ಬಾಗೇಪಲ್ಲಿ: ರಸ್ತೆಯ ತುಂಬೆಲ್ಲಾ ಕಲ್ಲು, ಜಲ್ಲಿ, ಗುಂಡಿಗಳದೇ ಕಾರುಬಾರು. ಕಾಲುದಾರಿಗಿಂತ ಕಡೆಯಾಗಿದೆ ಇಲ್ಲಿನ ಸ್ಮಶಾನ ರಸ್ತೆ. ರಸ್ತೆ ಇಕ್ಕೆಲಗಳಲ್ಲಿ ಸ್ವಚ್ಛತೆಯಿಲ್ಲ, ಕಸ, ತ್ಯಾಜ್ಯಗಳ ರಾಶಿ, ಊರಿನ ಚರಂಡಿಗಳು ಹಾಗೂ ಕಲುಷಿತ ನೀರಿನಿಂದ ದುರ್ವಾಸನೆ... ಇದು ಚಿತ್ರಾವತಿ ನದಿ ಪಕ್ಕದಲ್ಲಿನ ಸ್ಮಶಾನದ ರಸ್ತೆಯ ದುಸ್ಥಿತಿ.
ಪಟ್ಟಣದ ವ್ಯಾಪ್ತಿಯಲ್ಲಿ 23 ವಾರ್ಡ್‍ಗಳಿವೆ. 22 ಸಾವಿರದಷ್ಟು ಜನಸಂಖ್ಯೆ ಇದೆ. ಇಲ್ಲಿ ಚಿತ್ರಾವತಿ ನದಿಗೆ ಅಂಟಿಕೊಂಡಂತೆ ಬ್ರಾಹ್ಮಣ ಹಾಗೂ ವೈಶ್ಯ ಜನಾಂಗದವರ ಚಿತ್ರಾವತಿ ಮುಕ್ತಿಧಾಮ ಚಿತಾಗಾರವಿದೆ. ಇದರ ಮುಂದೆಯೇ ಪರಿಶಿಷ್ಟ ಪಂಗಡ, ಜಾತಿ, ಹಿಂದುಳಿದ, ಇತರೆ ಸಮುದಾಯದವರ ಸ್ಮಶಾನಕ್ಕೆ ಜಾಗ ಮಾಡಲಾಗಿದೆ. ಇಲ್ಲಿಗೆ ಸಂಪರ್ಕ ಕಲ್ಪಿಸಲು ಅವಧೂತ ಹುಸೇನುದಾಸಯ್ಯಸ್ವಾಮಿ ವೃತ್ತದಿಂದ ರಸ್ತೆ ಇದೆ. ಪಟ್ಟಣದ ವಾಲ್ಮೀಕಿ, ಅಂಬೇಡ್ಕರ್ ನಗರ, ಸಂತೇಮೈದಾನ, ಗೂಳೂರು ರಸ್ತೆ, ಕಂಚುಕೋಟೆ ಸೇರಿದಂತೆ ವಿವಿಧ ವಾರ್ಡ್‍ಗಳಿಂದ 1 ಕಿಮೀ ಕಾಲುನಡಿಗೆಯಲ್ಲಿ ಶವಗಳನ್ನು ಹೊತ್ತು ಸಾಗಿಸಬೇಕಾಗುತ್ತದೆ. ಆದರೆ ರಸ್ತೆಯ ರುರವಸ್ಥೆಯಿಂದಾಗಿ ಶವಗಳನ್ನು ಹೊತ್ತು ಸಾಗಲು ಜನರು ಹರಸಾಹಸ ಪಡಬೇಕಾಗಿದೆ. ಮೊಣಕಾಲುದ್ದ ಗುಂಡಿಗಳಲ್ಲಿ ವಾಹನ ಸವಾರರು, ಜನರು ಸರ್ಕಸ್ ಮಾಡುತ್ತ ಸಂಚರಿಸಬೇಕಾಗಿದೆ.
