ADVERTISEMENT

ಕಮ್ಯುನಿಸ್ಟ್ ಚಳವಳಿಗೆ ದೊಡ್ಡ ನಷ್ಟ: ಸೀತಾರಾಂ ಯೆಚೂರಿಗೆ DYFIಯಿಂದ ಶ್ರದ್ಧಾಂಜಲಿ

ಸೀತಾರಾಂ ಯೆಚೂರಿಗೆ ಡಿವೈಎಫ್‌ಐಯಿಂದ ಶ್ರದ್ಧಾಂಜಲಿ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2024, 14:39 IST
Last Updated 14 ಸೆಪ್ಟೆಂಬರ್ 2024, 14:39 IST
ಗುಡಿಬಂಡೆ ತಾಲ್ಲೂಕು ಕಚೇರಿ ಬಳಿ ಸೀತಾರಾಂ ಯೊಚೂರಿ ನಿಧನದ ಅಂಗವಾಗಿ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಿತು
ಗುಡಿಬಂಡೆ ತಾಲ್ಲೂಕು ಕಚೇರಿ ಬಳಿ ಸೀತಾರಾಂ ಯೊಚೂರಿ ನಿಧನದ ಅಂಗವಾಗಿ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಿತು   

ಗುಡಿಬಂಡೆ: ಪ್ರಮುಖ ಮಾರ್ಕ್ಸ್‌ವಾದಿ ಚಿಂತಕ ಸೀತಾರಾಂ ಯೆಚೂರಿ ಅವರಿಗೆ ತಾಲ್ಲೂಕು ಡಿವೈಎಫ್‌ಐ ವತಿಯಿಂದ ಶುಕ್ರವಾರ ಶ್ರದ್ಧಾಂಜಲಿ ಅರ್ಪಿಸಲಾಯಿತು.

ತಾಲ್ಲೂಕು ಕಚೇರಿ ಬಳಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಸಿಪಿಎಂ ತಾಲ್ಲೂಕು ಕಾರ್ಯದರ್ಶಿ ಜಯರಾಮರೆಡ್ಡಿ ಮಾತನಾಡಿ, ಯೊಚೂರಿ ಅವರ ನಿಧನ ದುಖಃದ ಸಂಗತಿಯಾಗಿದ್ದು ಸಮಾಜ ಬದಲಾವಣೆಯ ನಿಟ್ಟಿನಲ್ಲಿ ಅವರು ತೋರಿದ ದಾರಿಯಲ್ಲಿ ಮುನ್ನಡೆಯಲು ಡಿವೈಎಫ್‌ಐ ರಾಜ್ಯ ಸಮಿತಿ ಬದ್ಧವಾಗಿದೆ ಎಂದರು.

‘ವಿದ್ಯಾರ್ಥಿ ದೆಸೆಯಲ್ಲೇ ಎಸ್‌ಎಫ್‌ಐ ಅಖಿಲ ಭಾರತ ಅಧ್ಯಕ್ಷರಾಗಿದ್ದ ಯೆಚೂರಿ ವಿದ್ಯಾರ್ಥಿ ಚಳವಳಿಯನ್ನು ಮುನ್ನಡೆಸಿದ್ದಾರೆ. ಇದೇ ಸಂದರ್ಭದಲ್ಲಿ ಮಾರ್ಕ್ಸ್‌ವಾದಕ್ಕೆ ಆಕರ್ಷಿತರಾಗಿ, ಸಿಪಿಎಂ ಪಕ್ಷದ ಕಾರ್ಯಕರ್ತರಾಗಿ ಮತ್ತು ನಾಯಕರಾಗಿ ಇಡೀ ಜೀವನವನ್ನು ದೇಶಕ್ಕಾಗಿ, ಸಮಾಜ ಪರಿವರ್ತನೆಗಾಗಿ ಮುಡಿಪಾಗಿಟ್ಟಿದ್ದರು. ನಿಸ್ವಾರ್ಥಿ, ನಿಗರ್ವಿ, ಮುತ್ಸದ್ದಿಯ ಅಗಲಿಕೆ ದೇಶದ ರಾಜಕಾರಣಕ್ಕೆ, ಶೋಷಿತ ಸಮುದಾಯಕ್ಕೆ ನಷ್ಟ ಉಂಟುಮಾಡಿದೆ’ ಎಂದರು.

ADVERTISEMENT

ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಶ್ರೀನಿವಾಸ ಮಾತನಾಡಿ, ‘ರಾಜ್ಯಸಭಾ ಸದಸ್ಯರಾಗಿ ದೇಶದ ಸಮಗ್ರ ಅಭಿವೃದ್ಧಿ, ಸಮಗ್ರತೆ ವಿಷಯಗಳನ್ನು ಮಂಡಿಸಿದ್ದಾರೆ. ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಇಂಡಿಯಾ ಕೂಟ ರಚನೆಯಲ್ಲಿ ಪ್ರಧಾನ ಪಾತ್ರ ವಹಿಸಿದ್ದರು. ಜೆಎನ್‌ಯು ವಿದ್ಯಾರ್ಥಿ ಸಂಘಟನೆ ಸಾಮಾಜಿಕ ಬದ್ಧತೆಯುಳ್ಳ ಪ್ರಖರ ಬೌದ್ಧಿಕತೆಯ ವಿದ್ವಾಂಸರನ್ನು ರೂಪಿಸುವ, ವಿಶ್ವವಿದ್ಯಾಲಯದೊಳಗಿನ ಅಕಾಡೆಮಿಕ್ ಪ್ರಜಾಪ್ರಭುತ್ವದ ಮಾದರಿಯಾಗಿ ಹಾಕಿದ ಅಡಿಪಾಯ ಇಂದಿಗೂ ದೇಶದೊಳಗೆ ಮಾತ್ರವಲ್ಲ ವಿಶ್ವಕ್ಕೆ ಮಾದರಿಯಾಗಿದೆ’ ಎಂದು ತಿಳಿಸಿದರು.

ಸಿಪಿಎಂ ಮುಖಂಡ ರಮಣ, ಆದಿನಾರಾಯಣಸ್ವಾಮಿ, ದೇವರಾಜು, ರೈತ ಸಂಘದ ಜಿಲ್ಲಾಧ್ಯಕ್ಷ ರಾಮನಾಥ್, ಜೀವಿಕ ಅಮರಾವತಿ, ರಾಜು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.