ADVERTISEMENT

ಚಿಕ್ಕಬಳ್ಳಾಪುರ: ನಿಷ್ಕ್ರಿಯದತ್ತ ಜೀವ ವೈವಿಧ್ಯ ಸಮಿತಿಗಳು

ಜಿಲ್ಲೆಯಲ್ಲಿವೆ 157 ಗ್ರಾಮ ಪಂಚಾಯಿತಿಗಳು

ಡಿ.ಎಂ.ಕುರ್ಕೆ ಪ್ರಶಾಂತ
Published 8 ನವೆಂಬರ್ 2024, 7:00 IST
Last Updated 8 ನವೆಂಬರ್ 2024, 7:00 IST
<div class="paragraphs"><p>ನಂದಿ ಬೆಟ್ಟ</p></div>

ನಂದಿ ಬೆಟ್ಟ

   

ಚಿಕ್ಕಬಳ್ಳಾಪುರ: ಗ್ರಾಮೀಣ ಭಾಗಗಳಲ್ಲಿ ಜೀವ ವೈವಿಧ್ಯ ಕಾಪಾಡುವುದು, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜೀವ ವೈವಿಧ್ಯಗಳ ಬಗ್ಗೆ ಕೆಲಸ ಮಾಡಲು ರಚನೆ ಆಗಿರುವ ಗ್ರಾಮ ಪಂಚಾಯಿತಿ ಮಟ್ಟದ ‘ಜೀವ ವೈವಿಧ್ಯ ನಿರ್ವಹಣಾ ಸಮಿತಿ’ಗಳು ಜಿಲ್ಲೆಯಲ್ಲಿ ನಿಷ್ಕ್ರಿಯವಾಗಿವೆ. 

ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರಾಣಿ, ಪಕ್ಷಿಗಳ ಪ್ರಭೇದಗಳನ್ನು ಗುರುತಿಸಿ ಅವುಗಳನ್ನು ದಾಖಲಿಸಿ ರಕ್ಷಿಸುವುದು ಮತ್ತು ಸಂಕುಲ ಹೆಚ್ಚಿಸುವುದು ಸೇರಿದಂತೆ ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಜೀವ ವೈವಿಧ್ಯಗಳನ್ನು ರಕ್ಷಿಸುವುದು, ಬೆಳೆಸುವುದು ಸಮಿತಿಗಳ ಮುಖ್ಯ ಉದ್ದೇಶ. 

ADVERTISEMENT

ಸಮಿತಿ ವ್ಯಾಪ್ತಿಯಲ್ಲಿನ ಜೈವಿಕ ಸಂಪನ್ಮೂಲಗಳ ಸುಸ್ಥಿರ ಬಳಕೆ ಮತ್ತು ನಿರ್ವಹಣೆ, ಜೈವಿಕ ಸಂಪನ್ಮೂಲಕಗಳ ಕಾನೂನುಬಾಹಿರ ಹಾಗೂ ಅನಿಯಮಿತ ಚಟುವಟಿಕೆಗಳನ್ನು ತಡೆಯುವುದು, ಜೀವ ವೈವಿಧ್ಯ ಮತ್ತು ಜೀವ ವೈವಿಧ್ಯ ಸಂಬಂಧಿತ ಸ್ಥಳೀಯ ಸಾಂಪ್ರದಾಯಿಕ ಜ್ಞಾನದ ದಾಖಲಾತಿ ಹೀಗೆ ಹಲವು ಕಾರ್ಯ ಚಟುವಟಿಕೆಗಳನ್ನು ಸಮಿತಿ ನಡೆಸಬೇಕು. ಅಲ್ಲದೆ ರಿಜಿಸ್ಟ್ರಾರ್ ಸಹ ನಿರ್ವಹಿಸಬೇಕು.

ಸಮಿತಿಯು ನಡೆಸುವ ಸಭೆಯ ಬಗ್ಗೆ ಪೂರ್ಣವಾಗಿ ವಿವರಗಳನ್ನು ದಾಖಲಿಸಬೇಕು. ಕಾರ್ಯಕಲಾಪಗಳ ಪಟ್ಟಿ, ಚರ್ಚಿಸಿದ ಪ್ರಮುಖ ವಿಷಯಗಳು ಮತ್ತು ನಿರ್ಣಯಗಳ ಬಗ್ಗೆ ನಡಾವಳಿ ಪುಸ್ತಕದಲ್ಲಿ ದಾಖಲು ಮಾಡಬೇಕು.

