ಚಿಕ್ಕಬಳ್ಳಾಪುರ: ಎತ್ತಿನಹೊಳೆ ನೀರಾವರಿ ಯೋಜನೆಯ ಪ್ರಮುಖ ಉದ್ದೇಶವೇ ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಮತ್ತು ಕೋಲಾರ ಜಿಲ್ಲೆಗಳಿಗೆ ನೀರು ನೀಡುವುದಾಗಿದೆ. ಆದ ಕಾರಣ ಸರ್ಕಾರ ಯೋಜನೆಯ ಅಂತಿಮ ಜಿಲ್ಲೆಗಳಾದ ಈ ಮೂರು ಜಿಲ್ಲೆಗಳಿಗೆ ಮೊದಲು ನೀರು ಹರಿಸಬೇಕು ಎಂದು ಸಂಸದ ಡಾ.ಕೆ.ಸುಧಾಕರ್ ಮನವಿ ಮಾಡಿದರು.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯೋಜನೆಯ ನಿಗದಿತ ಹಾದಿಯಲ್ಲಿನ ಹಾಸನ, ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರು ಜಿಲ್ಲೆಗಳಿಗೆ ನೀರು ಪೂರೈಸಿ ನಂತರ ಮುಂದಿನ ಜಿಲ್ಲೆಗಳಿಗೆ ನೀರು ಹರಿಸಬೇಕಾಗಿದೆ. ಆದರೆ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಯಾವ ಸರ್ಕಾರಗಳೂ ಶಾಶ್ವತ ನೀರಾವರಿ ಯೋಜನೆ ರೂಪಿಸಿಲ್ಲ. ಆದ ಕಾರಣ ಮೊದಲು ಈ ಜಿಲ್ಲೆಗಳಿಗೆ ನೀರು ಹರಿಸಬೇಕು ಎಂದು ಕೋರಿದರು.
ನೀರು ಎಲ್ಲರಿಗೂ ಅಗತ್ಯ. ಯಾರಿಗೂ ಇಲ್ಲ ಎಂದು ಹೇಳಲು ಸಾಧ್ಯವಿಲ್ಲ. ಆ ಜಿಲ್ಲೆಗಳ ಜನರೂ ನಮ್ಮವರೇ, ನೀರು ಕೊಡಲಿ. ಸಂತೋಷ. ಆದರೆ ನಮ್ಮ ಜಿಲ್ಲೆಗಳ ನೀರಾವರಿ ಸಮಸ್ಯೆಗಳನ್ನು ಉಪಮುಖ್ಯಮಂತ್ರಿಯೂ ಆದ ಜಲಸಂಪನ್ಮೂಲ ಸಚಿವರು ಪ್ರಮುಖವಾಗಿ ಆಲಿಸಿ ಪರಿಹರಿಸಬೇಕು ಎಂದು ಮನವಿ ಮಾಡುತ್ತೇನೆ ಎಂದರು.
ಬಸವರಾಜ ಬೊಮ್ಮಾಯಿ ಅವರ ಸರ್ಕಾರ ಎತ್ತಿನಹೊಳೆ ಯೋಜನೆಗೆ ₹3 ಸಾವಿರ ಕೋಟಿಯಿಂದ ₹4 ಸಾವಿರ ಕೋಟಿ ನೀಡಿತ್ತು. ಕಾಂಗ್ರೆಸ್ ಸರ್ಕಾರ ಎಷ್ಟು ಹಣ ನೀಡಿದೆ ಎನ್ನುವುದು ಗೊತ್ತಿಲ್ಲ. 2025ರ ಅಂತಿಮ ಅಥವಾ 2026ರ ಮಾರ್ಚ್ ವೇಳೆಗೆ ಈ ಮೂರು ಜಿಲ್ಲೆಗಳ ಕೆರೆಗಳಿಗೆ ಎತ್ತಿನಹೊಳೆ ಯೋಜನೆ ನೀರು ತುಂಬಿಸಬೇಕು ಎಂದು ಸರ್ಕಾರಕ್ಕೆ ಮನವಿ ಮಾಡುವೆ ಎಂದು ಹೇಳಿದರು.
ಕಾವೇರಿ ಮತ್ತು ಕೃಷ್ಣಾ ನೀರಾವರಿ ಯೋಜನೆಗೆ ನಮ್ಮ ಜಿಲ್ಲೆಗಳು ಒಳಪಟ್ಟಿವೆ. ಆದರೆ ಮೇಕೆದಾಟು ಯೋಜನೆಯಲ್ಲಿ ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರಕ್ಕೆ ನೀರು ನೀಡುವ ವಿಚಾರವೇ ಇಲ್ಲ ಎಂದರು.
