ADVERTISEMENT

ಶುದ್ಧಗಾಳಿ; ಚಿಕ್ಕಬಳ್ಳಾಪುರಕ್ಕೆ ಎರಡನೇ ಸ್ಥಾನ

ಅಕ್ಟೋಬರ್ ತಿಂಗಳಲ್ಲಿ ಹೆಗ್ಗಳಿಕೆ; ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ವರದಿ

ಡಿ.ಎಂ.ಕುರ್ಕೆ ಪ್ರಶಾಂತ
Published 27 ಅಕ್ಟೋಬರ್ 2024, 6:06 IST
Last Updated 27 ಅಕ್ಟೋಬರ್ 2024, 6:06 IST
ಚಿಕ್ಕಬಳ್ಳಾಪುರದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿ ಆವರಣದಲ್ಲಿ ನಿರಂತರ ಪರಿವೇಷ್ಟಕ ವಾಯು ಮಾಪನ ಘಟಕ
ಚಿಕ್ಕಬಳ್ಳಾಪುರದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿ ಆವರಣದಲ್ಲಿ ನಿರಂತರ ಪರಿವೇಷ್ಟಕ ವಾಯು ಮಾಪನ ಘಟಕ   

ಚಿಕ್ಕಬಳ್ಳಾಪುರ: ವಾಯು ಮಾಲಿನ್ಯ ಅತ್ಯಲ್ಪ ಪ್ರಮಾಣದಲ್ಲಿರುವ ಹಾಗೂ ಶುದ್ಧ ಗಾಳಿ ಹೊಂದಿರುವ ದೇಶದ ಹತ್ತು ನಗರಗಳ ಪಟ್ಟಿಯಲ್ಲಿ ಚಿಕ್ಕಬಳ್ಳಾಪುರ ದೇಶದಲ್ಲಿಯೇ ಎರಡನೇ ಸ್ಥಾನದ ಹೆಗ್ಗಳಿಕೆಗೆ ಭಾಜನವಾಗಿದೆ.

ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು ಅಕ್ಟೋಬರ್‌ಗೆ ಸಂಬಂಧಿಸಿದಂತೆ ಬಿಡುಗಡೆ ಮಾಡಿರುವ ವರದಿಯಲ್ಲಿ ಈ ಅಂಶ ಪ್ರಸ್ತಾಪವಾಗಿದೆ. ಗಾಳಿಯ ಗುಣಮಟ್ಟದ ಸೂಚ್ಯಂಕ (ಎಕ್ಯುಐ) ಆಧರಿಸಿ ಈ ಸಮೀಕ್ಷೆ ಮಾಡಲಾಗುತ್ತದೆ.

ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು ಪ್ರತಿ ದಿನವೂ ಆಯಾ ನಗರದಲ್ಲಿ ಅಳವಡಿಸಿರುವ ಪರಿವೇಷ್ಟಕ ವಾಯು ಗುಣಮಟ್ಟ ಮಾಪನ ಕೇಂದ್ರದ ದತ್ತಾಂಶಗಳನ್ನು ಸಂಗ್ರಹಿಸಿ ವಾಯು ಮಾಲಿನ್ಯ ಅತ್ಯಲ್ಪ ಪ್ರಮಾಣದಲ್ಲಿರುವ ಹಾಗೂ ಶುದ್ಧ ಗಾಳಿ ಹೊಂದಿರುವ ನಗರಗಳ ಬಗ್ಗೆ ಮಾಹಿತಿ ಪ್ರಕಟಿಸುತ್ತದೆ. ಆ ಪ್ರಕಾರ  ಅ.21ರಂದು ಚಿಕ್ಕಬಳ್ಳಾಪುರ ನಗರವು 25 ಎಕ್ಯುಐ ಮೂಲಕ ದೇಶದಲ್ಲಿಯೇ ಎರಡನೇ ಸ್ಥಾನ ಪಡೆದಿದೆ.

ADVERTISEMENT

ಇದೇ ಅವಧಿಯಲ್ಲಿ ತಮಿಳುನಾಡಿನ ಮಧುರೈ ನಗರದ ಗಾಳಿಯ ಗುಣಮಟ್ಟದ ಸೂಚ್ಯಂಕವು 20 ಇತ್ತು. ದೇಶದಲ್ಲಿಯೇ ಶುದ್ಧ ಗಾಳಿ ಹೊಂದಿರುವ ಮೊದಲ ನಗರ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. 

ಮಂಡಳಿಯು ದೇಶದ ವಿವಿಧ ನಗರಗಳಲ್ಲಿನ ‘ಪರಿವೇಷ್ಟಕ ವಾಯು ಗುಣಮಟ್ಟ ಮಾಪನ ಕೇಂದ್ರ’ಗಳಲ್ಲಿ ದಾಖಲಾಗುವ ಧೂಳಿನ ಕಣಗಳ ಸಾಂದ್ರತೆ ಹಾಗೂ ಇತರ ಅಂಕಿ-ಅಂಶಗಳನ್ನು ಆಧರಿಸಿ ದೇಶದ ಎಲ್ಲಾ ನಗರಗಳಲ್ಲಿನ ಶುದ್ಧ ಗಾಳಿಯ ಗುಣಮಟ್ಟದ ಪ್ರಮಾಣವನ್ನು ನಿತ್ಯವೂ ಪರೀಕ್ಷಿಸುತ್ತದೆ. ನಿಯಮಿತವಾಗಿ ಸಮೀಕ್ಷೆ ಮಾಡಿ ವರದಿಯನ್ನು ಪ್ರಕಟಿಸುತ್ತದೆ. 

