ಡಿ.ಜಿ.ಮಲ್ಲಿಕಾರ್ಜುನ
ಶಿಡ್ಲಘಟ್ಟ: ಬಕ್ರೀದ್‌ಗೆ ಇನ್ನೂ ಮೂರು ದಿನ ಬಾಕಿ ಇರುವಂತೆಯೇ ಹಬ್ಬದ ಮಾಂಸದೂಟಕ್ಕಾಗಿ ಟಗರು, ಕುರಿ ಹಾಗೂ ಮೇಕೆಗಳ ಮಾರಾಟ ಜೋರಾಗಿ ನಡೆಯುತ್ತಿದೆ.
ಈ ಬಾರಿ ಶಿಡ್ಲಘಟ್ಟ ತಾಲ್ಲೂಕಿನ ಯಣ್ಣಂಗೂರಿನ ರೈತ ರೆಡ್ಡಪ್ಪ (ಬಂಗಾರಪ್ಪ) ಅವರ ‘ಬೀಟಲ್’ ತಳಿಯ ಮೇಕೆ ₹1.10 ಲಕ್ಷ ದಾಖಲೆಯ ದರಕ್ಕೆ ಮಾರಾಟವಾಗಿದೆ.
ದೊಡ್ಡ ದೇಹ, ಉದ್ದ ಕಿವಿ, ಸಣ್ಣ ಮುಖ ಹೊಂದಿರುವ ಮಾಂಸದ ತಳಿ ಎಂದೇ ಪರಿಗಣಿಸಲಾದ ‘ಬೀಟಲ್’ ಪಂಜಾಬ್ ಮೂಲದ ತಳಿ. ಜಮ್ನಾಪರಿ ಮತ್ತು ಮಲಬಾರಿ ಮೇಕೆ ಹೋಲುವ ಇದನ್ನು ‘ಲಾಹೋರಿ ಮೇಕೆ’ ಎಂದೂ ಕರೆಯುತ್ತಾರೆ.
ಪಂಜಾಬ್, ಸಿಯಾಲ್‌ಕೋಟ್, ಗುರುದಾಸಪುರ, ಪಾಕಿಸ್ತಾನದ ರಾವಲ್ಪಿಂಡಿ, ಲಾಹೋರ್ ಮತ್ತು ಬಾಂಗ್ಲಾದೇಶದ ಕೆಲವು ಭಾಗಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಈ ಮೇಕೆಗಳನ್ನು ಹಾಲು ಮತ್ತು ಮಾಂಸಕ್ಕಾಗಿ ಸಾಕಣೆ ಮಾಡುತ್ತಾರೆ. ಈ ಆಡುಗಳ ಚರ್ಮ ಉತ್ತಮ ಗುಣಮಟ್ಟದ್ದಾಗಿದ್ದು, ಸ್ಟಾಲ್ ಫೀಡಿಂಗ್ (ಕೊಟ್ಟಿಗೆ)ಗೆ ಸಹ ಹೊಂದಿಕೊಳ್ಳುತ್ತವೆ. ಎಲ್ಲ ರೀತಿಯ ಪರಿಸರ ಮತ್ತು ಹವಾಮಾನಕ್ಕೆ ಸುಲಭವಾಗಿ ಹೊಂದಿಕೊಳ್ಳುತ್ತವೆ.
‘ಕಳೆದ ವರ್ಷ ಬೀಟಲ್ ತಳಿಯ ಮೇಕೆ ತಂದು ಸಾಕ ತೊಡಗಿದೆ. ವರ್ಷಕ್ಕೆ ಎರಡು ಮರಿ ಹಾಕುವ ಮೇಕೆ ಪ್ರತಿದಿನ ಸುಮಾರು ಎರಡೂವರೆಯಿಂದ ನಾಲ್ಕು ಲೀಟರ್ ಹಾಲು ಕೊಡುತ್ತದೆ. ಅವುಗಳಿಗಾಗಿ ನಮ್ಮ ತೋಟದಲ್ಲಿ ಅಗಸೆ ಸೊಪ್ಪು ಬೆಳೆಯುತ್ತೇನೆ. ಇದರ ಜೊತೆಗೆ ಆಹಾರವಾಗಿ ಬೇವು, ಜೋಳದಕಡ್ಡಿ, ಸೀಮೆಹುಲ್ಲು, ರಾಗಿಹುಲ್ಲು, ಇಂಡಿ ಮತ್ತು ಬೂಸ ಕೂಡ ಕೊಡುತ್ತೇನೆ. ಇಷ್ಟೇ ಅಲ್ಲದೆ ನಮ್ಮ ಬಳಿ 20 ಮೇಕೆಗಳು ಮತ್ತು 30 ಸ್ಥಳೀಯ ತಳಿಯ ಕುರಿಗಳಿವೆ’ ಎಂದು ಮೇಕೆಯ ಮಾಲೀಕ ರೆಡ್ಡಪ್ಪ ತಿಳಿಸಿದರು.
ನಮ್ಮ ತಾತನ ಕಾಲದಿಂದಲೂ ಕುರಿ ಮೇಕೆ ಸಾಕಾಣೆ ಮಾಡುತ್ತಿದ್ದೇವೆ. ಆದರೆ ಕೆಲವು ವರ್ಷಗಳಿಂದ ಬಕ್ರೀದ್ ಹಬ್ಬಕ್ಕೆಂದು ಕುರಿ ಮೇಕೆ ಖರೀದಿಗೆ ಗ್ರಾಹಕರು ಬರುತ್ತಿದ್ದಾರೆ. ಅವರಿಗೆ ತಕ್ಕಂತೆ ವಿವಿಧ ಮಾಂಸದ ತಳಿಗಳನ್ನು ಸಾಕಣೆ ಮಾಡಲಾಗುತ್ತಿದೆರೆಡ್ಡಪ್ಪ ರೈತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.