ADVERTISEMENT

ಎಲಿಜಬೆತ್ ರಾಣಿಯೂ, ನಂದಿ ಬೆಟ್ಟವೂ | 1961ರಲ್ಲಿ ಭೇಟಿ ನೀಡಿದ್ದ ರಾಣಿ

ಡಿ.ಜಿ.ಮಲ್ಲಿಕಾರ್ಜುನ
Published 13 ಸೆಪ್ಟೆಂಬರ್ 2022, 7:14 IST
Last Updated 13 ಸೆಪ್ಟೆಂಬರ್ 2022, 7:14 IST
ನಂದಿಬೆಟ್ಟದ ಸಂದರ್ಶಕರ ಪುಸ್ತಕದಲ್ಲಿ ಎಲಿಜಬೆತ್ ರಾಣಿ, ಗಂಡ ಫಿಲಿಪ್ ರೊಂದಿಗೆ ಬಂದಿದ್ದಾಗ ತಮ್ಮ ಹಸ್ತಾಕ್ಷರ ಮಾಡಿರುವುದು
ನಂದಿಬೆಟ್ಟದ ಸಂದರ್ಶಕರ ಪುಸ್ತಕದಲ್ಲಿ ಎಲಿಜಬೆತ್ ರಾಣಿ, ಗಂಡ ಫಿಲಿಪ್ ರೊಂದಿಗೆ ಬಂದಿದ್ದಾಗ ತಮ್ಮ ಹಸ್ತಾಕ್ಷರ ಮಾಡಿರುವುದು   

ಶಿಡ್ಲಘಟ್ಟ: ಬ್ರಿಟನ್ನ ರಾಣಿ ಎರಡನೇ ಎಲಿಜಬೆತ್ ಅವರು ಸೆಪ್ಟೆಂಬರ್ 8ರಂದು ನಿಧನ ಹೊಂದಿದರು. ಎಲಿಜಬೆತ್ ರಾಣಿ, 1961ರಲ್ಲಿ ಬೆಂಗಳೂರಿಗೆ ಭೇಟಿ ನೀಡಿದಾಗ, ಅಂದಿನ ರಾಜ್ಯಪಾಲರು ಮತ್ತು ಮೈಸೂರು ರಾಜ್ಯದ ಮಾಜಿ ಮಹಾರಾಜ ಜಯಚಾಮರಾಜೇಂದ್ರ ಒಡೆಯರ್ ಅವರನ್ನು ಸ್ವಾಗತಿಸಿ ವಿವಿಧ ಸ್ಥಳಗಳನ್ನು ಭೇಟಿ ಮಾಡಿಸಿರುವ ವಿಡಿಯೋ ತುಣುಕುಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಬ್ರಿಟನ್ನ ರಾಣಿ ಭೇಟಿ ನೀಡಿದ್ದ ತಾಣಗಳಲ್ಲಿ ಜಿಲ್ಲೆಯ ಪ್ರಸಿದ್ಧ ನಂದಿ ಗಿರಿಧಾಮವೂ ಒಂದು. 1961ರ ಫೆಬ್ರುವರಿ 21 ರಿಂದ 23 ರವರೆಗೆ ನಂದಿ ಬೆಟ್ಟದಲ್ಲಿ ರಾಣಿ ಎರಡನೇ ಎಲಿಜಬೆತ್ ಅವರು ಪತಿ ಫಿಲಿಪ್ ಅವರೊಂದಿಗೆ ತಂಗಿದ್ದರೆಂಬುದಕ್ಕೆ ಸಾಕ್ಷಿಯಾಗಿ ಅವರ ಹಸ್ತಾಕ್ಷರವಿದೆ.

ನಂದಿ ಗಿರಿಧಾಮದ ತೋಟಗಾರಿಕೆ ಇಲಾಖೆಯ ವಿಶೇಷ ಅಧಿಕಾರಿಗಳ ಕಚೇರಿಯಲ್ಲಿ ಒಂದು ಐತಿಹಾಸಿಕ ಸಂದರ್ಶಕರ ಪುಸ್ತಕವಿದೆ. ಈ ಪುಸ್ತಕದಲ್ಲಿ ಎಲಿಜಬೆತ್ ರಾಣಿ ಗಂಡ ಫಿಲಿಪ್ ರೊಂದಿಗೆ ಬಂದಿದ್ದಾಗ, ಇಸವಿ, ದಿನಾಂಕವನ್ನು ಸಹ ಬರೆದು ತಮ್ಮ ಹಸ್ತಾಕ್ಷರವನ್ನು ಮಾಡಿದ್ದಾರೆ (1961 ಫೆಬ್ರುವರಿ 21-23).