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಚಿಕ್ಕಬಳ್ಳಾಪುರ ನಗರದ ಜೂನಿಯರ್ ಕಾಲೇಜು ಆವರಣದಲ್ಲಿ ಪರಿವೇಷ್ಟಕ ವಾಯು ಗುಣಮಟ್ಟ ಮಾಪನ ಕೇಂದ್ರವನ್ನು ಸ್ಥಾಪಿಸಿದೆ. ಈ ಮಾಪನ ಕೇಂದ್ರದಲ್ಲಿ ದಾಖಲಾಗುವ ಮಾಹಿತಿಯನ್ನು ಪ್ರತಿ ದಿನವೂ ವಿಶ್ಲೇಷಣೆಗೆ ಒಳಪಡಿಸಿ ಈ ಸಮೀಕ್ಷಾ ವರದಿ ಪ್ರಕಟಿಸಲಾಗಿದೆ. 

ಈ ಮಾಹಿತಿಯಲ್ಲಿ ನಗರಗಳಲ್ಲಿನ ಅಂದಿನ ಗಾಳಿಯ ಗುಣಮಟ್ಟ ಉತ್ತಮ, ಮಧ್ಯಮ, ಕಳಪೆ, ತುಂಬಾ ಕಳಪೆ, ತೀವ್ರ ಕಳಪೆ ಎನ್ನುವ ವರ್ಗೀಕರಣವನ್ನು ಮಾಡಲಾಗುತ್ತದೆ. 0–500ರವರೆಗೆ ಆಯಾ ನಗರಗಳು ಹೊಂದಿರುವ ಎಕ್ಯುಐ ಆಧರಿಸಿ ಗುಣಮಟ್ಟ ವರ್ಗೀಕರಣ ನಡೆಯುತ್ತದೆ.

ಈ ಹಿಂದೆಯೂ ನಾಲ್ಕು ಮತ್ತು 7ನೇ ಸ್ಥಾನ: ಚಿಕ್ಕಬಳ್ಳಾಪುರ ನಗರವು ವಾಯು ಮಾಲಿನ್ಯ ಅತ್ಯಲ್ಪ ಪ್ರಮಾಣದಲ್ಲಿರುವ ಹಾಗೂ ಶುದ್ಧ ಗಾಳಿ ಹೊಂದಿರುವ ನಗರಗಳ ಪಟ್ಟಿಯಲ್ಲಿ ಆಗಾಗ್ಗೆ ಗುರುತಿಸಿಕೊಳ್ಳುತ್ತಿದೆ. 

2022ನೇ ಸಾಲಿನಲ್ಲಿ ಚಿಕ್ಕಬಳ್ಳಾಪುರ ನಗರ ರಾಷ್ಟ್ರದಲ್ಲಿ ನಾಲ್ಕನೇ ಸ್ಥಾನಪಡೆದಿತ್ತು. ಈ ವೇಳೆ ಗದಗ ನಗರ ಮೊದಲನೇ ಸ್ಥಾನ, ಮಡಿಕೇರಿ ಎರಡನೇ ಸ್ಥಾನ, ಚಿಕ್ಕಬಳ್ಳಾಪುರ ನಾಲ್ಕನೇ ಸ್ಥಾನ, ಹಾಸನ ಐದನೇ ಸ್ಥಾನ ಮತ್ತು ಚಾಮರಾಜನಗರ, ಚಿಕ್ಕಮಗಳೂರು ಯಾದಗಿರಿ ನಗರಗಳು ಕ್ರಮವಾಗಿ 7, 8 ಮತ್ತು 9ನೇ ಸ್ಥಾನಗಳನ್ನು ಪಡೆದಿದ್ದವು. 2021ರಲ್ಲಿಯೂ ಚಿಕ್ಕಬಳ್ಳಾಪುರವು ರಾಷ್ಟ್ರ ಮಟ್ಟದಲ್ಲಿ ಏಳನೇ ಸ್ಥಾನದ ಹೆಗ್ಗಳಿಕೆ ಪಡೆದಿತ್ತು.

ಚಿಕ್ಕಬಳ್ಳಾಪುರ ನಗರದ ಸುತ್ತಮುತ್ತ ಬೃಹತ್ ಪ್ರಮಾಣದ ಕೈಗಾರಿಕೆಗಳು ಇಲ್ಲ. ಸುತ್ತಲೂ ಬೆಟ್ಟಗುಡ್ಡದ ವಾತಾವರಣವಿದೆ. ಈ ಕಾರಣದಿಂದ ಚಿಕ್ಕಬಳ್ಳಾಪುರ ಗಾಳಿ ಉತ್ತಮವಾದುದು ಎಂದು ವಿಶ್ಲೇಷಿಸಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.