ADVERTISEMENT

ಚೇಳೂರು | ಮಳೆ ಬಂದರೆ ಪ್ರವಾಹ ಭೀತಿ: ರಾಜಕಾಲುವೆ ಸರ್ವೆ ಮಾಡಿದ್ದೇ ಇಲ್ಲ

ಕೆರೆ, ರಾಜಕಾಲುವೆ ಒತ್ತುವರಿ: ಭೂದಾಹಕ್ಕೆ ಜಲಮೂಲ ಬಲಿ

ಪ್ರಜಾವಾಣಿ ವಿಶೇಷ
Published 26 ಮೇ 2024, 5:56 IST
Last Updated 26 ಮೇ 2024, 5:56 IST
ರಾಜ ಕಾಲುವೆಯಲ್ಲಿ ಬೆಳೆದ ಗಿಡಗಳು
ರಾಜ ಕಾಲುವೆಯಲ್ಲಿ ಬೆಳೆದ ಗಿಡಗಳು   

ಚೇಳೂರು: ತಾಲ್ಲೂಕಿನ ಕೆರೆಗಳು ಮಾತ್ರವಲ್ಲದೆ ರಾಜಕಾಲುವೆಯೂ ಬಲಾಢ್ಯರು, ಪ್ರಭಾವಿಗಳ ಒತ್ತುವರಿಗೆ ನಲುಗುತ್ತಿವೆ. ಪಟ್ಟಣದ ವ್ಯಾಪ್ತಿಯಲ್ಲಿ ರಾಜಕಾಲುವೆ ನಿರಾತಂಕವಾಗಿ ಒತ್ತುವರಿಯಾಗಿದ್ದು ಈ ಬಗ್ಗೆ ಈಗಾಗಲೇ ಸ್ಥಳೀಯ ಸಂಸ್ಥೆಗಳಿಗೆ ಸಾಕಷ್ಟು ದೂರುಗಳು ಸಲ್ಲಿಕೆಯಾಗಿವೆ. 

ಆದರೆ, ಈ ಬಗ್ಗೆ ಸಮೀಕ್ಷೆಯಾಗಲಿ, ತನಿಖೆಯಾಗಲಿ, ಸೂಕ್ತ ಕ್ರಮವನ್ನಾಗಲಿ ತೆಗೆದುಕೊಳ್ಳುವಲ್ಲಿ ಅಧಿಕಾರಿಗಳು ವಿಫಲರಾಗುತ್ತಿದ್ದಾರೆ. ಇದುವರೆಗೂ ರಾಜಕಾಲುವೆ ನಕ್ಷೆಯ ಅನುಸಾರವಾಗಿ ಇದೆಯೇ, ಇಲ್ಲವೇ ಎಂದು ಸರ್ವೆಯಾಗಿಲ್ಲ ಎಂದು ಸ್ಥಳೀಯರು ಆರೋಪಿಸುತ್ತಾರೆ.

ಪಟ್ಟಣದ ಹೊರವಲಯದ ಪಶ್ಚಿಮ ದಿಕ್ಕಿನ ನಲ್ಲಗುಟ್ಟದಿಂದ ಪ್ರಾರಂಭವಾಗುವ ರಾಜಕಾಲುವೆ ಸುಮಾರು 2 ಕಿ.ಮೀ ಉದ್ದವಿದೆ. ಪೂರ್ವ ದಿಕ್ಕಿನ ಪಾಪಾಗ್ನಿ ನದಿಯ ಕೊನೆಗೆ ಅಂತ್ಯವಾಗುವ ಈ ಕಾಲುವೆಯು ಎಲ್ಲಿಯೂ ತನ್ನ ನಕ್ಷೆಯ ರೂಪದಂತೆ ಅಳತೆಯ ಅಗಲವನ್ನು ಹೊಂದಿಲ್ಲ. ಮಳೆಗಾಲದಲ್ಲಿ ತುಂಬಿ ಹರಿಯುವ ಈ ಕಾಲುವೆ ಒತ್ತುವರಿಯ ಪ್ರಭಾವದಿಂದ ತನ್ನ ಮೂಲ ರೂಪವನ್ನು ಕಳೆದುಕೊಂಡು ಅಕ್ಕಪಕ್ಕದ ಮನೆಗಳಿಗೆ ನೀರು ನುಗ್ಗುವುದು ಸರ್ವೇಸಾಮಾನ್ಯವಾಗಿದೆ. ಕಾಲುವೆ ತುಂಬಾ ಕಸ, ಕಡ್ಡಿ, ಮರಗಿಡಗಳು ಬೆಳೆದು ನಿಂತಿವೆ. ಸ್ವಚ್ಛತೆಗೆ ಆದ್ಯತೆ ನೀಡದೆ ತ್ಯಾಜ್ಯದಿಂದ ತುಂಬಿದೆ.