ಕೃಷ್ಣಾ ನದಿ ನೀರು ಚಿಕ್ಕಬಳ್ಳಾಪುರ ಜಿಲ್ಲೆಯ ಆಂಧ್ರದ ಗಡಿಭಾಗದಲ್ಲಿ ಇದೆ. ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಜೊತೆ ರಾಜ್ಯ ಸರ್ಕಾರ ಮಾತುಕತೆ ನಡೆಸಬೇಕು. ಈ ಮೂರು ಜಿಲ್ಲೆಗಳಿಗೆ ಕೃಷ್ಣಾ ನದಿ ನೀರು ಹರಿಸಲು ಕ್ರಮವಹಿಸಬೇಕು ಎಂದರು.
5 ರಿಂದ 10 ಟಿಎಂಸಿ ಅಡಿ ಕೃಷ್ಣಾ ನದಿ ನೀರನ್ನು ಈ ಮೂರು ಜಿಲ್ಲೆಗಳಿಗೆ ಹರಿಸಬೇಕು. ನಾರಾಯಣಪುರ ಅಣೆಕಟ್ಟೆಯಿಂದ 10 ಟಿಎಂಸಿ ಅಡಿಯನ್ನು ಆಂಧ್ರಕ್ಕೆ ನೀಡಿದರೆ ಸಮಸ್ಯೆ ಪರಿಹಾರ ಆಗುತ್ತದೆ. ನಿಮ್ಮ ಒಳ್ಳೆಯ ಕೆಲಸವನ್ನು ಈ ಜಿಲ್ಲೆಗಳ ಜನರು ಶಾಶ್ವತವಾಗಿ ನೆನಪಿಸಿಕೊಳ್ಳುವರು ಎಂದು ಸರ್ಕಾರಕ್ಕೆ ಕೋರಿದರು.
ಚಂದ್ರಬಾಬು ನಾಯ್ಡು ಅವರು ಎನ್‌ಡಿಎ ಭಾಗವಾಗಿದ್ದಾರೆ. ಅವರ ಬಳಿಗೆ ಈ ವಿಚಾರವಾಗಿ ನಿಯೋಗ ಕೊಂಡೊಯ್ದರೆ ನಾವೂ ಬರಲು ಸಿದ್ಧ ಎಂದರು.
ಪ್ರತಿ ಬಡವರ ಮನೆಗೆ ನಲ್ಲಿಯ ನೀರು ನೀಡಬೇಕು ಎಂದು ಕೇಂದ್ರ ಸರ್ಕಾರ ಜಲಜೀವನ್ ಮಿಷನ್ ಯೋಜನೆ ಆರಂಭಿಸಿದೆ. ಇದು ಒಳ್ಳೆಯ ಯೋಜನೆ. ಜಿಲ್ಲೆಯಲ್ಲಿ ಈ ಯೋಜನೆಗೆ ₹1 ಸಾವಿರ ಕೋಟಿ ನೀಡಲಾಗಿದೆ ಎಂದರು.
ಜಲಜೀವನ್ ಯೋಜನೆ ಕಾಮಗಾರಿಗಳು ಜಿಲ್ಲೆಯಲ್ಲಿ ಮಂದಗತಿಯಲ್ಲಿ ಸಾಗುತ್ತಿವೆ. ಇದಕ್ಕೆ ಕೆಲವು ತಾಂತ್ರಿಕ ಸಮಸ್ಯೆಗಳು ಸಹ ಇವೆ. ಕಾಂಕ್ರಿಟ್ ರಸ್ತೆ ಅಗೆದು ಪೈಪ್‌ಲೈನ್ ಅಳವಡಿಸಿದರೆ ರಸ್ತೆ ಹಾಳಾಗುತ್ತದೆ ಎಂದು ಜನರು ಹೇಳುತ್ತಿದ್ದಾರೆ. ಈ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಬೇಕಾಗಿದೆ. ಯೋಜನೆ ಕಾಮಗಾರಿ ನಡೆಯುತ್ತಿರುವ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸುವೆ ಎಂದು ತಿಳಿಸಿದರು.
ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ 16 ಲಕ್ಷ ಜನರಿಗೆ ತಲಾ ಐದು ಕೆ.ಜಿ ಅಕ್ಕಿ ನೀಡಲಾಗುತ್ತದೆ. ಆರೋಗ್ಯ, ಶಿಕ್ಷಣ, ಬಡವರಿಗೆ ಮನೆ ನಿರ್ಮಾಣಕ್ಕೆ ಸರ್ಕಾರ ಆದ್ಯತೆ ನೀಡಿದೆ ಎಂದು ಹೇಳಿದರು.
ಜಿಲ್ಲೆಯ ಬಡ ಅರ್ಹ ಫಲಾನುಭವಿಗಳಿಗೆ, ನಿವೇಶನ ರಹಿತರಿಗೆ ವಸತಿ ಯೋಜನೆಯಲ್ಲಿ ಮನೆ ಕೊಡಬೇಕು. ಇದಕ್ಕೆ ಒತ್ತು ನೀಡಬೇಕು ಎಂದು ಅಧಿಕಾರಿಗಳಗೆ ಸೂಚಿಸಿದ್ದೇನೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.