ADVERTISEMENT

ಬಾಗೇಪಲ್ಲಿ | ಒಂದೇ ಮಾರ್ಗದಲ್ಲಿ ಕೆಟ್ಟು ನಿಂತ ಬಸ್: ಪ್ರಯಾಣಿಕರ ಪರದಾಟ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2024, 14:23 IST
Last Updated 4 ಅಕ್ಟೋಬರ್ 2024, 14:23 IST
ಬಾಗೇಪಲ್ಲಿ ತಾಲ್ಲೂಕಿನ ಶಂಕಂವಾರಿಪಲ್ಲಿ ಗ್ರಾಮದ ಕ್ರಾಸ್‌ನ ಬಾಗೇಪಲ್ಲಿ-ಚೇಳೂರು ಮುಖ್ಯರಸ್ತೆಯ ಪಕ್ಕದಲ್ಲಿ ಬಸ್‌ ಕೆಟ್ಟು ನಿಂತಿದ್ದರಿಂದ ಪ್ರಯಾಣಿಕರು ಸಂಕಷ್ಟ ಅನುಭವಿಸಿದರು
ಬಾಗೇಪಲ್ಲಿ ತಾಲ್ಲೂಕಿನ ಶಂಕಂವಾರಿಪಲ್ಲಿ ಗ್ರಾಮದ ಕ್ರಾಸ್‌ನ ಬಾಗೇಪಲ್ಲಿ-ಚೇಳೂರು ಮುಖ್ಯರಸ್ತೆಯ ಪಕ್ಕದಲ್ಲಿ ಬಸ್‌ ಕೆಟ್ಟು ನಿಂತಿದ್ದರಿಂದ ಪ್ರಯಾಣಿಕರು ಸಂಕಷ್ಟ ಅನುಭವಿಸಿದರು   

ಬಾಗೇಪಲ್ಲಿ: ಶುಕ್ರವಾರ ಬೆಳಗ್ಗೆ ಬಾಗೇಪಲ್ಲಿ ಪಟ್ಟಣದಿಂದ ಚಿಂತಾಮಣಿ ಕಡೆಗೆ ಸಂಚರಿಸುವ ದೇವರಗುಡಿಪಲ್ಲಿ ಗ್ರಾಮದ ಕ್ರಾಸ್‌ನ ಮುಖ್ಯರಸ್ತೆಯಲ್ಲಿ ಬಸ್ ಕೆಟ್ಟಿದೆ. ಇನ್ನೊಂದು ಕಡೆಗೆ ಕಾರಕೂರು ಕ್ರಾಸ್‌ನ ಮೂಲಕ, ಪಾತಪಾಳ್ಯ, ಚೇಳೂರು ಕಡೆಗೆ ಸಂಚರಿಸುವ ಶಂಖಂವಾರಿಪಲ್ಲಿ ಕ್ರಾಸ್‌ನಲ್ಲಿಯೂ ಸಾರಿಗೆ ಬಸ್ ಕೆಟ್ಟು ನಿಂತಿತ್ತು.

ಒಂದೇ ಮಾರ್ಗದಲ್ಲಿ 2 ಬಸ್ ಕೆಟ್ಟಿರುವುದರಿಂದ ಪ್ರಯಾಣಿಕರು ಪರದಾಡುವಂತಾಯಿತು. ಪಾತಪಾಳ್ಯ, ಚೇಳೂರು ಕಡೆಗೆ ಸಂಚರಿಸುವ ನೌಕರರು, ವಿದ್ಯಾರ್ಥಿಗಳು, ಮಹಿಳೆಯರು, ಮಕ್ಕಳು ಬಸ್‌ನಿಲ್ದಾಣದಲ್ಲಿ ಕಾದು ಕುಳಿತಿದ್ದರು.

ಸಂಚಾರಕ್ಕೆ ಯೋಗ್ಯವಲ್ಲದ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಬಹುತೇಕವಾಗಿ ಗ್ರಾಮೀಣ ಪ್ರದೇಶಗಳಿಗೆ ಕಳುಹಿಸಲಾಗುತ್ತಿದೆ. ಶುಕ್ರವಾರ ಬೆಳಗ್ಗೆ ಒಂದೇ ಮಾರ್ಗದಲ್ಲಿನ 2 ಬಸ್ ಕೆಟ್ಟಿವೆ ಎಂದು ಸಾರಿಗೆ ಅಧಿಕಾರಿಗಳ ವಿರುದ್ಧ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಸಂಚಾರಕ್ಕೆ ಯೋಗ್ಯವಲ್ಲದ ಬಸ್‌ಗಳು ಚಾಲಕರಿಗೆ ತಲೆನೋವಾಗಿ ಪರಿಣಮಿಸಿದೆ. ಮಾರ್ಗ ಮಧ್ಯೆ ತಾಂತ್ರಿಕ ದೋಷಗಳಿಂದ ಇದ್ದಕ್ಕಿದ್ದಂತೆ ಬಸ್ ಕೆಟ್ಟು ನಿಲ್ಲುತ್ತದೆ. ಪ್ರಯಾಣಿಕರು ನಮಗೆ ಬೈಯುತ್ತಾರೆ. ಸಾರಿಗೆ ಇಲಾಖೆ ಯೋಗ್ಯವಲ್ಲದ ಬಸ್‌ಗಳನ್ನು ಸಂಚಾರಕ್ಕೆ ಬಿಡಬಾರದು. ಹೊಸ ಬಸ್ ಸಂಚರಿಸುವಂತೆ ಮಾಡಬೇಕು ಎಂದು ಚಾಲಕರೊಬ್ಬರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಸಂಚಾರಕ್ಕೆ ಯೋಗ್ಯವಲ್ಲದ ಬಸ್‌ಗಳ ಬಗ್ಗೆ ಘಟಕದ ಅಧಿಕಾರಿಗಳಿಂದ ವರದಿ ತರಿಸಲಾಗುವುದು. ಬಸ್ ಕೆಟ್ಟಿರುವ ಬಗ್ಗೆ ಮಾಹಿತಿ ಪಡೆಯುತ್ತೇನೆ. ತಾಂತ್ರಿಕ ದೋಷ ರಿಪೇರಿ ಆಗಿರಬಹುದು. ಹೊಸ ಬಸ್‌ಗಳನ್ನು ಗ್ರಾಮೀಣ ಪ್ರದೇಶಕ್ಕೆ ಸಂಚರಿಸಲು ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಚಿಕ್ಕಬಳ್ಳಾಪುರ ಜಿಲ್ಲಾ ವಿಭಾಗೀಯ ಸಂಚಾರಿ ನಿಯಂತ್ರಣಾಧಿಕಾರಿ ಬಸವರಾಜು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.