ADVERTISEMENT

ಅಡಿಗಡಿಗೂ ಅಡ್ಡಿಗೆಗೆ ಮುತ್ತಿದ ಪಾತರಗಿತ್ತಿ

ಶಿಡ್ಲಘಟ್ಟ ನ್ಯಾಯಾಲಯದ ಆವರಣದ ಉದ್ಯಾನದಲ್ಲಿ ಚಿತ್ತಾರ

ಡಿ.ಜಿ.ಮಲ್ಲಿಕಾರ್ಜುನ
Published 29 ಜೂನ್ 2019, 20:00 IST
Last Updated 29 ಜೂನ್ 2019, 20:00 IST
ನ್ಯಾಯಾಲಯದ ಆವರಣದಲ್ಲಿರುವ ಉದ್ಯಾನದಲ್ಲಿ ಅರಳಿರುವ ಅಡ್ಡಿಗೆ ಹೂಗಳು
ನ್ಯಾಯಾಲಯದ ಆವರಣದಲ್ಲಿರುವ ಉದ್ಯಾನದಲ್ಲಿ ಅರಳಿರುವ ಅಡ್ಡಿಗೆ ಹೂಗಳು   

‘ನಮ್ಮ ಹೆಣ್ಣಿಗೆ ಅಡ್ಡಿಗೆ ಕೊಡ್ತೀವ್, ಚೈನಾ ಕೊಡ್ತೀವ್, ಕಡಗಾ ಕೊಡ್ತೀವ್, ಓಲೆ ಕೊಡ್ತೀವ್... ನಮ್ಮ ಹುಡುಗೀಗ್ ಗಂಡು ಕೊಡಿ...’ ಎಂದು ಗ್ರಾಮೀಣ ಮಕ್ಕಳು ‘ಅಪ್ಪ– ಅಮ್ಮ’ ಆಟ ಆಡುವಾಗ ಮಾತುಗಳನ್ನು ಹೇಳುತ್ತಾರೆ. ಅವರು ಆಟದಲ್ಲಿ ಹೀಗೆ ಒಡವೆಗಳನ್ನಾಗಿ ಬಳಸುವುದು ಪುಟ್ಟ ಗಿಡವನ್ನು.

ಶಿಡ್ಲಘಟ್ಟ ನಗರದ ದಿಬ್ಬೂರಹಳ್ಳಿ ರಸ್ತೆಯಲ್ಲಿರುವ ನ್ಯಾಯಾಲಯದ ಆವರಣದ ಉದ್ಯಾನದಲ್ಲಿ ಹುಲುಸಾಗಿ ಬೆಳೆದಿರುವ ಈ ಅಡ್ಡಿಗೆ ಹೂಗಳಿಗೆ ಹಾರಾಡುವ ಹೂಗಳು ಎಂದು ಕರೆಯುವ ಬಣ್ಣಬಣ್ಣದ ಚಿಟ್ಟೆಗಳು ಮಕರಂದಕ್ಕಾಗಿ ಮುತ್ತುತ್ತಿವೆ.

ಇಂಗ್ಲಿಷಿನಲ್ಲಿ ಈ ಹೂವನ್ನು ‘ಕೋಟ್ ಬಟನ್ಸ್’ ಎಂದು ಕರೆಯುವರು. ತೆಲುಗಿನಲ್ಲಿ ‘ಬೆಲ್ಲಮಾಕು ಚೆಟ್ಟು’ ಎನ್ನುತ್ತಾರೆ. ಗಬ್ಬು ಸಣ್ಣ ಸೇವಂತಿ ಎಂದು ಕೂಡ ಇದನ್ನು ಕರೆಯುವರು. ಆದರೆ ಈ ಎಲ್ಲ ಪದಗಳಿಗಿಂತ ‘ಅಡ್ಡಿಗೆ ಸೊಪ್ಪು’ ಎನ್ನುವುದೇ ಪ್ರಸಿದ್ಧವಾದ ಹೆಸರು. ಈ ಗಿಡ ಸುಮಾರು 30 ರಿಂದ 60 ಸೆ.ಮೀ ಎತ್ತರಕ್ಕೆ ಬೆಳೆದರೆ ಹೂವು 1 ರಿಂದ 1.5 ಸೆ.ಮೀ ಸುತ್ತಳತೆ ಹೊಂದಿರುತ್ತದೆ. ಮಧ್ಯಅಮೆರಿಕ ಮೂಲದ ಈ ಸಸ್ಯ ಈಗ ಭಾರತದ್ದೇ ಆಗಿದೆ. ಇದರ ಹೂಗಳು ದುಂಬಿ ಮತ್ತು ಚಿಟ್ಟೆಗಳಿಗೆ ಅತ್ಯಂತ ಪ್ರಿಯವಾದುದು.

