ಚಿಕ್ಕಬಳ್ಳಾಪುರ: ರಾಜ್ಯ ಸರ್ಕಾರ ಇತ್ತೀಚೆಗೆ ವಿವಿಧ ನಿಗಮ–ಮಂಡಳಿಗಳಿಗೆ ಅಧ್ಯಕ್ಷರು, ನಿರ್ದೇಶಕರನ್ನು ನೇಮಕ ಮಾಡಿದ ಬೆನ್ನಲ್ಲೇ ಜಿಲ್ಲೆಯ ಕೇಸರಿ ಪಾಳೆಯದಲ್ಲಿ ಅಸಮಾಧಾನದ ಹೊಗೆ ಆಡಲು ಆರಂಭಿಸಿದೆ.
ಸ್ಥಳೀಯ ಬಿಜೆಪಿ ಮುಖಂಡರು ನಮ್ಮದೇ ಸರ್ಕಾರದಲ್ಲಿ ನಮ್ಮನ್ನು ಕಡೆಗಣಿಸಿ ಪಕ್ಷಕ್ಕೆ ವಲಸೆ ಬಂದಿರುವ ಸಚಿವ ಡಾ.ಕೆ.ಸುಧಾಕರ್ ಅವರ ಬೆಂಬಲಿಗರಿಗೆ ವರಿಷ್ಠರು ಮಣೆ ಹಾಕುತ್ತಿದ್ದಾರೆ ಎಂದು ಮುನಿಸಿಕೊಂಡು, ಒಳಗೊಳಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಎನ್ನಲಾಗಿದೆ.
ಸಮ್ಮಿಶ್ರ ಸರ್ಕಾರದ ಪತನದ ಬಳಿಕ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದ ಬಿಜೆಪಿ ಸರ್ಕಾರದಲ್ಲಿ ಸುಧಾಕರ್ ಅವರು, ಸರ್ಕಾರದ ಮಟ್ಟದಲ್ಲಿ ತಮ್ಮ ‘ಪ್ರಭಾವ’ ಬಳಸಿ, ತಮ್ಮ ಬೆಂಬಲಿಗರನ್ನು ವಿವಿಧ ನಿಗಮ, ಮಂಡಳಿಗಳಿಗೆ ಅಧ್ಯಕ್ಷರು, ನಿರ್ದೇಶಕರು, ನಾಮನಿರ್ದೇಶನ ಸದಸ್ಯರನ್ನಾಗಿ ನೇಮಕ ಮಾಡಿಸುತ್ತಿರುವುದು ಸ್ಥಳೀಯ ಬಿಜೆಪಿ ನಾಯಕರ ಕಣ್ಣು ಕೆಂಪಗಾಗಿಸಿದೆ.
ಸುಧಾಕರ್ ಬಿಜೆಪಿಗೆ ಹೆಜ್ಜೆ ಇಟ್ಟ ಹೊಸ್ತಿಲಲ್ಲೇ ಕಳೆದ ವರ್ಷದ ಅಕ್ಟೋಬರ್‌ನಲ್ಲಿ ತಮ್ಮ ಬೆಂಬಲಿಗರನ್ನು ಕೋಲಾರ–ಚಿಕ್ಕಬಳ್ಳಾಪುರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ (ಕೋಚಿಮುಲ್), ಕೋಲಾರ–ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರ ಸಹಕಾರ (ಡಿಸಿಸಿ) ಬ್ಯಾಂಕ್ ಮತ್ತು ವಕ್ಫ್ ಮಂಡಳಿಗೆ ನಾಮನಿರ್ದೇಶನ ಮಾಡಿಸಿದ್ದು ಕೇಸರಿ ಪಾಳೆಯದಲ್ಲಿ ಮೊದಲ ಬಾರಿಗೆ ಅಪಸ್ವರ ಕೇಳುವಂತೆ ಮಾಡಿತ್ತು. ಮುಖಂಡರ ಈ ಒಳ ಬೇಗುದಿಯನ್ನು ಸ್ವತಃ ಯಡಿಯೂರಪ್ಪ ಅವರ ಗಮನಕ್ಕೆ ತರುವ ನಿಟ್ಟಿನಲ್ಲಿ ಅಂದಿನ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಜಿ.ವಿ. ಮಂಜುನಾಥ್ ನೇತೃತ್ವದಲ್ಲಿ ಅನೇಕ ಮುಖಂಡರು ಬೆಂಗಳೂರಿಗೆ ತೆರಳಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ, ಮನವಿ ಸಲ್ಲಿಸುವ ಮೂಲಕ ತಮ್ಮ ಮನದಾಳದ ಬೇಸರವನ್ನು ಸೂಚ್ಯವಾಗಿ ವ್ಯಕ್ತಪಡಿಸಿ ಬಂದಿದ್ದರು.
