ADVERTISEMENT

ವಿದ್ಯುತ್ ಅಪಾಯಗಳ ಅರಿವು ಮೂಡಿಸಿ

ವಿದ್ಯಾರ್ಥಿಗಳಿಗೆ ಬೆಸ್ಕಾಂ ವತಿಯಿಂದ ವಿದ್ಯುತ್ ಸುರಕ್ಷತೆ ಮತ್ತು ವಿದ್ಯುತ್ ಅಪಘಾತಗಳನ್ನು ತಡೆಗಟ್ಟುವ ಬಗ್ಗೆ ಅರಿವು ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2019, 13:37 IST
Last Updated 13 ಸೆಪ್ಟೆಂಬರ್ 2019, 13:37 IST
ವಿದ್ಯುತ್ ಸುರಕ್ಷತೆ ಕುರಿತ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಯಿತು.
ವಿದ್ಯುತ್ ಸುರಕ್ಷತೆ ಕುರಿತ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಯಿತು.   

ಚಿಕ್ಕಬಳ್ಳಾಪುರ: ‘ವಿದ್ಯುತ್ ಬಳಕೆಯಿಂದ ಆಗುವ ಲಾಭ ಮತ್ತು ದುರ್ಬಳಕೆಯಿಂದ ಆಗುವ ಅಪಾಯಗಳ ಕುರಿತು ಮಕ್ಕಳು ಪೋಷಕರಿಗೆ ಮತ್ತು ಸಾರ್ವಜನಿಕರಿಗೆ ಅರಿವು ಮೂಡಿಸಬೇಕು’ ಎಂದು ಬೆಸ್ಕಾಂ ಮುಖ್ಯ ಲೆಕ್ಕಾಧಿಕಾರಿ ಜಿ.ನಾರಾಯಣಸ್ವಾಮಿ ತಿಳಿಸಿದರು.

ನಗರದ ಸರ್ಕಾರಿ ಪ್ರೌಢ ಶಾಲೆಯ ಆವರಣದಲ್ಲಿ ಬೆಸ್ಕಾಂ ವತಿಯಿಂದ ತಾಲ್ಲೂಕಿನ ಪ್ರೌಢಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಗುರುವಾರ ಆಯೋಜಿಸಿದ್ದ ವಿದ್ಯುತ್ ಸುರಕ್ಷತೆ ಮತ್ತು ವಿದ್ಯುತ್ ಅಪಘಾತಗಳನ್ನು ತಡೆಗಟ್ಟುವ ಬಗ್ಗೆ ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ವಿದ್ಯುತ್ ಕಂಬ ಏರಿ ದುರಸ್ತಿ ಮಾಡುವುದು, ಲೈನ್‌ಗಳಿಗೆ ನೇರವಾಗಿ ವೈರ್ ಹಾಕಿ ವಿದ್ಯುತ್ ಕಳ್ಳತನ ಮಾಡುವುದು, ವಿದ್ಯುತ್ ಕಂಬಗಳಿಗೆ ಕುರಿ-, ಜಾನುವಾರಗಳನ್ನು ಕಟ್ಟುವುದು ಅಪಾಯಕಾರಿ. ಇಂತಹ ಕೆಲಸಗಳು ನೆರೆಹೊರೆಯಲ್ಲಿ ಕಂಡುಬಂದರೆ ಸಾರ್ವಜನಿಕರು ಬೆಸ್ಕಾಂ ಅಧಿಕಾರಿಗಳ ಗಮನಕ್ಕೆ ತರಬೇಕು’ ಎಂದರು.

ADVERTISEMENT

‘ತುಂಡಾದ ವಿದ್ಯುತ್ ಅಥವಾ ಇನ್ಸುಲೇಶನ್ ಇಲ್ಲದ ತಂತಿಗಳನ್ನು ಮುಟ್ಟಬಾರದು. ಬಟ್ಟೆಗಳನ್ನು ಒಣಗಿಸಲು ವಿದ್ಯುತ್ ಕಂಬ ಅಥವಾ ವಿದ್ಯುತ್ ಕಂಬಕ್ಕಿರುವ ಗೈಗಳನ್ನು ಬಳಸಬಾರದು. ವಿದ್ಯುತ್ ಮಾರ್ಗದ ಟವರ್‌ಗಳನ್ನು ಹತ್ತಬಾರದು’ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಬೆಸ್ಕಾಂ ಕಾರ್ಯ ನಿರ್ವಾಹಕ ಎಂಜಿನಿಯರ್ ಶಿವಶರಣ್ ಮಾತನಾಡಿ, ‘ವಿದ್ಯುತ್ ಮಾರ್ಗಗಳ ಕೆಳಭಾಗದಲ್ಲಿ ಹಾಗೂ ಅದಕ್ಕೆ ಹತ್ತಿರದಲ್ಲಿ ಕಟ್ಟಡಗಳನ್ನು ನಿರ್ಮಿಸಬಾರದು. ಅರ್ಥಿಂಗ್ ವ್ಯವಸ್ಥೆ ಇಲ್ಲದ ವಿದ್ಯುತ್ ಉಪಕರಣಗಳನ್ನು ಬಳಸಬಾರದು. ನೀರು ಕಾಯಿಸಲು ತೆರೆದ ಹೀಟಿಂಗ್ ಕಾಯಿಲ್ ಬಳಸಬಾರದು. ಅನಧಿಕೃತ ವಿದ್ಯುತ್ ಸಂಪರ್ಕ ಪಡೆಯದಂತೆ ವಿದ್ಯಾರ್ಥಿಗಳು ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕು’ ಎಂದು ತಿಳಿಸಿದರು.

ವಿದ್ಯುತ್ ಸುರಕ್ಷತೆ ಕುರಿತಂತೆ ಭಾಷಣ, ಚಿತ್ರಕಲೆ ಮತ್ತು ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿತ್ತು. ತಾಲ್ಲೂಕಿನ ವಿವಿಧ ಶಾಲೆ ಮತ್ತು ಕಾಲೇಜುಗಳಿಂದ 30 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ವಿಜೇತ ವಿದ್ಯಾರ್ಥಿಗಳಿಗೆ ನಗದು ಬಹುಮಾನ ವಿತರಿಸಲಾಯಿತು.

ಶಿಕ್ಷಣ ಸಂಯೋಜಕ ಚಂದ್ರಶೇಖರ್, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎಸ್.ಮಂಜುನಾಥ್, ಉಪನ್ಯಾಸಕ ಸಿ.ಎಲ್.ಸತೀಶ್ ಕುಮಾರ್, ಸರ್ಕಾರಿ ಪ್ರೌಢ ಶಾಲೆ ಮುಖ್ಯ ಶಿಕ್ಷಕಿ ಅರುಣಾ, ಬೆಸ್ಕಾಂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.