ADVERTISEMENT

ಉದ್ದನೆಯ ಬಳುಕುವ ಮೃದುವಾದ ಸಣ್ಣ ಕಡ್ಡಿಯ ಕಾಂಡದ ತುದಿಯಲ್ಲಿ ಪುಟ್ಟ ಹಳದಿ ಎಸಳುಗಳಿರುವ ಈ ಹೂಗಳನ್ನು ಮಕರಂದ ಹೀರಲು ಚಿಟ್ಟೆಗಳು ಮುತ್ತುತ್ತಿವೆ. ಚಿಕ್ಕ ಆಕಾರದ ಚಿಟ್ಟೆಗಳು ಕೂತಾಗ ಸ್ವಲ್ಪ ನೇರವಾಗಿರುವ ಹೂಗಳು, ದೊಡ್ಡ ಚಿಟ್ಟೆಗಳು ಕೂತಾಗ ಭಾರ ತಡೆಯದೆ ಬಾಗುತ್ತವೆ. ಬಾಗಿದ ಹೂ ಬಳ್ಳಿಯಿಂದಲೇ ಚಿಟ್ಟೆ ಮಕರಂದ ಹೀರಿ ಮುಂದಿನ ಹೂವಿನೆಡೆಗೆ ಸಾಗುತ್ತದೆ.

ನೀಲಿ ಹುಲಿ ಚಿಟ್ಟೆ

ನೀಲಿ ಹುಲಿ, ಅಲೆಮಾರಿ, ಗೆರೆ ಅಲೆಮಾರಿ, ಕಿರು ಹಳದಿ, ಸ್ಫಟಿಕ, ಕಪಿಲ ಮುಂತಾದ ವೈವಿಧ್ಯಮಯ ಚಿಟ್ಟೆಗಳು ಸಾಕಷ್ಟು ಸಂಖ್ಯೆಯಲ್ಲಿ ಇಲ್ಲಿನ ಅಡ್ಡಿಗೆ ಹೂಗಳಿಂದ ಮಕರಂದ ಹೀರಲು ಬರುತ್ತವೆ.

‘ನ್ಯಾಯಾಲಯದ ಆವರಣದಲ್ಲಿನ ಉದ್ಯಾನದಲ್ಲಿ ಹಸಿರು ಹುಲ್ಲಿನ ನಡುವೆ ಅಡ್ಡಿಗೆ ಹೂಗಳು ಅರಳಿವೆ. ಈ ಹೂಗಳಿಗಾಗಿ ಚಿಟ್ಟೆಗಳು ಗುಂಪಾಗಿ ಬಂದು ಹೂವಿಂದ ಹೂವಿಗೆ ಹಾರಾಡುವುದು ನೋಡಲು ಬಲು ಚೆನ್ನ. ಕೆಲವೊಮ್ಮೆ ಅವುಗಳ ಸಂಖ್ಯೆ ಹೆಚ್ಚಾಗಿ ದೂರದಿಂದ ಬಣ್ಣಗಳು ಎರಚಿದಂತೆ, ಗಾಳಿಯಲ್ಲಿ ಬಣ್ಣಗಳು ಸಿಂಪಡಿಸಿದಂತೆ ಭಾಸವಾಗುತ್ತದೆ. ನಿತ್ಯದ ಜಂಜಾಟದಲ್ಲಿ ಇವುಗಳನ್ನು ಕಂಡಾಗ ಆಹ್ಲಾದಕ ಎನಿಸುತ್ತದೆ’ ಎನ್ನುತ್ತಾರೆ ವಕೀಲ ಡಿ.ವಿ.ಸತ್ಯನಾರಾಯಣ.

ಅಲೆಮಾರಿ ಚಿಟ್ಟೆ

ಆಟಕ್ಕೆ ಆಭರಣ
‘ಅಡ್ಡಿಗೆ ಹೂವಿನಿಂದ ಗ್ರಾಮೀಣ ಹೆಣ್ಣು ಮಕ್ಕಳು ತೋಳಬಂದಿ, ಕಡಗ, ಅಡ್ಡಿಗೆ, ಕಿವಿಗೆ ಓಲೆ ಮುಂತಾದ ಆಭರಣಗಳನ್ನು ತಯಾರಿ ಆಟವಾಡುವರು. ಈ ಗಿಡಕ್ಕೆ ರೋಗನಿರೋಧಕ ಗುಣ ಇದೆ. ಮಕ್ಕಳು ಬಿದ್ದು ಗಾಯ ಮಾಡಿಕೊಂಡಾಗ ಇದರ ಸೊಪ್ಪನ್ನು ಹಿಂಡಿ ರಸವನ್ನು ಗಾಯಕ್ಕೆ ಹಚ್ಚುತ್ತಾರೆ. ಹಿಂದೆ ಶಾಲೆಗಳಲ್ಲಿ ಕಪ್ಪು ಹಲಗೆಗೆ ಹೊಳಪನ್ನು ಬರಿಸಲು ಮತ್ತು ಅಕ್ಷರ ಚೆನ್ನಾಗಿ ಕಾಣಲು ಅಡ್ಡಿಗೆ ಸೊಪ್ಪನ್ನು ಇದಿಲು ಪುಡಿ ಜತೆ ಕುಟ್ಟಿ ಬಳಿಯುತ್ತಿದ್ದರು. ದನಕ್ಕಂತೂ ಒಳ್ಳೆಯ ಮೇವು ಇದು’ ಎಂದು ಶಿಕ್ಷಕ ಎಂ.ಎ.ರಾಮಕೃಷ್ಣ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.