ಆದರೆ, ಇತ್ತೀಚೆಗೆ ಸರ್ಕಾರ ಸುಧಾಕರ್ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಮುಖಂಡ ಕೆ.ವಿ.ನಾಗರಾಜ್ ಅವರನ್ನು ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ಅಧ್ಯಕ್ಷರನ್ನಾಗಿ ಮಾಡುವ ಜತೆಗೆ ಮುಖಂಡರಾದ ಚಿಕ್ಕಬಳ್ಳಾಪುರದ ಸಿ.ಪಿ. ಮಂಜುನಾಥ್ ಅವರನ್ನು ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮದ ನಿರ್ದೇಶಕರ ಹುದ್ದೆಗೆ ಮತ್ತು ಕೊಂಡೇನಹಳ್ಳಿ ನಿವಾಸಿ ಕೆ.ಎಂ. ಮುರಳಿ ಅವರನ್ನು ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ನಿರ್ದೇಶಕರನ್ನಾಗಿ ನೇಮಿಸಿರುವುದು ಪಕ್ಷ ನಿಷ್ಠರಿಗೆ ತೀವ್ರ ಬೇಸರ ಉಂಟು ಮಾಡಿದೆ ಎನ್ನಲಾಗಿದೆ.
ಇದೀಗ ಸ್ಥಳೀಯ ಕೇಸರಿ ಪಾಳೆಯದಲ್ಲಿ ‘ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರನ್ನು ಕಡೆಗಣಿಸಿ, ಕಾಂಗ್ರೆಸ್‌ನಿಂದ ಬಂದವರು, ಪಕ್ಷದ ಪ್ರಾಥಮಿಕ ಸದಸ್ಯತ್ವ ಕೂಡ ಪಡೆಯದವರನ್ನು ಯಡಿಯೂರಪ್ಪ ಅವರು ನಿಗಮ, ಮಂಡಳಿಗೆ ನೇಮಕ, ನಾಮನಿರ್ದೇಶನ ಮಾಡುತ್ತಿರುವುದು ಖಂಡನೀಯ’ ಎಂಬ ಬೇಗುದಿ ವ್ಯಕ್ತವಾಗುತ್ತಿದೆ ಎನ್ನುತ್ತವೆ ಆ ಪಕ್ಷದ ಮೂಲಗಳು.
ಅನೇಕ ದಶಕಗಳಿಂದ ಪಕ್ಷಕ್ಕಾಗಿ ದುಡಿದ ತಮ್ಮ ‘ನಿಷ್ಠೆ’ಯನ್ನು ವರಿಷ್ಠರು ಗುರುತಿಸುತ್ತಾರೆ ಎಂಬ ಆಸೆಯಲ್ಲಿದ್ದ ಮುಖಂಡರಿಗೆ ಯಡಿಯೂರಪ್ಪ ಅವರ ಈ ನಿರ್ಧಾರ ‘ನುಂಗಲಾರದ ಬಿಸಿತುಪ್ಪ’ದಂತಾಗಿದೆ. ಹಾಗೆಂದು ಅವರಿಗೇ ನೇರವಾಗಿ ಹೇಳುವ ಧೈರ್ಯ ಸಾಲದೆ ಬಿಜೆಪಿ ಮುಖಂಡರು ಇದೀಗ ಆರ್‌ಎಸ್‌ಎಸ್ ಮುಖಂಡರ ಮುಂದೆ ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ.
ಈ ಕುರಿತು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ರಾಮಲಿಂಗಪ್ಪ ಅವರನ್ನು ಪ್ರಶ್ನಿಸಿದರೆ, ‘ನಿಗಮ, ಮಂಡಳಿಗಳ ನೇಮಕಾತಿಗಾಗಿ ಹಲವು ಮುಖಂಡರ ಹೆಸರನ್ನು ರಾಜ್ಯ ಘಟಕಕ್ಕೆ ಕಳುಹಿಸಲಾಗಿತ್ತು. ಅಂತಿಮವಾಗಿ ಪಕ್ಷ ಮತ್ತು ಮುಖ್ಯಮಂತ್ರಿ ಅವರು ನಿರ್ಣಯ ತೆಗೆದುಕೊಳ್ಳುತ್ತಾರೆ. ಪಕ್ಷಕ್ಕೆ ದುಡಿದವರಿಗೂ ಮುಂದೆ ಅವಕಾಶಗಳನ್ನು ನೀಡಲಾಗುತ್ತದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.