ADVERTISEMENT

ಚಿಕ್ಕಬಳ್ಳಾಪುರ: ಶ್ರದ್ಧಾಭಕ್ತಿಯಿಂದ ಬಕ್ರೀದ್ ಆಚರಣೆ

ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ

​ಪ್ರಜಾವಾಣಿ ವಾರ್ತೆ
Published 17 ಜೂನ್ 2024, 14:23 IST
Last Updated 17 ಜೂನ್ 2024, 14:23 IST
ಚಿಕ್ಕಬಳ್ಳಾಪುರದ ಈದ್ಗಾ ಮೈದಾನದಲ್ಲಿ ಮುಸ್ಲಿಮರಿಂದ ಸಾಮೂಹಿಕ ಪ್ರಾರ್ಥನೆ
ಚಿಕ್ಕಬಳ್ಳಾಪುರದ ಈದ್ಗಾ ಮೈದಾನದಲ್ಲಿ ಮುಸ್ಲಿಮರಿಂದ ಸಾಮೂಹಿಕ ಪ್ರಾರ್ಥನೆ   

ಚಿಕ್ಕಬಳ್ಳಾಪುರ: ತ್ಯಾಗ, ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬವನ್ನು ಜಿಲ್ಲೆಯಾದ್ಯಂತ ಮುಸ್ಲಿಮರು ಸೋಮವಾರ ಶ್ರದ್ಧಾಭಕ್ತಿಯಿಂದ ಆಚರಿಸಿದರು. ತಾಲ್ಲೂಕು ಕೇಂದ್ರಗಳಲ್ಲಿ ಅಲ್ಲದೆ ನಗರ, ಪಟ್ಟಣ ಮತ್ತು ಗ್ರಾಮೀಣ ಪ್ರದೇಶದ ಈದ್ಗಾ ಮೈದಾನದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಬೆಳಿಗ್ಗೆಯಿಂದಲೇ ಶ್ವೇತವಸ್ತ್ರಧಾರಿಗಳಾಗಿ ತಮ್ಮ ಪ್ರದೇಶದ ಮಸೀದಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿದರು. ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಮುಂಭಾಗದ ಮಸೀದಿಯಿಂದ ಮೆರವಣಿಗೆ ಹೊರಟು ಬಜಾರ್ ರಸ್ತೆ, ಗಂಗಮ್ಮನಗುಡಿ, ಎಂ.ಜಿ.ರಸ್ತೆ ಮಾರ್ಗವಾಗಿ ಸಾಗಿ ಪ್ರಶಾಂತ್‌ನಗರದ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.  

ಬೆಳಿಗ್ಗೆ 7ರಿಂದ 9.00ರವರೆಗೆ ನಗರದ ವಿವಿಧ ಬಡಾವಣೆಗಳ ಮಸೀದಿಗಳಲ್ಲಿ ಪ್ರಾರ್ಥನೆಗೆ ಸಮಯ ನಿಗದಿಗೊಳಿಸಲಾಗಿತ್ತು. ಸರ್ಕಾರಿ ಪದವಿ ಪೂರ್ವ ಕಾಲೇಜು ಎದುರಿನ ಮಸೀದಿ, ಜಾಮಿಯಾ ಮಸೀದಿ, ಪೆಟ್ರೋಲ್ ಬಂಕ್ ಹಿಂಭಾಗದ ಮಸೀದಿ, ಶಾಂತಿ ನಗರ ಮಸೀದಿ ಮತ್ತು ಮುನ್ಸಿಪಲ್ ಬಡಾವಣೆಯ ಮಸೀದಿ ಪ್ರಾರ್ಥನೆ ನಡೆಯಿತು.  

ADVERTISEMENT

ಪ್ರಾರ್ಥನೆ ಸಂದರ್ಭದಲ್ಲಿ ಧರ್ಮಗುರುಗಳು ವಿಶೇಷ ಪ್ರವಚನ ನೀಡಿದರು. ನಮಾಜು ಪೂರ್ಣಗೊಂಡ ಕೂಡಲೇ ಪರಸ್ಪರ ಅಪ್ಪಿಕೊಂಡು ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ಮೈದಾನದ ಆವರಣದ ಬಳಿಯಿದ್ದ ಬಡವರಿಗೆ ಮತ್ತು ನಿರ್ಗತಿಕರಿಗೆ ನೆರವು ನೀಡಿದರು. ಮಕ್ಕಳಿಗೆ ಸಿಹಿ ನೀಡಿ, ಹಬ್ಬದ ಸಂಭ್ರಮ ಹಂಚಿಕೊಂಡರು.

ನಗರದಲ್ಲಿ ಮುಸ್ಲಿಮರ ಮನೆಗಳಲ್ಲಿ ಹಬ್ಬದ ವಾತಾವರಣ ಕಳೆಗಟ್ಟಿತ್ತು. ಮನೆ ಮಂದಿ ಎಲ್ಲರೂ ಹೊಸ ಬಟ್ಟೆ ಧರಿಸಿ ಸಂಭ್ರಮಿಸಿದರು. ಮನೆಗಳಲ್ಲಿ ಹಬ್ಬಕ್ಕಾಗಿ ವಿಶೇಷ ಮಾಂಸಾಹಾರ ಅಡುಗೆ ಸಿದ್ಧಪಡಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.