ADVERTISEMENT

ಬೀಚಗಾನಹಳ್ಳಿಯಲ್ಲಿ ಗಲೀಜಿನ ಗಾನ

ಗುಡಿಬಂಡೆ ತಾಲ್ಲೂಕಿನ ಎಂಟು ಪಂಚಾಯಿತಿಗಳಲ್ಲಿಯೂ ಇದೇ ಸ್ಥಿತಿ

ಜೆ.ವೆಂಕಟರಾಯಪ್ಪ
Published 5 ಫೆಬ್ರುವರಿ 2024, 7:58 IST
Last Updated 5 ಫೆಬ್ರುವರಿ 2024, 7:58 IST
<div class="paragraphs"><p>ಬೀಚಗಾನಹಳ್ಳಿ ಗ್ರಾಮ ಪಂಚಾಯಿತಿ ಬಳಿ ಸ್ವಚ್ಛ ಭಾರತ್ ಮಿಷನ್ ನಮ್ಮ ನಡಿಗೆ ತ್ಯಾಜ್ಯ ಮುಕ್ತ ಕಡೆಗೆ ಪ್ರಚಾರದ ಫಲಕ ಹಾಕಿರುವ ಬಳಿ ತ್ಯಾಜ್ಯ</p></div>

ಬೀಚಗಾನಹಳ್ಳಿ ಗ್ರಾಮ ಪಂಚಾಯಿತಿ ಬಳಿ ಸ್ವಚ್ಛ ಭಾರತ್ ಮಿಷನ್ ನಮ್ಮ ನಡಿಗೆ ತ್ಯಾಜ್ಯ ಮುಕ್ತ ಕಡೆಗೆ ಪ್ರಚಾರದ ಫಲಕ ಹಾಕಿರುವ ಬಳಿ ತ್ಯಾಜ್ಯ

   

ಗುಡಿಬಂಡೆ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಗ್ರಾಮಗಳ ಸ್ವಚ್ಛತೆಗೆ ಹಾಗೂ ಅಭಿವೃದ್ಧಿಗಾಗಿ ಹಲವು ಕಾರ್ಯಕ್ರಮಗಳನ್ನು ಯೋಜನೆಗಳನ್ನು ಜಾರಿಗೊಳಿಸುತ್ತಿವೆ. ವಿಶೇಷವಾಗಿ ಸ್ವಚ್ಛತೆಗೆ ಒತ್ತು ನೀಡುವಂತೆ ಕೋರುತ್ತಿದೆ. ಜಿಲ್ಲೆಯಲ್ಲಿಯೂ ಸಹ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. 

ಹೀಗಿದ್ದರೂ ತಾಲ್ಲೂಕಿನ ಬೀಚಗಾನಹಳ್ಳಿ ಗ್ರಾಮ ಪಂಚಾಯಿತಿ ಮಾತ್ರ ಅನೈರ್ಮಲ್ಯದಿಂದ ಬಳಲುತ್ತಿದೆ. ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಅನೈರ್ಮಲ್ಯ ತಾಂಡವಾಡುತ್ತಿದೆ. 

ADVERTISEMENT

ಗುಡಿಬಂಡೆಯಿಂದ ರಾಷ್ಟ್ರೀಯ ಹೆದ್ದಾರಿ ಸಂಪರ್ಕಿಸುವ ರಸ್ತೆ ಪಕ್ಕದಲ್ಲಿಯೇ ಬೀಚಗಾನಹಳ್ಳಿ ಗ್ರಾಮ ಪಂಚಾಯಿತಿ ಕೇಂದ್ರವಿದೆ. ಈ ಗ್ರಾಮ ಪಂಚಾಯಿತಿಗೆ 16 ಹಳ್ಳಿಗಳು ಸೇರಿವೆ. ಗ್ರಾಮ ಪಂಚಾಯಿತಿಗೆ 12 ಸದಸ್ಯರು ಇದ್ದಾರೆ. ಪಂಚಾಯಿತಿಯಲ್ಲಿ ಒಬ್ಬ ಪಿಡಿಒ ಸೇರಿ 10 ಜನರು ಕೆಲಸ ಮಾಡುತ್ತಿದ್ದಾರೆ. 

ಗ್ರಾಮ ಪಂಚಾಯಿತಿ ಕೇಂದ್ರದಲ್ಲಿ ಸ್ವಚ್ಛತೆಗೆ ಇಬ್ಬರು ನೌಕರರು, ತ್ಯಾಜ್ಯ ಸಾಗಾಣಿಕೆ ಒಂದು ಟ್ರಾಕ್ಟರ್ ಇದೆ. ಹೀಗಿದ್ದರೂ ಗ್ರಾಮ ಪಂಚಾಯಿತಿ ಬಳಿ, ಗ್ರಾಮಗಳ ರಸ್ತೆಗಳಲ್ಲಿ ಎಲ್ಲಿ ನೋಡಿದರು ತ್ಯಾಜ್ಯ ರಾಶಿ ರಾಶಿಯಾಗಿ ಕಾಣುತ್ತದೆ. ಜಿಲ್ಲೆಯಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧವಿದ್ದರೂ ಪಂಚಾಯಿತಿ ವ್ಯಾಪ್ತಿಯಲ್ಲಿ ಮಾತ್ರ ಈ ನಿಷೇಧ ಅನ್ವಯವಾದಂತೆ ಕಾಣುತ್ತಲೇ ಇಲ್ಲ!

ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ 6 ತಿಂಗಳಿಗೆ ಅಥವಾ ವರ್ಷಕ್ಕೆ ಒಮ್ಮೆ ಸ್ವಚ್ಛತೆ ಕೈಗೊಳ್ಳಲಾಗುತ್ತದೆ. ಗ್ರಾಮದ ಚರಂಡಿಗಳನ್ನು ನೋಡಿದರೆ ಅಧ್ವಾನ ಮತ್ತಷ್ಟು ಎದ್ದು ಕಾಣುತ್ತದೆ. ಚರಂಡಿಗಳು ತ್ಯಾಜ್ಯದಿಂದ ತುಂಬಿ ತುಳುಕುತ್ತವೆ. ಸರ್ಕಾರ ಗ್ರಾಮಗಳಲ್ಲಿ ರಸ್ತೆ, ಚರಂಡಿಗಳು ನಿರ್ಮಾಣಕ್ಕೆ ಅನುದಾನ ನೀಡುತ್ತದೆ. ಅದರೆ ಸ್ವಚ್ಛತೆ, ನೌಕರರ ನೇಮಕಾತಿ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸುತ್ತಿರುವುದರಿಂದ ಗ್ರಾಮ ಪಂಚಾಯಿತಿ ಅಡಳಿತ ಅನುದಾನ ಬಂದಾಗ ಮಾತ್ರ ಸ್ವಚ್ಛತಾ ಕಾರ್ಯ ಮಾಡುತ್ತಿದೆ. 

ಬೀಚಗಾನಹಳ್ಳಿ ಗ್ರಾಮ ಪಂಚಾಯಿತಿ ಒಂದೇ ಅಲ್ಲಾ ಗುಡಿಬಂಡೆ ತಾಲ್ಲೂಕಿನ 8 ಗ್ರಾಮ ಪಂಚಾಯಿಗಳ ಪರಿಸ್ಥಿತಿ ಇದೇ ರೀತಿ ಇದೆ. ಮಳೆ ಬಂದರೇ ಮಳೆ ನೀರಿನಿಂದ ರಸ್ತೆ, ಚರಂಡಿ ತಾನಾಗಿಯೇ ಸ್ವಚ್ಛವಾಗುತ್ತವೆ. ವರ್ಷ ಪೂರ್ಣ ಚರಂಡಿಗಳಲ್ಲಿ ತುಂಬಿರುವ ತ್ಯಾಜ್ಯವನ್ನು ಒಮ್ಮೆ ಮಾತ್ರ ಸ್ವಚ್ಛಗೊಳಿಸಲಾಗುತ್ತದೆ ಎನ್ನುವ ಆರೋಪಗಳು ಇವೆ. 

ಸ್ವಚ್ಛತೆಗೆ ಇಬ್ಬರು ಸಿಬ್ಬಂದಿ
15 ನೇ ಹಣಕಾಸು ಯೋಜನೆಯಲ್ಲಿ ಸ್ವಚ್ಛತೆಗಾ ಅನುದಾನವನ್ನು ಮೀಸಲಿಡಲಾಗಿದೆ.  ಅನುದಾನದಲ್ಲಿ ತೊಂದರೆ ಎದುರಾದಾಗ ಪಂಚಾಯಿತಿ ಸದಸ್ಯರಿಗೆ ಅಯಾ ಗ್ರಾಮಗಳ ಉಸ್ತುವಾರಿ ವಹಿಸಿ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗುತ್ತದೆ. ಪಂಚಾಯಿತಿ ಕೇಂದ್ರದಲ್ಲಿ ಸ್ವಚ್ಛತೆಗಾಗಿ ಇಬ್ಬರು ಸಿಬ್ಬಂದಿ ಇದ್ದಾರೆ. ಪ್ರತಿದಿನ ತ್ಯಾಜ್ಯವನ್ನು ಟ್ರಾಕ್ಟರ್ ನಲ್ಲಿ ಸಾಗಾಣಿಕೆ ಮಾಡಲಾಗುತ್ತದೆ.  ಗೌಸ್ ಪೀರ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಬೀಚಗಾನಹಳ್ಳಿ
ಶೌಚಾಲಯದ ಕೊರತೆ
ಗ್ರಾಮ ಪಂಚಾಯಿತಿ ಕೇಂದ್ರಗಳ ಬಸ್ ನಿಲ್ದಾಣದ ಬಳಿ ಸಾರ್ವಜನಿಕರ ಶೌಚಾಯಲಯಗಳ ನಿರ್ಮಾಣ ಆಗಬೇಕು. ಪಂಚಾಯಿತಿ ಕೇಂದ್ರಕ್ಕೆ ಬರುವ ಜನರಿಗೆ ಶೌಚಾಯಲದ ಕೊರತೆ ಇದೆ. ಮಲ್ಲಿಕಾರ್ಜುನ್, ಬೀಚಗಾನಹಳ್ಳಿ, ತಾಲ್ಲೂಕು ಕಾಂಗ್ರೆಸ್ ಕಾರ್ಯದರ್ಶಿ 
ಗ್ರಾಮ ಪಂಚಾಯಿತಿ ಬಳಿ ಹಲವಾರು ದಿನಗಳಿಂದ ಕಸ ವಿಲೇವಾರಿ ಅಗಿಲ್ಲ. ತಕ್ಷಣ ಪಿಡಿಒ ಗಮನಕ್ಕೆ ತಂದು ಸ್ವಚ್ಛ ಮಾಡಲಾಗುವುದು
- ಶಾಂತಮ್ಮಮಹದೇವಪ್ಪ, ಬೀಚಗಾನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.