕ್ಷಣೆಯಿಂದ ಮನುಜ ಕುಲಕ್ಕೆ ಆಗುವ ಒಳಿತಿನ ಬಗ್ಗೆ ಮನಮುಟ್ಟುವಂತೆ ಪಾಠ ಮಾಡಿದರು.
ಇದೇ ವೇಳೆ ಗೌರಿಬಿದನೂರಿನ ಕುರೂಡಿ ಅರಣ್ಯ ಪ್ರದೇಶಕ್ಕೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಚ್.ವಿ.ಮಂಜುನಾಥ್, ಸಿಇಒ ಗುರುದತ್ ಹೆಗಡೆ, ಉಪ ಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿದೇರ್ಶಕ ಶಿವಣ್ಣರೆಡ್ಡಿ ಭೇಟಿ ನೀಡಿ ವಿದ್ಯಾರ್ಥಿಗಳಲ್ಲಿ ಉತ್ಸಾಹ ತುಂಬಿದರು.
‘ಬ್ಯಾಗ್ ರಹಿತ ದಿನದ ಚಟುವಟಿಕೆಗಳು ದಿನೇ ದಿನೇ ಖುಷಿ ನೀಡುತ್ತಿವೆ. ಹೊಸ ಹೊಸದು ಚಿಂತನೆಗಳು ಹೊಳೆಯುತ್ತಿವೆ. ಬ್ಯಾಗ್ ರಹಿತ ದಿನದಂದು ಮಕ್ಕಳಿಗೆ ಹೇಳಿಕೊಡಲು ಶಿಕ್ಷಕರು ಸಹ ಹೊಸ ಹೊಸ ಯೋಜನೆ ಹಾಕಿಕೊಳ್ಳುತ್ತಿದ್ದಾರೆ. ಎಲ್ಲರಲ್ಲೂ ಉತ್ಸಾಹ ಕಾಣುತ್ತಿರುವುದು ಸಂತಸ ತಂದಿದೆ’ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಚ್.ವಿ.ಮಂಜುನಾಥ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.