ADVERTISEMENT

ಚೇಳೂರಿನ ಪಟ್ಟಣದ ನಿವೇಶನಗಳ ಬೆಲೆ ದಿನೇದಿನೇ ಗಗನಕ್ಕೆರುತ್ತಲೇ ಇದೆ. 30X40 ಖಾಲಿ ಜಾಗ ಬೆಲೆ ಪ್ರಸ್ತುತ ₹30 ಲಕ್ಷದಿಂದ ₹40 ಲಕ್ಷಕ್ಕೆ ಹೋಗುತ್ತಿದೆ. ಇತ್ತೀಚಿಗೆ ಚೇಳೂರು ನೂತನ ತಾಲ್ಲೂಕಾಗಿದೆ. ಈ ಭಾಗದಲ್ಲಿ ಯಾವುದೇ ಶಾಶ್ವತ ಉದ್ಯೋಗ ಸಿಗುವ ಕಂಪನಿ, ಕೈಗಾರಿಕೆ ಇಲ್ಲವಾದ್ದರೂ ಭೂಮಿ ಬೆಲೆಯಂತೂ ಗಗನಕ್ಕೆ ತಲುಪಿದೆ. ಹೀಗಾಗಿ ಎಲ್ಲೆಂದರಲ್ಲಿ ಒತ್ತುವರಿ ಸಾಮಾನ್ಯ ಎಂಬಂತಾಗಿದೆ.

ರಾಜಕಾಲುವೆ ಒತ್ತುವರಿ ತೆರವಿಗೆ ಸಂಬಂಧಿಸಿದಂತೆ ಅಧಿಕಾರಿಗಳು ಇದುವರೆಗೂ ಯಾವುದೇ ಮುತುವರ್ಜಿ ವಹಿಸಿಲ್ಲ. ಅಧಿಕಾರಿಗಳೊಂದಿಗೆ ಶಾಸಕರು ಕೈಜೋಡಿಸಿ ಒತ್ತುವರಿ ತೆರವುಗೊಳಿಸಿ ಜಲಮೂಲಗಳಿಗೆ ಮತ್ತಷ್ಟು ಜೀವ ನೀಡುವ ಕೆಲಸಕ್ಕೆ ಮುಂದಾಗಬೇಕಿದೆ ಎಂದು ಪಟ್ಟಣದ ಜನರ ಮನವಿಯಾಗಿದೆ.

ಪ್ರವಾಹದ ಭೀತಿ: ರಾಜಕಾಲುವೆ ಏಕರೂಪವಾಗಿಲ್ಲ. ಬಹುತೇಕ ಕಡೆ ಕಿರಿದಾಗಿದ್ದು, ಹಲವೆಡೆ ಕಾಲುವೆಗಳು ತನ್ನ ಸ್ವರೂಪವನ್ನೇ ಕಳೆದುಕೊಂಡಿವೆ. ಕಿರು ಚರಂಡಿಗಳು ದ್ವಿತೀಯ ಹಂತದ ಕಾಲುವೆಗಳ ಮೂಲಕ ಪ್ರಾಥಮಿಕ ಹಂತದ ರಾಜಕಾಲುವೆಗೆ ಸಂಪರ್ಕ ಕಲ್ಪಿಸುತ್ತವೆ. ನದಿಗೆ ನೀರು ಹರಿಸುವ ಕೆಲಸವನ್ನು ನಿರ್ವಹಿಸುತ್ತಿರುವ ರಾಜಕಾಲುವೆಗಳು ಒತ್ತುವರಿಯಾಗಿರುವುದರಿಂದ ಮಳೆ ನೀರಿನ ಸರಾಗ ಹರಿವಿಗೆ ತೊಡಕಾಗಿದೆ.

ರಾಜ ಕಾಲುವೆಯಲ್ಲಿ ಬೆಳೆದ ಗಿಡಮರಗಳು
ಕಾಲುವೆಯಲ್ಲಿ ಕಸ ಕಡ್ಡಿ
ರಾಜ ಕಾಲುವೆಯಲ್ಲಿ ಬೆಳೆದ ಗಿಡಮರಗಳು
ಮೇಲಧಿಕಾರಿಗಳ ಮಾರ್ಗದರ್ಶನ ಪಡೆದು ಜಲ ಮೂಲ ಉಳಿಸುವ ಸಲುವಾಗಿ ಗ್ರಾಮ ಪಂಚಾಯಿತಿ ಆದ್ಯತೆ ಮೇರೆಗೆ ಸಾರ್ವಜನಿಕ ಸಹಕಾರದೊಂದಿಗೆ ಕಾರ್ಯನಿರ್ವಹಿಸಲಿದೆ
ವೆಂಕಟಾಚಲಪತಿ, ಪಿಡಿಒ
ಪಟ್ಟಣದ ರಾಜಕಾಲುವೆ ತೀರಾ ಚಿಕ್ಕದಾಗಿದ್ದು ಮಳೆ ನೀರು ಬಂದಾಗ ರಸ್ತೆ ಮೇಲೆ ಹರಿದು ತೊಂದರೆ ಅನುಭವಿಸುವಂತಾಗಿದೆ. ಅಧಿಕಾರಿಗಳೊಂದಿಗೆ ಶಾಸಕರು ಕೈಜೋಡಿಸಿ ಒತ್ತುವರಿ ತೆರವುಗೊಳಿಸುವ ಮೂಲಕ ಜಲಮೂಲಗಳಿಗೆ ಜೀವ ನೀಡಬೇಕು
ಸಂಪಂಗಿ ಶ್ರೀನಿವಾಸ, ಚೇಳೂರು
ಚೇಳೂರಿನ ರಾಜಕಾಲುವೆ ಸಂಪೂರ್ಣ ಒತ್ತುವರಿಯಾಗಿದೆ. ಕಾಲುವೆಗಳ ಮೇಲೆ ಬೃಹತ್ ಕಟ್ಟಡ ನಿರ್ಮಾಣ ಮಾಡಿ ವಾಣಿಜ್ಯ ಬಳಕೆಗೆ ಮಾರ್ಪಾಡು ಮಾಡಲಾಗಿದೆ. ಇಲಾಖೆ ಸ್ಥಳೀಯ ಸಂಸ್ಥೆಗಳು ಕಾಲುವೆಯನ್ನು ಸಂರಕ್ಷಿಸಿ ನೀರಿನ ಹರಿವಿಗೆ ಅವಕಾಶ ಮಾಡಿಕೊಡಬೇಕು
ವೆಂಕಟರವಣಪ್ಪ ಸ್ಥಳೀಯ ನಿವಾಸಿ