ADVERTISEMENT

‘ಮೂರು ದಿನಗಳ ಕಾಲ ನಂದಿಬೆಟ್ಟದಲ್ಲಿ ತಂಗಿದ್ದ ಅವರು ಇಲ್ಲಿನ ಪ್ರಕೃತಿ, ಹವಾಮಾನವನ್ನು ಖಂಡಿತವಾಗಿಯೂ ಆಸ್ವಾದಿಸಿರುತ್ತಾರೆ, ಆನಂದಿಸಿರುತ್ತಾರೆ. ಅವರು ಬಂದಾಗ ತೆಗೆದಿರುವ ಚಿತ್ರಗಳಾಗಲೀ, ಅವರ ಅನಿಸಿಕೆಗಳ ದಾಖಲೆಗಳು ನಮ್ಮಲ್ಲಿಲ್ಲ. ಆದರೆ ಅವರ ಹಸ್ತಾಕ್ಷರ ಮಾತ್ರ ಅಪರೂಪದ ದಾಖಲೆಯಾಗಿ ಉಳಿದಿದೆ’ ಎನ್ನುತ್ತಾರೆ ತೋಟಗಾರಿಕೆ ಇಲಾಖೆಯ ವಿಶೇಷ ಅಧಿಕಾರಿ ಗೋಪಾಲ್.

ರಾಣಿ ಸರ್ಕಲ್ ಮತ್ತು ರಾಣಿ ರಸ್ತೆ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯ ಬಳಿ ಹೆದ್ದಾರಿ 7ರ ನಂದಿಬೆಟ್ಟದ ಕ್ರಾಸ್‌ನಲ್ಲಿ ಹಿಂದೆ ಮಾರ್ಗಸೂಚಿ ವೃತ್ತವನ್ನು ಮಾಡಿದ್ದರು. 1961ರಲ್ಲಿ ಎಲಿಜಬೆತ್ ರಾಣಿ ನಂದಿಬೆಟ್ಟಕ್ಕೆ ಈ ಮಾರ್ಗದಲ್ಲಿ ಹೋಗಿದ್ದ ಸವಿನೆನಪಿಗೆ ಇಲ್ಲಿ ನಂದಿಬೆಟ್ಟದ ಮಾರ್ಗಸೂಚಿ ನಿರ್ಮಿಸಿ ಮೇಲೆ ಸುಂದರ ನಂದಿಯ ಮೂರ್ತಿಯನ್ನು ಇರಿಸಿ, ರಾಣಿ ಸರ್ಕಲ್ ಎಂದೇ ಕರೆಯುತ್ತಿದ್ದರು. ಈ ರಸ್ತೆಯನ್ನು ಜನರು ರಾಣಿ ರಸ್ತೆ ಎನ್ನುತ್ತಿದ್ದರು. 2007ರಲ್ಲಿ ರಾಷ್ಟ್ರೀಯ ಹೆದ್ದಾರಿ ರಸ್ತೆ ಅಗಲೀಕರಣವಾದ ಸಂದರ್ಭದಲ್ಲಿ ಈ ಮಾರ್ಗಸೂಚಿ ಮತ್ತು ನಂದಿ ಮೂರ್ತಿ ನೆಲಸಮವಾಯಿತು. ನಂತರ ಇತಿಹಾಸ ತಜ್ಞ ಬಿ.ಜಿ.ಬಿಟ್ಟಸಂದ್ರ ಗುರುಸಿದ್ದಯ್ಯ ಮತ್ತು ಸಂಗಡಿಗರ ನಿರಂತರ ಒತ್ತಾಯದಿಂದ 2021ರಲ್ಲಿ ಅದರ ಪುನರ್ ನಿರ್ಮಾಣವಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.