ಚಿಕ್ಕಬಳ್ಳಾಪುರ: ‘ಜಿಲ್ಲೆಗೆ ಕುಡಿಯುವ ನೀರು ಪೂರೈಸುವ ಎತ್ತಿನಹೊಳೆ ಯೋಜನೆ ಕಾಮಗಾರಿ ಬೇಗ ಮುಗಿಸುವ ನಿಟ್ಟಿನಲ್ಲಿ ಕೇಂದ್ರ ಸಚಿವ ಸದಾನಂದಗೌಡ ನೇತೃತ್ವದಲ್ಲಿ ಈಗಾಗಲೇ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಕೂಡ ಮಾತನಾಡಿ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಮುಗಿಸಲು ಕ್ರಮಕೈಗೊಳ್ಳಲಾಗುತ್ತದೆ’ ಎಂದು ಸಂಸದ ಬಿ.ಎನ್.ಬಚ್ಚೇಗೌಡ ಹೇಳಿದರು.
ನಗರದ ಶನಿವಾರ ಬಿಜೆಪಿ ವತಿಯಿಂದ ಆಯೋಜಿಸಿದ್ದ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
‘ಕ್ಷೇತ್ರದಲ್ಲಿ ಹೆಚ್ಚಿನ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಮತದಾರರ ಋಣ ತೀರಿಸುವೆ. ಜಿಲ್ಲೆಯಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸುವ ಯೋಜನೆ ಇದೆ. ಸದ್ಯ ಬಹಿರಂಗಪಡಿಸುವುದಿಲ್ಲ. ಜಿಲ್ಲೆಯಲ್ಲಿ ಕೇಂದ್ರೀಯ ವಿದ್ಯಾಲಯ ಸ್ಥಾಪನೆ ಮಾಡಲಾಗುತ್ತದೆ. ಅದಕ್ಕೆ ಜಿಲ್ಲಾಡಳಿತ ಜಮೀನು ಮಂಜೂರು ಮಾಡಿದರೆ ಕೇಂದ್ರ ಸಚಿವರೊಂದಿಗೆ ಮಾತುಕತೆ ನಡೆಸುವೆ. ಐಐಟಿ, ಐಎಎಂ ತಾಂತ್ರಿಕ ಕಾಲೇಜುಗಳನ್ನು ತೆರೆಯುವ ಕನಸಿದೆ’ ಎಂದು ತಿಳಿಸಿದರು.
‘ಈ ಭಾಗಕ್ಕೆ ಹೆಚ್ಚಿನ ರೈಲುಗಳ ಸಂಚಾರ ಸಂಪರ್ಕ ಕಲ್ಪಿಸಲು ಯೋಜನೆಗಳನ್ನು ಸಿದ್ದಪಡಿಸಿದ್ದು, ಚಿಕ್ಕಬಳ್ಳಾಪುರ-ಪುಟಪರ್ತಿ, ಚಿಕ್ಕಬಳ್ಳಾಪುರ–ಗೌರಿಬಿದನೂರು ರೈಲು ಮಾರ್ಗದ ಕಾಮಗಾರಿ ಆರಂಭಿಸುವಂತೆ ಸಂಬಂಧಪಟ್ಟವರೊಂದಿಗೆ ಮಾತುಕತೆ ನಡೆಸುವೆ. ವೈನ್ ತಯಾರಿಕೆ ಘಟಕದ ಆರಂಭಿಸಿ ದ್ರಾಕ್ಷಿ ಬೆಳೆಗಾರರಿಗೆ ಬಲ ತುಂಬುವ ಕೆಲಸ ಮಾಡುವೆ’ ಎಂದು ಭರವಸೆ ನೀಡಿದರು.
‘ಬಿಜೆಪಿ ಕಾರ್ಯಕರ್ತರು, ಮುಖಂಡರೊಂದಿಗೆ ಪ್ರತಿಯೊಂದು ಮನೆಗೂ ಹೋಗಿ ಕೇಂದ್ರದ ಯೋಜನೆಗಳನ್ನು ತಲುಪಿಸುವ ಕೆಲಸ ಮಾಡಬೇಕು. ಆ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು, ಮಹಿಳೆಯರು ಪಕ್ಷದ ಸದಸ್ಯತ್ವ ಹೊಂದುವಂತೆ ಮಾಡಬೇಕು. ಮುಂಬರುವ ಪಂಚಾಯಿತಿ ಚುನಾವಣೆಗಳ ಹೊತ್ತಿಗೆ ಪಕ್ಷವನ್ನು ಮತ್ತಷ್ಟು ಗಟ್ಟಿಗೊಳಿಸಬೇಕು’ ಎಂದು ಹೇಳಿದರು.
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಜಿ.ವಿ.ಮಂಜುನಾಥ್ ಮಾತನಾಡಿ, ‘ನಾವು ಚುನಾವಣೆಗೆ ಮಾತ್ರ ಸೀಮಿತರಾಗದೆ, ಪ್ರತಿ ದಿನ ನಮ್ಮ ಕಾರ್ಯಕರ್ತರು ಸದಸ್ಯತ್ವದ ಕೆಲಸ ಮಾಡಬೇಕು. ಬೇರುಮಟ್ಟದಲ್ಲಿ ಪಕ್ಷ ಗಟ್ಟಿಗೊಳಿಸಲು ಕಾರ್ಯಕರ್ತರು, ಮುಖಂಡರು ಶ್ರಮಿಸಬೇಕು’ ಎಂದು ತಿಳಿಸಿದರು.
ಬಿಜೆಪಿ ವಿಭಾಗೀಯ ಸಂಘಟನಾ ಉಸ್ತುವಾರಿ ಸಚ್ಚಿದಾನಂದ ಮೂರ್ತಿ, ಪಕ್ಷದ ಮುಖಂಡರಾದ ಮುರಳೀಧರ್, ಕೃಷ್ಣಾರೆಡ್ಡಿ, ರಾಮಣ್ಣ, ಶ್ರೀನಿವಾಸ್, ಶಿವಕುಮಾರ್, ರಾಮರೆಡ್ಡಿ, ಹನುಮೇಗೌಡ, ಕೃಷ್ಣಮೂರ್ತಿ, ಲಕ್ಷ್ಮೀನಾರಾಯಣಗುಪ್ತ, ಬೈರೇಗೌಡ, ಲಕ್ಷ್ಮೀಪತಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.