ಪುರಸಭೆ ಸ್ಮಶಾನಕ್ಕೆ ಸುಗಮ ರಸ್ತೆ, ಕೂರಲು ಜಾಗ, ನೀರು–ನೆರಳಿನ ವ್ಯವಸ್ಥೆ, ಬೆಳಕಿನ ವ್ಯವಸ್ಥೆ ಸೇರಿದಂತೆ ಕನಿಷ್ಠ ಸೌಲಭ್ಯಗಳನ್ನು ಕಲ್ಪಿಸಬೇಕು. ಆದರೆ ಸ್ಮಶಾನಗಳ ಅಭಿವೃದ್ಧಿಗೆ ಸರ್ಕಾರದ ಯೋಜನೆಗಳು ತಲುಪುತ್ತಿಲ್ಲ. ಪುರಸಭೆಯಲ್ಲಿ ಪ್ರತಿ ವರ್ಷ ಸ್ಮಶಾನದ ಅಭಿವೃದ್ಧಿ ಹಾಗೂ ಇತರೆ ಚಟುವಟಿಕೆಗಳಿಗೆ ಕೋಟ್ಯಾಂತರ ಹಣ ಇರುತ್ತದೆ. ಆದರೆ, ಪುರಸಭೆ ಸ್ಮಶಾನವನ್ನು ಕಡೆಗಣಿಸಿದ್ದು, ಯಾವ ಸೌಕರ್ಯಗಳನ್ನೂ ಒದಗಿಸುತ್ತಿಲ್ಲ. ಪಟ್ಟಣದಿಂದ ಸ್ಮಶಾನಕ್ಕೆ ಸಾಗುವ ಅರ್ಧ ರಸ್ತೆಗೆ ಟಾರು ಹಾಕಲಾಗಿದೆ. ಉಳಿದಂತೆ ಒಂದು ಕಿಲೋ ಮೋಟರ್ ರಸ್ತೆಗೆ ಸಿಮೆಂಟ್ ಆಗಲಿ, ಟಾರು ಆಗಲಿ ಹಾಕಿಲ್ಲ. ಮಳೆ ಬಂತೆಂದರೆ ಜನರ ಸಂಚಾರ ಇನ್ನೂ ಕಷ್ಟ. ಕಾಲುದಾರಿಯ ಇಕ್ಕೆಲಗಳಲ್ಲಿ ಕಳೆ, ಮುಳ್ಳಿನ ಗಿಡಗಳು ಬೆಳೆದಿವೆ. ನಿರ್ಜನ ಪ್ರದೇಶವಾದ್ದರಿಂದ ಅನೈತಿಕ ಚಟುವಟಿಕೆಗಳಿಗೂ ಇದು ತಾಣವಾಗಿದೆ.
‘ಚಿತ್ರಾವತಿ ನದಿ ಪಕ್ಕದಲ್ಲಿ ಬ್ರಾಹ್ಮಣ ಹಾಗೂ ವೈಶ್ಯ ಸಮುದಾಯದವರ ಚಿತ್ರಾವತಿ ಮುಕ್ತಿಧಾಮ ಚಿತಾಗಾರವಿದೆ. ಶವಗಳನ್ನು ಸಾಗಿಸುವವರು, ವಿಧಿ ವಿಧಾನಗಳನ್ನು ಪೂರೈಸುವ ಕುಟುಂಬಸ್ಥರು ಪಾದರಕ್ಷೆಗಳಿಲ್ಲದೇ ಸಂಚರಿಸಬೇಕು. ರಸ್ತೆಯಲ್ಲಿ ಕಲ್ಲು, ಮುಳ್ಳುಗಳು ತುಂಬಿವೆ. ನಡೆದಾಡಲು ತೊಂದರೆಯಾಗಿದೆ. ಪುರಸಭೆ ಅಧಿಕಾರಿಗಳಿಗೆ, ಆಡಳಿತ ಮಂಡಳಿಯವರಿಗೆ, ಜನಪ್ರತಿನಿಧಿಗಳಿಗೆ ಸ್ಮಶಾನಕ್ಕೆ ರಸ್ತೆ ಸೇರಿದಂತೆ ಕನಿಷ್ಠ ಸೌಲಭ್ಯಗಳು ಕಲ್ಪಿಸಬೇಕು ಎನ್ನುವ ಇಚ್ಛಾಶಕ್ತಿ ಇಲ್ಲದಿರುವುದು ಬೇಸರದ ಸಂಗತಿ’ ಎಂದು ಬ್ರಾಹ್ಮಣ ಮಹಾಸಭಾದ ತಾಲ್ಲೂಕು ಅಧ್ಯಕ್ಷ ಎಸ್.ಮುನಿರಾಮಯ್ಯ ಹೇಳಿದರು.