ಆದರೆ ಜಿಲ್ಲೆಯಲ್ಲಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಈ ಸಮಿತಿಗಳು ರಚನೆಯಾಗಿದ್ದರೂ ನಾಮಕಾವಸ್ಥೆ ಎನ್ನುವಂತಿವೆ. ಸಮಿತಿಗಳು ಕಾರ್ಯಚಟುವಟಿಕೆಗಳನ್ನು ಮತ್ತು ಸಭೆಗಳನ್ನು ನಡೆಸದೆ ನಿಷ್ಕ್ರಿಯವಾಗಿವೆ. 

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿವೆ 157 ಗ್ರಾಮ ಪಂಚಾಯಿತಿಗಳು ಇವೆ. ಈ ಪೈಕಿ ಬಹುತೇಕ ಪಂಚಾಯಿತಿಗಳಲ್ಲಿ ನಿಯಮಿತವಾಗಿ ಸಭೆಗಳು ನಡೆದಿಲ್ಲ. ಕೆಲವು ಕಡೆ ನಡೆದಿದ್ದರೂ ಅದು ‘ಕಾಫಿ, ಬಿಸ್ಕೆಟ್‌’ ಸಭೆಗಷ್ಟೇ ಸೀಮಿತ ಎನ್ನುವಂತಿದೆ.

‘ಈ ಹಿಂದೆ ತಾಲ್ಲೂಕು ಪಂಚಾಯಿತಿಯಲ್ಲಿ ಒಮ್ಮೆ ಒಂದು ಸಭೆ ಮಾಡಿದ್ದರು. ಆ ಸಭೆಗೆ ನಮ್ಮ ತಾಲ್ಲೂಕಿನ ಕೆಲವು ಪಂಚಾಯಿತಿಗಳ ಪಿಡಿಒಗಳು, ಕಾರ್ಯದರ್ಶಿಗಳು ಸಹ ಬಂದಿದ್ದರು. ಬಹಳಷ್ಟು ಅಧಿಕಾರಿಗಳು ಗೈರಾಗಿದ್ದ. ಆ ಸಭೆಯಲ್ಲಿ ಪಂಚಾಯಿತಿಗಳಲ್ಲಿ ಕೈಗೊಳ್ಳಬೇಕಾದ ಕೆಲಸಗಳು ಮತ್ತು ಜೀವ ವೈವಿಧ್ಯಗಳ ದಾಖಲೀಕರಣ, ರಕ್ಷಣೆಯ ಬಗ್ಗೆ ಒಂದಿಷ್ಟು ಚರ್ಚೆಗಳು ನಡೆದವು. ಆ ನಂತರ ಯಾವುದೇ ಪ್ರಗತಿಯೂ ಕಾಣಲಿಲ್ಲ’ ಎಂದು ಶಿಡ್ಲಘಟ್ಟ ತಾಲ್ಲೂಕಿನ ‘ಜೀವ ವೈವಿಧ್ಯ ನಿರ್ವಹಣಾ ಸಮಿತಿ’ ಸದಸ್ಯರೊಬ್ಬರು ಬೇಸರ ವ್ಯಕ್ತಪಡಿಸಿದರು.

ಜೀವವೈವಿಧ್ಯ ನಿರ್ವಹಣಾ ಸಮಿತಿಯ ಅಧಿಕಾರದ ಅವಧಿಯು ಐದು ವರ್ಷಗಳಾಗಿರುತ್ತದೆ. ಅಥವಾ ಸ್ಥಳೀಯ ಸಂಸ್ಥೆಯ ಅಧಿಕಾರದ ಅವಧಿಯೊಂದಿಗೆ ಸಮಿತಿಯ ಅವಧಿಯೂ ಸಮಾಪ್ತಿಗೊಳ್ಳುತ್ತದೆ. ಆದರೂ ಮುಂದಿನ ಜೀವವೈವಿಧ್ಯ ಸಮಿತಿಯ ಸದಸ್ಯರ ಮರುನಾಮ ನಿರ್ದೇಶ ಆಗುವವರೆಗೂ ಅಧಿಕಾರದಲ್ಲಿ ಇರಬೇಕಾಗುತ್ತದೆ. ಸಮಿತಿ ಅಧ್ಯಕ್ಷರ ಅಧಿಕಾರದ ಅವಧಿಯು ಮೂರು ವರ್ಷಗಳಾಗಿರುತ್ತದೆ. ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಈ ಸಮಿತಿಯ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಾರೆ.

ಹೀಗೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜೀವವೈವಿಧ್ಯಗಳ ರಕ್ಷಣೆ, ಬೆಳವಣಿಗೆ, ದಾಖಲೀಕರಣಕ್ಕೆ ರಚನೆಯಾಗಿರುವ ಸಮಿತಿಗಳು ನಿಷ್ಕ್ರಿಯವಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.