ಒತ್ತುವರಿದಾರರ ಪಾಲು

ದಶಕಗಳ ಹಿಂದೆ ಮಳೆ ನೀರಿನ ಹರಿವಿಗೆ ಪ್ರತ್ಯೇಕ ನಾಲೆಗಳಿದ್ದವು. ನಗರೀಕರಣದ ಆಲೋಚನೆಗಳಿಂದ ರಾಜಕಾಲುವೆಗಳಾಗಿ ಮಾರ್ಪಟ್ಟಿರುವ ನಾಲೆಗಳು ಮಳೆ ನೀರಿನೊಂದಿಗೆ ಕೊಳಚೆಯನ್ನೂ ತುಂಬಿಕೊಂಡು ಸಾಗುತ್ತಿವೆ. ಹೀಗಾಗಿ ಪಟ್ಟಣದ ನದಿಗಳು ಕೆರೆಗಳು ಕಲುಷಿತಗೊಂಡಿವೆ. ಕೆರೆ ಅಚ್ಚುಕಟ್ಟು ಪ್ರದೇಶಗಳು ಮತ್ತು ರಾಜಕಾಲುವೆಗಳು ಒತ್ತುವರಿದಾರರ ಪಾಲಾಗಿವೆ. ಕೆಲವೆಡೆ ಕಾಲುವೆ ಜಾಗವನ್ನು ನಿವೇಶನಗಳನ್ನಾಗಿ ಮಾಡಿಕೊಂಡಿದ್ದಾರೆ. ಕಾಲುವೆ 3.5 ಮೀಟರ್‌ನಿಂದ 15 ಮೀಟರ್ ವಿಸ್ತಾರವಾಗಿರಬೇಕು. ಆದರೆ ಎಲ್ಲಿಯೂ ನಕ್ಷೆಯಂತೆ ಇಷ್ಟು ಅಗಲದ ರಾಜಕಾಲುವೆ ಕಣ್ಣಿಗೆ ಬೀಳುವುದೇ ಇಲ್ಲ. ನಾರಾಯಣಪ್ಪ ಚೇಳೂರು ಪರಿಶೀಲನೆ ಮಾಡಲಾಗುವುದು ಈಗಾಗಲೇ ಮಳೆಗಾಲಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಪ್ರತಿವಾರ ಸಭೆ ನಡೆಸುತ್ತಿದ್ದಾರೆ. ರಾಜಕಾಲುವೆ ಸಂಬಂಧಿಸಿದಂತೆ ಮುರಿದಿರುವ ಮೋರಿ ಮತ್ತಿತರ ಒತ್ತುವರಿ ಸಮಸ್ಯೆಗಳನ್ನು ಪರಿಶೀಲನೆ ಮಾಡಲಾಗುವುದು. ಚೇಳೂರು ಪಟ್ಟಣಕ್ಕೆ ಸಂಬಂಧಿಸಿದಂತೆ ರಾಜಕಾಲುವೆ ಒತ್ತುವರಿ ಮಾಡಿಕೊಂಡಿರುವುದು ಗಮನಕ್ಕೆ ಬಂದಿಲ್ಲ. ರಾಜಕಾಲುವೆ ಮತ್ತು ಕೆರೆ ಎಷ್ಟು ಇವೆ ಎಂಬ ಮಾಹಿತಿ ಪಡೆದು ಸಮಸ್ಯೆ ಇತ್ಯರ್ಥ ಮಾಡಲಾಗುವುದು.‌ ಸುಜಾತ ಚೇಳೂರು ತಹಶಿಲ್ದಾರ್ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.