‘ಕಳೆದ 10 ವರ್ಷಗಳಿಂದ ಸ್ಮಶಾನದ ರಸ್ತೆ ಮಾಡಿಸಿ ಎಂದು ವೈಶ್ಯ ಸಮುದಾಯದ ಯುವಕರು ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಅವರಿಗೆ ಮನವಿ ಮಾಡಿದ್ದೆವು. ಆದರೆ ಪುರಸಭೆ ಅಧಿಕಾರಿಗಳಾಗಲಿ, ಶಾಸಕರಾಗಲಿ ಇತ್ತ ಗಮನ ಹರಿಸಿಲ್ಲ. ಸ್ಮಶಾನಕ್ಕೆ ಶವಗಳನ್ನು ಸಾಗಿಸುವ ಪರಿಪಾಟಲು ಅಷ್ಟಿಷ್ಟಲ್ಲ’ ಎಂದು ತಾಲ್ಲೂಕು ವರ್ತಕರ ಸಂಘದ ಅಧ್ಯಕ್ಷ ಮಂಜುನಾಥ್ ತಿಳಿಸಿದರು.
ಪಟ್ಟಣದ ವಾಲ್ಮೀಕಿ ನಗರ, ಅಂಬೇಡ್ಕರ್ ನಗರ ಸೇರಿದಂತೆ ವಿವಿಧ ಕಡೆಗಳಿಂದ ಸ್ಮಶಾನಕ್ಕೆ ಶವಗಳನ್ನು ಹೊತ್ತು ಸಾಗಿಸಬೇಕು. ಆದರೆ ಡಾಂಬರು ಇಲ್ಲದ ರಸ್ತೆಯಲ್ಲಿ ಸಂಚರಿಸಲು ಕಷ್ಟವಾಗಿದೆ. ಆವುಲಮಂದೆ ರಸ್ತೆಯಿಂದ ಸ್ಮಶಾನದವರಿಗೂ ರಸ್ತೆ, ನೀರು, ನೆರಳು, ಸ್ಮಶಾನದ ಒಳಗೆ ಕಳೆ, ಮುಳ್ಳಿನ ಗಿಡಗಳು ತೆರವು ಮಾಡಿಸುವ ಕೆಲಸ ಮಾಡಬೇಕು ಎಂದು ವಾಲ್ಮೀಕಿ ನಾಯಕ ಕ್ಷೇಮಾಭಿವೃದ್ಧಿ ಸಂಘದ ಮುಖಂಡ ಅಶ್ವಥ್ಥಪ್ಪ ಹೇಳಿದರು.
ಸ್ಮಶಾನದ ರಸ್ತೆಯ ತೊಂದರೆಯ ಬಗ್ಗೆ ಲಿಖಿತ ರೂಪದಲ್ಲಿ ಅರ್ಜಿ ನೀಡಿಲ್ಲ. ಸ್ಮಶಾನದ ರಸ್ತೆಗೆ ಭೇಟಿ ನೀಡಿ, ಪರಿಶೀಲನೆ ಮಾಡಲಾಗುವುದು. ಹಂತ ಹಂತವಾಗಿ ರಸ್ತೆ ಅಭಿವೃದ್ಧಿ ಪಡಿಸಲಾಗುವುದು–ಎಂ.ಶ್ರೀನಿವಾಸ್, ಪುರಸಭೆ ಮುಖ್ಯಾಧಿಕಾರಿ
ಪಟ್ಟಣದ ಚಿತ್ರಾವತಿ ನದಿ ಪಕ್ಕದಲ್ಲಿನ ಸ್ಮಶಾನವನ್ನು ಅಭಿವೃದ್ಧಿಪಡಿಸಬೇಕು ಎಂದು ಸಮುದಾಯಗಳ ಮುಖಂಡರು ಮೌಖಿಕವಾಗಿ ತಿಳಿಸಿದ್ದಾರೆ. ಕೂಡಲೇ ಪಟ್ಟಣದ ಸ್ಮಶಾನವನ್ನು ಅಭಿವೃದ್ಧಿ ಪಡಿಸುವಂತೆ ಪುರಸಭೆ ಅಧಿಕಾರಿಗಳಿಗೆ, ಆಡಳಿತ ಮಂಡಥಗಯವರಿಗೆ ಸೂಚನೆ ನೀಡಲಾಗುವುದು..–ಎಸ್.ಎನ್.ಸುಬ್ಬಾರೆಡ್ಡಿ, ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.